ಲಕ್ನೋ: ಹಿಂದೆಲ್ಲ ಕಿತ್ತು ತಿನ್ನುವ ಬಡತನ ಕಾರಣಕ್ಕೆ ಕೆಲವರು ಮಕ್ಕಳನ್ನು ಮಾರಾಟ ಮಾಡುತ್ತಿದ್ದರು ಎನ್ನುವುದನ್ನು ಕೇಳಿದ್ದೇವೆ. ಇದೀಗ ಅಂತಹದ್ದೇ ಘೋರ ಘಟನೆಗೆ ಸಾಕ್ಷಿಯಾಗುವ ಸಂದರ್ಭ ಒದಗಿಬಂದಿದೆ. ಸಾಲ ತೀರಿಸಲು ಬಡ ತಂದೆಯೊಬ್ಬ ತನ್ನ ಸ್ವಂತ ಮಗನನ್ನೇ ಮಾರಾಟ ಮಾಡಲು ನಿರ್ಧರಿಸಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಲಾಗಿದ್ದು, ವೈರಲ್ (Viral News) ಆಗಿದೆ.
ಏನಿದು ಘಟನೆ?
ಉತ್ತರ ಪ್ರದೇಶದ ಅಲಿಗಢದ ಮಹುವಾ ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ಕುಮಾರ್ ಎಂಬ ಇ-ರಿಕ್ಷಾ ಚಾಲಕ ತನ್ನ ಮಗನನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಪ್ರಸ್ತುತ ಅವರ ಕುಟುಂಬ ಅಲಿಗಢದ ಗಾಂಧಿ ಪಾರ್ಕ್‌ನ ಕಂಪನಿ ಬಾಗ್ ಜಂಕ್ಷನ್‌ನಲ್ಲಿ ವಾಸಿಸುತ್ತಿದೆ. ರಾಜ್‌ಕುಮಾರ್ “ನಾನು ನನ್ನ ಮಗನನ್ನು ಮಾರಾಟ ಮಾಡಬೇಕು” ಎಂಬ ಬೋರ್ಡ್ ಒಂದನ್ನು ಕುತ್ತಿಗೆಗೆ ನೇತು ಹಾಕಿ ರಸ್ತೆ ಬದಿ ಕುಳಿತ ಫೊಟೊ ಎಲ್ಲೆಡೆ ಹರಿದಾಡುತ್ತಿದೆ. ಮಗನನ್ನು 6-8 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
अलीगढ़: के रोडवेज बस स्टैंड चौराहे पर एक ऐसी तस्वीर सामने आई कि देखकर हर कोई हैरान और दंग रह गया। दरअसल एक मजबूर पिता कर्ज में डूबने के कारण अपने दिल के टुकड़े, बेटे को 6 से 8 लाख रुपए में बेचने को मजबूर हो गया है। जो कि अब अपनी पत्नी, एक बेटी और बेटे के साथ चौराहे पर cant.. pic.twitter.com/6W3mBfoFzf
— Subhi Yadav (@ManojYaSp) October 27, 2023
ಸಾಲದ ಚಕ್ರವ್ಯೂಹ
ವಿಷಯ ತಿಳಿಯುತ್ತಿದ್ದಂತೆ ಪತ್ನಿ, ಇಬ್ಬರು ಮಕ್ಕಳೊಂದಿಗೆ ಕುಳಿತಿದ್ದ ರಾಜ್‌ಕುಮಾರ್ ಬಳಿ ಜನ ನೆರೆದು, ಇಂತಹ ಪರಿಸ್ಥಿತಿ ಉದ್ಭವಿಸಲು ಕಾರಣ ವಿಚಾರಿಸಿದ್ದಾರೆ. ಕೆಲವು ದಿನಗಳ ಹಿಂದೆ 50 ಸಾವಿರ ರೂ. ಸಾಲ ಮಾಡಿದ್ದೆ. ಇದೀಗ ಸಾಲಗಾರರ ಕಾಟ ವಿಪರೀತವಾಗಿದ್ದು, ಸಹಿಸಲು ಸಾಧ್ಯವಾಗದಾಗ ಇಂತಹ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ರಾಜ್‌ಕುಮಾರ್ ತಮ್ಮ ನೋವಿನ ಕಥೆಯನ್ನು ತೋಡಿಕೊಂಡರು. ʼʼಸಾಲ ತೀರಿಸಲು ಬೇರೆ ದಾರಿ ಕಾಣದೆ ನನ್ನ 11 ವರ್ಷದ ಮಗನನ್ನು ಮಾರಾಟ ಮಾಡಲು ನಿರ್ಧರಿಸಿದೆʼʼ ಎಂದು ರಾಜ್‌ಕುಮಾರ್ ಹೇಳಿಕೊಂಡಿದ್ದಾರೆ. ಸಾಲಗಾರರು ದೈಹಿಕ ಹಲ್ಲೆಗೆ ಮುಂದಾಗಿದ್ದಲ್ಲದೆ ತಮ್ಮ ಇ-ರಿಕ್ಷಾವನ್ನು ಮುಟ್ಟುಗೋಲು ಹಾಕಿದ್ದಾಗಿ ತಿಳಿಸಿದ್ದಾರೆ. ಆಟೋ ಕಿತ್ತುಕೊಂಡಿದ್ದ ಬಗ್ಗೆ ರಾಜ್‌ಕುಮಾರ್ ಸ್ಥಳೀಯ ಪೊಲೀಸರ ಮೊರೆ ಹೋಗಿದ್ದರಂತೆ. ಆದರೆ ದೂರು ದಾಖಲಿಸಲು ಅವರು ನಿರಾಕರಿಸಿದ್ದರು. ಆದ್ದರಿಂದ ಬೇಸರಗೊಂಡು ಈ ಹೆಜ್ಜೆ ಇಡಬೇಕಾಯಿತು ಎಂದೂ ಅವರು ಹೇಳಿಕೊಂಡಿದ್ದಾರೆ.
ʼʼಮಗನನ್ನು ಮಾರಾಟ ಮಾಡಿ ಲಭಿಸುವ ಹಣದಿಂದ ಸಾಲವನ್ನು ತೀರಿಸಲು ಸಾಧ್ಯವಾಗುತ್ತದೆ. ಅಲ್ಲದೆ ಇದರಿಂದ ಮಗಳಿಗೆ ಶಿಕ್ಷಣವನ್ನು ಒದಗಿಸುತ್ತೇನೆ. ಅವಳ ಮದುವೆ ವ್ಯವಸ್ಥೆ ಮಾಡಲು ಮತ್ತು ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲು ಇದರಿಂದ ಸಾಧ್ಯವಾಗಲಿದೆʼʼ ಎಂದು ರಾಜ್‌ಕುಮಾರ್ ಗದ್ಗದಿತರಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಪ್ರಜ್ಞೆ ತಪ್ಪಿದ ಹಾವಿನ ಪ್ರಾಣ ಉಳಿಸಿದ ಕಾನ್‌ಸ್ಟೇಬಲ್; ಶಹಬ್ಬಾಶ್ ಎಂದ ಜನ
ಪ್ರಕರಣ ಸುಖಾಂತ್ಯ
ಸದ್ಯ ಈ ಪ್ರಕರಣ ಸುಖಾಂತ್ಯವಾಗಿದೆ. ವಿಷಯ ತಿಳಿದು ಸ್ಥಳೀಯ ಪೊಲೀಸರು ಆಗಮಿಸಿ ರಾಜ್‌ಕುಮಾರ್‌ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮನವೊಲಿಸಿದ್ದಾರೆ. ರಾಜ್‌ಕುಮಾರ್ ಕುಟುಂಬಕ್ಕೆ ನ್ಯಾಯ ಕೊಡಿಸಿ, ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿ ಪೊಲೀಸರು ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿರುಕುಳ ನೀಡಿದ ಸಾಲಗಾರರ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ.