ಲಖನೌ: ಮರೆವು ಎಲ್ಲರಿಗೂ ಇದ್ದೇ ಇರುತ್ತದೆ. ಆ ಮರೆವಿನಿಂದಾಗಿಯೇ ಎಷ್ಟೋ ಬೆಲೆ ಬಾಳುವ ವಸ್ತುಗಳನ್ನು ಬಸ್ಸು, ಆಟೋಗಳಲ್ಲೋ ಅಥವಾ ಬಸ್ಸು ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಕಳೆದುಕೊಂಡ ಅನುಭವ ಅನೇಕರಿಗೆ ಇರುತ್ತದೆ. ಒಮ್ಮೆ ಮರೆತುಬಿಟ್ಟು ಬಂದ ವಸ್ತು ಮತ್ತೆ ನಿಮ್ಮ ಕೈ ಸೇರುವುದು ತೀರಾ ಅಸಮಾನ್ಯವೇ ಸರಿ. ಹೀಗಿರುವ ಸಮಾಜದಲ್ಲಿ ರಸ್ತೆ ಬದಿ ಇದ್ದ ಕಾಲು ಕೋಟಿ ಹಣವನ್ನು ಆಟೋ ರಿಕ್ಷಾ ಚಾಲಕರೊಬ್ಬರು ಪೊಲೀಸರಿಗೆ ತಲುಪಿಸಿರುವ ವಿಶೇಷ ಘಟನೆ ಉತ್ತರ ಪ್ರದೇಶದಲ್ಲಿ (Viral News) ನಡೆದಿದೆ.
ಇದನ್ನೂ ಓದಿ: Viral News: ರಸ್ತೆಯಿಂದ ಹಿಡಿದು ಮೊಬೈಲ್ ಟವರ್‌ವರೆಗೆ; ಭಾರತದಲ್ಲಿ ಕಳ್ಳತನವಾದ ವಿಚಿತ್ರ ವಸ್ತುಗಳಿವು
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಗಾಂಧಿನಗರದ ಇ-ರಿಕ್ಷಾ ಚಾಲಕ ಆಸ್ ಮೊಹಮದ್ ಈ ರೀತಿ ಹಣ ವಾಪಸು ತಂದುಕೊಟ್ಟಿರುವ ವ್ಯಕ್ತಿ. ಇತ್ತೀಚೆಗೆ ಅವರು ರಸ್ತೆಯಲ್ಲಿ ಆಟೊ ಓಡಿಸುತ್ತಿದ್ದಾಗ ರಸ್ತೆ ಬದಿಯಲ್ಲಿ ಒಂದು ಬ್ಯಾಗ್ ಕಾಣಿಸಿತ್ತು. ಕುತೂಹಲಕ್ಕೆಂದು ಗಾಡಿ ನಿಲ್ಲಿಸಿ, ಬ್ಯಾಗ್ ತೆರೆದಾಗ ಅದರಲ್ಲಿ 25 ಲಕ್ಷ ರೂ. ಇರುವುದು ತಿಳಿದುಬಂತು. ಆ ಹಣವನ್ನು ಇಟ್ಟುಕೊಳ್ಳಲು ಬಯಸದ ಅವರು ಅದನ್ನು ಗಾಂಧಿನಗರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ.
ಆಟೋ ಚಾಲಕನ ಈ ರೀತಿಯ ಪ್ರಾಮಾಣಿಕತೆಯನ್ನು ಪ್ರಶಂಶಿಸಿರುವ ಪೊಲೀಸ್ ಇಲಾಖೆಯು ಅದಕ್ಕೆಂದು ಅವರಿಗೆ ಮೆಚ್ಚುಗೆ ಪತ್ರವನ್ನು ಕೊಟ್ಟಿದೆ. ಈ ವಿಚಾರವನ್ನು ಅಲ್ಲಿನ ಪೊಲೀಸ್ ಇಲಾಖೆಯೇ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾಲಕನ ನಿಯತ್ತಿನ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿವೆ.