ಬೆಂಗಳೂರು: ಫ್ರೆಂಡ್‌ಶಿಪ್ ಗೋಲ್ ಎನ್ನುವುದು ಎಲ್ಲರಿಗೂ ಇರುವ ವಿಚಾರ. ಪ್ರವಾಸ ಮಾಡಬೇಕು, ಮದುವೆಯಲ್ಲಿ ಕುಣಿದಾಡಬೇಕು ಎನ್ನುವ ಸಾಕಷ್ಟು ಕನಸುಗಳಿರುತ್ತವೆ. ಆ ರೀತಿಯಲ್ಲಿ ಕನಸು ಕಾಣುವ ಎಲ್ಲ ಸ್ನೇಹಿತರಾಗಿ ಆದರ್ಶವಾಗಿ ನಿಂತಿದ್ದಾರೆ ಅಮೆರಿಕದ ಟೆಕ್ಸಾಸ್‌ನ ಈ ಇಬ್ಬರು ಸ್ನೇಹಿತೆಯರು. 81ನೇ ವರ್ಷದಲ್ಲಿ 80 ದಿನಗಳಲ್ಲಿ ಪ್ರಪಂಚ ಸುತ್ತಿ ಬಂದ ಸ್ನೇಹಿತೆಯರ (Viral News) ಕಥೆಯಿದು.
ಇದನ್ನೂ ಓದಿ: Murder Case : ಹೆಂಡತಿ ಬಂಧುಗಳಿಂದ ಯುವಕನ ಕೊಲೆ; ಆರೋಪಿಗಳ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಸ್ನೇಹಿತರು
ಸಾಕ್ಷ್ಯಚಿತ್ರ ಛಾಯಾಗ್ರಾಹಕಿ ಎಲ್ಲೀ ಹ್ಯಾಂಬಿ ಹಾಗೂ ವೈದ್ಯೆ, ಉಪನ್ಯಾಸಕಿ ಆಗಿರುವ ಸ್ಯಾಂಡಿ ಹ್ಯಾಜೆಲಿಪ್ ಅವರು ಹಲವು ವರ್ಷಗಳಿಂದ ಸ್ನೇಹಿತರು. ಇದೀಗ 81 ವರ್ಷ ವಯಸ್ಸಿನವರಾಗಿರುವ ಈ ಜೋಡಿ ಇತ್ತೀಚೆಗೆ ದೊಡ್ಡದೊಂದು ಪ್ರವಾಸ ಮುಗಿಸಿಕೊಂಡು ಬಂದಿದೆ. ಕೇವಲ 80 ದಿನಗಳಲ್ಲಿ 7 ಖಂಡಗಳ 18 ರಾಷ್ಟ್ರಗಳನ್ನು ಸುತ್ತಿ ಬಂದಿದೆ. ‘At 81 but still on the run’ ಹೆಸರಿನ ವಿಚಾರವನ್ನಿಟ್ಟುಕೊಂಡು ಈ ಜೋಡಿ ಪ್ರವಾಸ ಮಾಡಿಬಂದಿದೆ. ವಿಶೇಷವೆಂದರೆ ಈ ಜೋಡಿ ನಮ್ಮ ಭಾರತದ ಪ್ರಸಿದ್ಧ ಆಗ್ರಾದ ತಾಜ್‌ಮಹಲ್ ಅನ್ನೂ ಕೂಡ ಭೇಟಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಸ್ಯಾಂಡಿ, “ನಾವಿಬ್ಬರು 80ನೇ ವರ್ಷಕ್ಕೆ ಕಾಲಿಡುವ ಸಮಯದಲ್ಲಿ ಈ ಪ್ರವಾಸದ ಬಗ್ಗೆ ಚಿಂತನೆ ಮಾಡಿದೆವು. ಇಬ್ಬರೂ ಒಟ್ಟಿಗೆ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದ್ದೆವಾದ್ದರಿಂದ ಈ ಪ್ರಯಾಣಕ್ಕೆ ಧೈರ್ಯವಿತ್ತು. 2020ರಲ್ಲೇ ಈ ಪ್ರಯಾಣ ಆರಂಭವಾಗಬೇಕಿತ್ತು, ಆದರೆ ಕೊರೊನಾ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈ ಬಾರಿ ಅದನ್ನು ನನಸು ಮಾಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಈ ಇಬ್ಬರು ಸ್ನೇಹಿತೆಯರು 80 ದಿನಗಳಲ್ಲಿ ಲಂಡನ್, ಜಾಂಜಿಬಾರ್, ಜಾಂಬಿಯಾ, ಈಜಿಪ್ಟ್, ನೇಪಾಳ, ಬಾಲಿ ಮತ್ತು ಭಾರತ ಸೇರಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ತಾಜ್ ಮಹಲ್ ಮುಂದೆ ಕ್ಲಿಕ್ಕಿಸಿದ ಚಿತ್ರವನ್ನು ಹಂಚಿಕೊಂಡಿರುವ ಜೋಡಿ, ಆ ಫೋಟೋ ಹಿಂದಿನ ಕಥೆಯನ್ನೂ ಹೇಳಿಕೊಂಡಿದೆ. “ಎಂತಹ ಅದ್ಭುತ ನೋಟ! ಫೋಟೋವನ್ನು ಹೇಗೆ ತೆಗೆದಿದ್ದು ಹೇಗೆ ಎನ್ನುವ ಕುತೂಹಲ ನಿಮ್ಮಲ್ಲಿರಬಹುದು. ನಮ್ಮ ಮಾರ್ಗದರ್ಶಿ ಅನಿಲ್ ಅದ್ಭುತ ಛಾಯಾಗ್ರಾಹಕರಾಗಿದ್ದರು ಮತ್ತು ಈ ಫೋಟೋಗೆ ಬಹಳ ಬುದ್ಧಿವಂತಿಕೆ ಬಳಸಿದರು. ಅಲ್ಲಿ ನೀರಿರಲಿಲ್ಲ. ಆದರೆ ಅನಿಲ್ ನನ್ನ ನೀರಿನ ಬಾಟಲಿಯನ್ನು ತೆಗೆದುಕೊಂಡು ಅಮೃತಶಿಲೆಯ ನೆಲದ ಮೇಲೆ ನೀರು ಸುರಿದರು. ಅಮೃತಶಿಲೆಯ ಮೇಲೆ ಓರೆಯಾಗಿ ಫೋಟೋ ತೆಗೆದರು. ನೀರು ಕಡಿಮೆ ಜಾಗದಲ್ಲಿತ್ತಾದರೂ ಅದು ಒಂದು ದೊಡ್ಡ ಸರೋವರದಂತೆ ಫೋಟೋದಲ್ಲಿ ಕಾಣುತ್ತಿದೆ” ಎಂದು ಹೇಳಿದ್ದಾರೆ.
ತಾಜ್‌ಮಹಲ್ ಮಾತ್ರವಲ್ಲದೆ ಈ ಗೆಳತಿಯರು ಹಳೆ ದೆಹಲಿಯನ್ನು ಆಟೋ ರಿಕ್ಷಾದಲ್ಲಿ ಸುತ್ತಾಡಿದ್ದಾರೆ ಕೂಡ.
ಪ್ರವಾಸದ ಬಗ್ಗೆ ಮಾತನಾಡಿರುವ ಹ್ಯಾಂಬಿ, “ನಾವು ನೋಡಿದ ಎಲ್ಲಾ ಸ್ಥಳಗಳನ್ನು ನಾವು ಪ್ರೀತಿಸುತ್ತೇವೆ. ಅದರಲ್ಲೂ ಹೆಚ್ಚು ನೆನಪಿನಲ್ಲುಳಿಯುವುದು ನಾವು ಭೇಟಿಯಾದ ಜನರು. ವಿಶ್ವದ ಅದ್ಭುತ, ಸ್ನೇಹಪರ ಜನರನ್ನು ಭೇಟಿಯಾಗಿದ್ದೇವೆ. ನಾವು ಈಗ ಪ್ರಪಂಚದಾದ್ಯಂತ ಸ್ನೇಹಿತರನ್ನು ಹೊಂದಿದ್ದೇವೆ” ಎಂದು ಹೇಳಿದ್ದಾರೆ.