ಬೆಂಗಳೂರು: ಕಾಲ ಬದಲಾದಂತೆ ದುಡ್ಡಿನ ಮೌಲ್ಯ ಕಡಿಮೆಯಾಗಿದೆ ಎನ್ನುವುದು ಸುಳ್ಳಲ್ಲ. ಹಿಂದೆ 1-2 ರೂಪಾಯಿಗೆ ಕೊಳ್ಳುತ್ತಿದ್ದ ವಸ್ತುಗಳನ್ನು ಈಗ 100-200 ರೂಪಾಯಿ ಕೊಟ್ಟು ಕೊಳ್ಳುತ್ತಿರುವುದೇ ಅದಕ್ಕೆ ಸಾಕ್ಷಿ. ಇದೀಗ ಅದಕ್ಕೆ ನಿದರ್ಶನ ಎನ್ನುವಂತೆ 1987ರ ದಾಖಲೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ. ಆ ಕಾಲದಲ್ಲಿ ಗೋಧಿಯನ್ನು ರೈತರು ಎಷ್ಟು ಬೆಲೆಗೆ ಮಾರುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ ಆ ದಾಖಲೆಯಾಗಿದೆ.
ಭಾರತೀಯ ಅರಣ್ಯಾಧಿಕಾರಿಯಾಗಿರುವ ಪ್ರವೀಣ್ ಕಾಸ್ವಾನ್ ಅವರು ಅಂತದ್ದೊಂದು ದಾಖಲೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರೈತರಾಗಿದ್ದ ಅವರ ತಾತ ಗೋಧಿಯನ್ನು ಸರ್ಕಾರ ಆಹಾರ ನಿಗಮಕ್ಕೆ ಮಾರಾಟ ಮಾಡುತ್ತಿದ್ದರಂತೆ. ಆಗ ಅವರಿಗೆ ಕೆ.ಜಿ.ಗೆ ಕೇವಲ 1 ರೂ. 6೦ ಪೈಸೆಗೆ ಸಿಗುತ್ತಿತ್ತು. ಆ ರೀತಿ ನಿಗಮಕ್ಕೆ ಗೋಧಿ ಮಾರಾಟ ಮಾಡಿದ್ದರ ರಶೀದಿ (ಜೆ ಫಾರ್ಮ್) ಅನ್ನು ಪ್ರವೀಣ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಅಜ್ಜನಿಗೆ ಎಲ್ಲ ದಾಖಲೆಯನ್ನೂ ಇಟ್ಟುಕೊಳ್ಳುವ ಅಭ್ಯಾಸವಿತ್ತು. 40 ವರ್ಷಗಳ ಕಾಲ ಅವರು ಬೆಳೆ ಮಾರಾಟ ಮಾಡಿದ್ದರ ರಶೀದಿ ನಮ್ಮ ಮನೆಯಲ್ಲಿ ಜೋಪಾನವಾಗಿದೆ” ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: Viral story | ಕಣ್ಣು, ಮೂಗು, ಬಾಯಿಯೆಲ್ಲ ಹಿಮ ಮೆತ್ತಿಕೊಂಡು ಫ್ರೀಝ್ ಆದ ಜಿಂಕೆಯ ರಕ್ಷಣೆ!
ಈ ರಶೀದಿ ಇದೀಗ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದೆ. ಜನರು ಆಗಿನ ಕಾಲದಲ್ಲಿ ಗೋಧಿಗಿದ್ದ ಬೆಲೆಯ ಬಗ್ಗೆ ಆಶ್ಚರ್ಯ ಹೊರಹಾಕಲಾರಂಭಿಸಿದ್ದಾರೆ. ಹಾಗೆಯೇ ಪ್ರವೀಣ್ ಅವರ ಅಜ್ಜ ದಾಖಲೆಗಳನ್ನು ಜೋಪಾನವಾಗಿ ಕಾಪಿಟ್ಟುಕೊಂಡಿದ್ದರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಜೆ ಫಾರ್ಮ್‌ನಲ್ಲಿ ೧೬೪ ರೂ. ಎಂದು ಬರೆಯಲಾಗಿದೆಯಲ್ಲಾ ಎಂದು ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅದು ಒಂದು ಕ್ವಿಂಟಲ್‌ನ ಮೊತ್ತ ಎಂದು ಹೇಳಿದ್ದಾರೆ ಪ್ರವೀಣ್.
ಕೆಲವು ನೆಟ್ಟಿಗರು ಆಗ ಕೆಜಿ ಗೋಧಿಗೆ ೧.೬ ರೂ. ಇತ್ತು. ಈಗ ೩೫ ವರ್ಷಗಳ ಬಳಿಕ ೨೭ ರೂ. ಆಗಿದೆ. ಅದೇನೂ ದೊಡ್ಡ ಬೆಳವಣಿಗೆ ಅಲ್ಲ ಎಂದಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಭಾರತಕ್ಕೆ ಗೋಧಿ ಆಮದು ಪ್ರಮಾಣದಲ್ಲಿ ಕುಸಿತ ಕಂಡುಬಂದಿತ್ತು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗೋಧಿಯ ಬೆಲೆ ಕೆ.ಜಿ.ಗೆ 36.98 ರೂಪಾಯಿಗೆ ಏರಿ ದಾಖಲೆ ಬರೆದಿತ್ತು.
ಕೆಲವು ದಿನಗಳ ಹಿಂದೆ ಗದಗ ರೈತರೊಬ್ಬರು ಈರುಳ್ಳಿಗೆ ತಮ್ಮಲ್ಲಿ ಬೆಲೆ ಇಲ್ಲ ಎಂದು ೪೧೫ ಕಿ.ಮೀ. ದೂರದ ಬೆಂಗಳೂರಿಗೆ ತಂದಿದ್ದರು. ಆದರೆ, ಇಲ್ಲೂ ಅವರಿಗೆ ಸಿಕ್ಕಿದ್ದು ಬರೀ ೮ ರೂ. ೩೬ ಪೈಸೆ. ಈ ವಿಚಾರವೂ ಭಾರಿ ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: Viral Video | ಕಾಂಗ್ರೆಸ್ ಶಾಸಕನ ಪುಂಡಾಟ; ಹೊಸ ವರ್ಷದ ಪಾರ್ಟಿಯಲ್ಲಿ ಜನರ ಮಧ್ಯೆ ಡ್ಯಾನ್ಸ್ ಮಾಡುತ್ತ ಗಾಳಿಯಲ್ಲಿ ಗುಂಡು