ಇಂಗ್ಲೆಂಡಿನ ನಾರ್ತಂಪ್ಟನ್ ಪಟ್ಟಣದ ಚೆಲುವೆಯೊಬ್ಬಳು ಅಜ್ಜಿಯಾದ ಕಥೆ ಇದು. ಎಲ್ಲ ಚೆಲುವೆಯರೂ ಒಂದಲ್ಲ ಒಂದು ದಿನ ಅಜ್ಜಿಯಾಗುತ್ತಾರೆ, ಇದರಲ್ಲೇನು ವಿಶೇಷ ಅಂತೀರಾ? ಕಥೆ ಇರುವುದೇ ಇಲ್ಲಿ. ಎಲ್ಲ ಚೆಲುವೆಯರಿಗೂ ಮಕ್ಕಳಾಗುವ ವಯಸ್ಸಿನಲ್ಲಿ, ಈಕೆಯ ಮಗಳು ಬಸುರಿಯಾಗಿ ಮಗುವನ್ನೂ ಹೆತ್ತಿದ್ದಾಳೆ. ಹೀಗಾಗಿ ಈಕೆ ೩೩ನೇ ವಯಸ್ಸಿನಲ್ಲೇ ಅಜ್ಜಿ!
ಇದು ಕೆಲ್ಲೀ ಜ್ಯಾಕ್ಸನ್ ಎಂಬ ಸುಂದರಿಯ ಕಥೆ! ಅಧಿಕೃತವಾಗಿ ಅಜ್ಜಿಯ ಸ್ಥಾನಕ್ಕೇರಿರುವ ಈಕೆಯನ್ನು ನೋಡಿದರೆ ಜನರಿಗೆ ಆಶ್ಚರ್ಯವಾಗುತ್ತದಂತೆ. ಯಾಕೆಂದರೆ, ಈಕೆಗೆ ಐದು ಮಕ್ಕಳು ನಾಲ್ಕು ಮೊಮ್ಮಕ್ಕಳೂ ಇವೆ. ಆದರೆ ಈಕೆಯ ವಯಸ್ಸು ಈಗ ೩೭. ಈಕೆ ತನ್ನ ೨೧ರ ಹರೆಯದ ಮಗಳು, ಮೊಮ್ಮಕ್ಕಳೊಂದಿಗೆ ನಡೆದು ಹೋಗುತ್ತಿದ್ದರೆ, ಅಕ್ಕತಂಗಿಯರು ಎಂದು ಜನ ಕನ್‌ಫ್ಯೂಸ್ ಮಾಡಿಕೊಳ್ಳುತ್ತಾರಂತೆ. ಅಮ್ಮನೂ ಮಗಳೂ ಒಂದೇ ಹಾಗೆ ಕಾಣುತ್ತಾರೆ ಕೂಡಾ!
ಈಕೆ ಹೇಳುವಂತೆ, ೧೪ನೇ ವಯಸ್ಸಿಗೆ ಈಕೆ ಗರ್ಭಿಣಿಯಾಗಿ, ೧೫ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದಾದ ಮೇಲೆ ಮೂರು ಮಕ್ಕಳು ಜನಿಸಿ ಒಟ್ಟಾರೆ ಈಕೆಗೆ ಇದೀಗ ಐದು ಮಕ್ಕಳಿವೆ. ಮೊದಲ ಅವಳಿ ಹೆಣ್ಣು ಮಕ್ಕಳಾದ ಜೇಡ್ ಹಾಗೂ ಜೆರ್ರಿಯ ನಂತರ ಮೂರು ಗಂಡು ಮಕ್ಕಳು ಈಕೆಗೆ ಜನಿಸಿವೆ. ಈಗ ಈಕೆಯ ಹಿರಿಯ ಪುತ್ರಿಯರಲ್ಲಿ ಜೇಡ್‌ಗೆ ಒಬ್ಬ ನಾಲ್ಕು ವರ್ಷದ ಹೆಣ್ಣು ಮಗಳೂ, ಮೂರರ ಹರೆಯದ ಗಂಡು ಮಗುವೂ ಇದೆ. ಈಕೆಯ ಮತ್ತೊಬ್ಬ ಪುತ್ರಿ ಜೆರ್ರಿಗೆ ಎರಡು ವರ್ಷದ ಗಂಡು ಮಗುವೂ, ಮೂರು ತಿಂಗಳ ಹೆಣ್ಣು ಮಗುವೂ ಇವೆ.
ವಿಚಿತ್ರವೆಂದರೆ, ಕೆಲ್ಲೀ ಅಜ್ಜಿಯ ಕಿರಿಯ ಮಗ ಈಗಷ್ಟೆ ಮಾಂಟೆಸ್ಸರಿಗೆ ಹೋಗುತ್ತಿದ್ದಾನೆ. ಈಕೆಯ ಮಗಳ ಮಗನೂ ಅದೇ ಮಾಂಟೆಸ್ಸರಿಗೆ ಹೋಗುತ್ತಿದ್ದಾನಂತೆ. ಅಮ್ಮ ಮಗಳು ಇಬ್ಬರೂ ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಬಿಡಲು, ಕರೆದುಕೊಂಡು ಬರಲು ಜೊತೆಯಾಗಿ ಹೋಗುತ್ತಾರೆ. ಆದರೆ ಯಾರೂ, ಅಮ್ಮ ಮಗಳು ಇವರು ಎಂದು ಅಂದುಕೊಳ್ಳುವುದಿಲ್ಲವಂತೆ. ಒಂದೇ ತರಹ ಕಾಣುವ ಈ ಅಮ್ಮ ಮಗಳು ಎಲ್ಲರ ಕಣ್ಣಿಗೂ ಅಕ್ಕ ತಂಗಿಯರಂತೆ ಕಾಣುತ್ತಾರೆ. ಕೇವಲ ಕಾಣುವುದು ಮಾತ್ರವಲ್ಲ, ತನ್ನ ಹೆಣ್ಣುಮಕ್ಕಳ ಜೊತೆಗೆ ಕೆಲ್ಲೀ ನಿಜಕ್ಕೂ ಬಹಳ ಫ್ರೆಂಡ್ಲೀ ಅಂತೆ. ನಾವು ಗೆಳತಿಯರಂತೆ, ಅಕ್ಕತಂಗಿಯರಂತೆ ಜೊತೆಯಾಗಿ ಎಲ್ಲವನ್ನೂ ಎಂಜಾಯ್ ಮಾಡುತ್ತೇವೆ ಎನ್ನುತ್ತಾರೆ.
ನನ್ನ ಹೆಣ್ಣು ಮಕ್ಕಳಿಬ್ಬರೂ ಹೈಸ್ಕೂಲು ಓದುವಾಗ ಯಾರೂ ನನ್ನ ಮಕ್ಕಳೆಂದು ಹೇಳಿದರೆ ನಂಬುತ್ತಿರಲಿಲ್ಲ. ʻಅಯ್ಯೋ ದೇವರೇ, ಇವರು ನಿನ್ನ ಮಕ್ಕಳಾ? ಸುಳ್ಳು ಹೇಳಬೇಡʼ ಎನ್ನುತ್ತಿದ್ದರು. ಇಂಥಾ ಮಾತು ಕೇಳಿದಾಗ ಖುಷಿಯಾಗುವ ಜೊತೆಗೆ ಬೇಸರವೂ ಆಗುತ್ತಿತ್ತು ಎನ್ನುತ್ತಾಳೆ ಕೆಲ್ಲೀ.
ಇದನ್ನೂ ಓದಿ: ತ್ರಿವರ್ಣ ಧ್ವಜಕ್ಕೆ ಮಾರ್ಜಾಲದ ಮುತ್ತು ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್
ಇಂಗ್ಲೆಂಡಿನಲ್ಲಿ ಅತ್ಯಂತ ಕಡಿಮೆ ಮಯಸ್ಸಿನಲ್ಲಿ ಅಜ್ಜಿಯಾದ, ಅಂದರೆ ೩೩ಕ್ಕೆ ಅಜ್ಜಿಯಾಗಿ ಭಡ್ತಿ ಹೊಂದಿದ ಮಹಿಳೆಯರಲ್ಲಿ ಈಕೆ ಒಬ್ಬರಾಗಿದ್ದು, ಈಕೆ ಅಜ್ಜಿಯಾಗುತ್ತಿದ್ದಾಳೆ ಎಂಬ ಸುದ್ದಿ ತಿಳಿದ ಕ್ಷಣವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತಾಳೆ. ʻನಾನು ನನ್ನ ನಾಲ್ಕು ದಿನದ ಮಗನಿಗೆ ಹಾಲುಣಿಸುತ್ತಾ ಸೋಫಾ ಮೇಲೆ ಕೂತಿದ್ದರೆ, ನನ್ನ ೧೭ರ ಹರೆಯದ ಹಿರಿ ಮಗಳು ಬಂದು ನಾನು ಗರ್ಭಿಣಿ ಎಂದಳು. ನನಗೆ ಕೇಳಿ ಸಂತೋಷವಾಗುವ ಬದಲು ಶಾಕ್ ಆಯಿತು. ಆದರೆ, ನಾನೇ ಬಹಳ ಸಣ್ಣ ವಯಸ್ಸಿನಲ್ಲಿ ತಾಯಿಯಾದವಳು ಎಂದ ಮೇಲೆ ನಮ್ಮ ಮಗಳಿಗೆ ಬೈಯುವ ಅಧಿಕಾರ ನನಗೆಲ್ಲಿದೆ? ಹಾಗಾಗಿ ಏನೂ ಮಾತಾಡಲಿಲ್ಲ. ಸಹಜವಾಗಿಯೇ ಸ್ವೀಕರಿಸಿದೆ. ಆದರೆ ಖಂಡಿತವಾಗಿಯೂ ಎಲ್ಲ ತಾಯಂದಿರಿಗೆ ತಮ್ಮ ಮಕ್ಕಳು ಗರ್ಭಿಣಿಯರಾದಾಗ ಆಗುವ ಖುಷಿ ನನಗಾಗ ಆಗಿರಲಿಲ್ಲʼ ಎನ್ನುತ್ತಾಳೆ.
ಈಗ ಈಕೆಯ ಕಿರಿ ಮಗನಿಗೂ ಮೊಮ್ಮಗನಿಗೂ ಕೇವಲ ಒಂದೇ ವರ್ಷದ ವ್ಯತ್ಯಾಸ. ಈಕೆ ಹೇಳುವಂತೆ, ʻಇದು ನಿಜವಾಗಿಯೂ ಕಷ್ಟದ ಸಂದರ್ಭವೇ. ಆದರೆ, ಅಜ್ಜಿಯಾಗಿ ಅನುಭವಿಸುವ ಸೂಕವನ್ನು ಸಣ್ಣ ವಯಸ್ಸಿನಲ್ಲೇ ಪಡೆಯುತ್ತಿದ್ದೇನೆ. ನಾವೆಲ್ಲರೂ ಸೇರಿ ಬಹಳ ಎಂಜಾಯ್ ಮಾಡುತ್ತೇವೆ. ಅಜ್ಜಿಯಾಗಿ ನನ್ನ ಕರ್ತವ್ಯಗಳನ್ನೂ ಸುಲಭವಾಗಿ ಮಾಡಲಾಗುತ್ತಿದೆ. ಸಣ್ಣ ವಯಸ್ಸಿಗೇ ತಾಯಿ, ಅಜ್ಜಿಯಾಗುವುದು ಎಂದರೆ ವಿಚಿತ್ರವಾಗಿ ನೋಡಬೇಕಾಗಿಲ್ಲ. ಅತ್ಯಂತ ಹೆಚ್ಚು ಎನರ್ಜಿಯೊಂದಿಗೆ ಬದುಕು ನಡೆಸುವುದು ಅಷ್ಟೇʼ ಎಂದು ವಿವರಿಸುತ್ತಾಳೆ.
ಇನ್ನೂ ೨೫ರ ಹರೆಯದ ಯುವತಿಯಂತೆ ಕಾಣುವ ೩೭ರ ಕೆಲ್ಲೀ, ತಾನು ೧೫ರ ವಯಸ್ಸಿನಲ್ಲಿ, ತನ್ನ ೧೬ರ ವಯಸ್ಸಿನ ಸಂಗಾತಿಯ ಜೊತೆಗೆ ಅವಳಿ ಮಕ್ಕಳನ್ನು ಬೆಳೆಸಲು ಪಟ್ಟ ಶ್ರಮವನ್ನು ನೆನೆಸಿಕೊಂಡು, ಆಗ ಇದು ಎಷ್ಟು ಕಷ್ಟದ ಕೆಲಸವಾಗಿತ್ತು, ಆದರೆ ಈಗ ಒಮ್ಮೆ ಹಿಂತಿರುಗಿ ನೋಡಿದರೆ ಖುಷಿಯಾಗುತ್ತದೆ ಎಂದಿದ್ದಾಳೆ.
ಇದನ್ನೂ ಓದಿ: Flag Hoisting | ಸರ್ಕಾರಿ ಶಾಲೆಯಲ್ಲಿ ಉಲ್ಟಾ ಬಾವುಟ ಹಾರಿಸಿದ ವಿಡಿಯೊ ವೈರಲ್