ಜಗತ್ತಿನೆಲ್ಲೆಡೆ ಬಾಡಿಗೆ ತಾಯ್ತನದ (surrogacy) ಮೂಲಕ ಮಕ್ಕಳ ಪಡೆದ ತಾಯಂದಿರ ಬಗೆಗಿನ ಸುದ್ದಿ ಕೇಳುತ್ತೇವೆ. ಇತ್ತೀಚೆಗೆ ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿರುವುದೂ ಕೂಡಾ ಸಾಮಾನ್ಯವಾಗಿದ್ದು, ಇದು ಹೆಚ್ಚು ಸುದ್ದಿಯಲ್ಲಿದೆ. ಆದರೆ, ಇಲ್ಲೊಂದು ವಿಶೇಷ ಸುದ್ದಿಯಿದೆ. ಇಲ್ಲಿ ಬಾಡಿಗೆ ತಾಯಿಯಾಗಿದ್ದು ಸ್ವತಃ ಅತ್ತೆಯೇ! ಅಂದರೆ ಮಗುವಿಗೆ ಅಜ್ಜಿಯಾಗಬೇಕಾಗಿದ್ದ ತನ್ನ ಗಂಡನ ತಾಯಿಯೇ ಇಲ್ಲಿ ಮಗುವಿಗೆ ತಾಯಿಯೂ ಆಗಿದ್ದಾಳೆ.
ಜೆಫ್ ಹಾಕ್ ಮೂಲತಃ ವೆಬ್ ಡಿಸೈನರ್. ಈತ ಹಾಗೂ ಈತನ ಪತ್ನಿ ಕೇಂಬ್ರಿಯಾಗೆ ಮಗು ಬೇಕಾಗಿತ್ತು. ಆದರೆ, ಈತನ ಪತ್ನಿಗೆ ಹಿಸ್ಟರೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿರುವುದರಿಂದ ಹಾಗೂ ಇದರ ಮೂಲಕ ಗರ್ಭಕೋಶವನ್ನೇ ತೆಗೆಯಬೇಕಾದ ಕಾರಣ, ಮಕ್ಕಳನ್ನು ಪಡೆಯಲು ಇವರಿಗೆ ಹೆಚ್ಚಿನ ಮಾರ್ಗಗಳಿರಲಿಲ್ಲ. ಈ ಬಗ್ಗೆ ಬಹಳ ಚಿಂತಿತರಾಗಿದ್ದ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ನಿರ್ಧರಿಸಿದರು. ಆಗ ತನ್ನ ಮಗುವನ್ನು ಒಂಬತ್ತು ತಿಂಗಳು ಹೊತ್ತು ಹೆರಲು ಬಯಸಿದ್ದು ತನ್ನದೇ ಅಮ್ಮನನ್ನು. ಹೀಗಾಗಿ ತನ್ನ ಮಗನ ಮಗುವನ್ನು ತನ್ನ ಮಗನಿಗಾಗಿ ಒಂಬತ್ತು ತಿಂಗಳು ಹೊರುವ ಭಾಗ್ಯ ಅಮ್ಮನಿಗೆ ಲಭಿಸಿದೆ. 56ರ ವಯಸ್ಸಿನಲ್ಲಿ ಅಜ್ಜಿಯಾಗಬೇಕಿದ್ದವಳು ತಾಯಿಯೂ ಆಗಿದ್ದಾಳೆ.
ಅಂದಹಾಗೆ ಜೆಫ್ ಅಮ್ಮ ನ್ಯಾನ್ಸಿ ಹಾಕ್ ತಾನೇ ತಾನಾಗಿ, ತನ್ನ ಸೊಸೆಯ ಕಷ್ಟನ ನೋಡಿ, ಬೇರೆಯವರು ಬಾಡಿಗೆ ತಾಯಾಗುವ ಬದಲು ತಾನೇ ಆಗುತ್ತೇನೆ ಎಂದು ತನ್ನ ಮಗನೆದುರು ತನ್ನ ನಿರ್ಧಾರ ಮುಂದಿಟ್ಟಾಗ ಮಗ ಇದು ಸಾಧ್ಯವಾಗುವುದೆಂದು ಅಂದುಕೊಂಡಿರಲಿಲ್ಲವಂತೆ. ಆತನಿಗೆ ಆರಂಭದಲ್ಲಿ ಕಷ್ಟವೆನಿಸಿದರೂ, ವೈದ್ಯರ ಜೊತೆ ಮಾತುಕತೆಗಳಾಗಿ, ಕೊನೆಗೂ ಇದಕ್ಕೆ ಸಹಮತ ವ್ಯಕ್ತಪಡಿಸಲಾಯ್ತಂತೆ. ಯಾಕೆಂದರೆ ಜೆಫ್ ಅಮ್ಮನ ವಯಸ್ಸು 56 ವರ್ಷ.
ಯಾರಿಗೆ ತಮ್ಮ ಅಮ್ಮನೇ ಹೆರುವುದನ್ನು ನೋಡುವ ಅವಕಾಶ ಸಿಗುತ್ತದೆ ಹೇಳಿ ಎಂದು ಆತ ಹೇಳಿಕೊಂಡಿದ್ದು, ಇದೊಂದು ಹೃದಯಸ್ಪರ್ಶಿ ಅನುಭವ. ತುಂಬ ಸಂತಸದ ಗಳಿಗೆ ಎಂದು ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.
ನ್ಯಾನ್ಸಿ ಹಾಕ್ ಕೂಡಾ ಖುಷಿ ವ್ಯಕ್ತಪಡಿಸಿದ್ದು, ಇದೊಂಥರ ವಿಚಿತ್ರವಾದ ಖುಷಿ. ಶಬ್ದಗಳಲ್ಲಿ ಹೇಳಲಾಗದು. ಜೀವನದ ಬಹಳ ಆನಂದದ ಕ್ಷಣಗಳು. ಈ ಬಾರಿ ಮಗುವನ್ನು ಹೆರುವುದೊಂದು ದಿವ್ಯ ಅನುಭೂತಿ ಎನಿಸಿತು ಎಂದಾಕೆ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Viral Video : ಹುಲಿ ಬೇಟೆಯನ್ನು ಕದಿಯಲು ನೋಡಿದ ಹೆಣ್ಣು ಹುಲಿ! ಮುಂದೇನಾಯ್ತು?
ಹುಟ್ಟಿದ ಹೆಣ್ಣು ಮಗುವಿನ ಅಜ್ಜಿಯಾಗಿಯೂ, ಅಮ್ಮನಾಗಿಯೂ ಆದ ಸಂತಸ ಅಷ್ಟಿಷ್ಟಲ್ಲ. ಮಗುವಿಗೆ ಹನ್ನಾ ಎಂದು ನಾಮಕರಣ ಮಾಡಲಾಗಿದೆ ಎಂದಾಕೆ ಹೇಳಿಕೊಂಡಿದ್ದಾಳೆ.
ಈಕೆಗೆ ಹೆರಿಗೆ ಮಾಡಿಸಿರುವ ವೈದ್ಯ ಡಾ ರಸೆಲ್ ಪೋಕ್ ಹೇಳಿರುವ ಪ್ರಕಾರ, ಮಗುವಿಗೆ ಸಂಬಂಧದಲ್ಲಿ ಅಜ್ಜಿಯಾಗಬೇಕಿರುವವರೇ ಬಾಡಿಗೆ ತಾಯಿಯಾಗುವುದು ಸ್ವಲ್ಪ ವಿಚಿತ್ರ ಅಂತನಿಸುವುದು ಸಹಜ. ಅಪೂರದ ಪ್ರಕರಣ ಕೂಡಾ. ಮುಖ್ಯವಾಗಿ ವಯಸ್ಸು ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ಆರೋಗ್ಯ ಕೂಡಾ. ನ್ಯಾನ್ಸಿ ಅವರ ಆರೋಗ್ಯ ಚೆನ್ನಾಗಿತ್ತು. ಹೀಗಾಗಿ ಆಕೆಯ ಮನವಿಯನ್ನು ವಿವಿಧ ಪರೀಕ್ಷೆಗಳ ನಂತರ ಸ್ವೀಕರಿಸಿ ಆಕೆಯನ್ನೇ ಬಾಡಿಗೆ ತಾಯಿಯಾಗಿಸಲು ತೀರ್ಮಾನ ಮಾಡಲಾಯ್ತು ಎಂದಿದ್ದಾರೆ.
ಇದನ್ನೂ ಓದಿ: Viral Video: ಒಂದೇ ವಿಮಾನದಲ್ಲಿ ತಾಯಿ-ಮಗಳು ಗಗನಸಖಿಯರು; ತಾಯಂದಿರ ದಿನದಂದು ಪ್ರಯಾಣಿಕರೂ ಭಾವುಕ