Site icon Vistara News

Viral News: ಫ್ಯಾಷನ್‌ ಲೋಕದಲ್ಲಿ ಧೂಳೆಬ್ಬಿಸಲು ಬಂತು ಟವೆಲ್‌ ಸ್ಕರ್ಟ್‌; ಬೆಲೆ ಕೇಳಿದರೆ ಹೌಹಾರುವುದು ಖಚಿತ

towel skirt

towel skirt

ಬೆಂಗಳೂರು: ಬಾತ್‌ ಟವೆಲ್‌ ಧರಿಸಿಕೊಂಡು ಹೊರಗೆ ಹೋಗುವುದನ್ನು ನಮ್ಮಿಂದ ಊಹಿಸಲೂ ಸಾಧ್ಯವಿಲ್ಲ. ಆದರೆ ಸದ್ಯದಲ್ಲೇ ಇಂತಹದ್ದೊಂದು ದೃಶ್ಯ ಎಲ್ಲೆಡೆ ಕಂಡು ಬರುವ ಸಾಧ್ಯತೆ ಇದೆ. ಅಂದರೆ ಬಾತ್‌ ಟವೆಲ್‌ ಮಾದರಿಯ ಸ್ಕರ್ಟ್‌ (Towel Skirt) ಅನ್ನು ಪ್ರಮುಖ ಫ್ಯಾಷನ್‌ ಬ್ರ್ಯಾಂಡ್‌ ಬಲೆನ್ಸಿಯಾಗಾ (Balenciaga) ಹೊರ ತರಲು ಸಜ್ಜಾಗಿದೆ. ಲಿಂಗ ಬೇಧವಿಲ್ಲದೆ ಈ ಉಡುಪನ್ನು ಎಲ್ಲರೂ ಧರಿಸಬಹುದು. ಆದರೆ ಇದರ ಬೆಲೆ ಕೇಳಿದರೆ ನೀವು ಹೌಹಾರುವುದು ಖಚಿತ. ಸದ್ಯ ಈ ಟವೆಲ್‌ ಸ್ಕರ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ಬೆಲೆ ಎಷ್ಟು ಗೊತ್ತೆ?

ಈ ಟವೆಲ್‌ ಸ್ಕರ್ಟ್‌ನ ಬೆಲೆ ಬರೋಬ್ಬರಿ 925 ಡಾಲರ್‌ ಅಂದರೆ ಬರೋಬ್ಬರಿ 77,000 ರೂ.! ಬ್ರ್ಯಾಂಡ್‌ನ ಸೃಜನಶೀಲ ಪ್ರತಿಭೆ ಡೆಮ್ನಾ ಗ್ವಾಸಲಿಯಾ ಈ ವಿಶೇಷ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಕರ್ಟ್‌ ಧರಿಸಿದರೆ ಬಾತ್‌ ಟವೆಲ್ ಅನ್ನು ಸೊಂಟದ ಸುತ್ತಲೂ ಸುತ್ತಿದಂತೆ ಕಾಣುತ್ತದೆ. ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ ಸ್ಪ್ರಿಂಗ್ 2024 ಪ್ರದರ್ಶನದಲ್ಲಿ ಅನಾವರಣಗೊಂಡ ಈ ಅಸಾಮಾನ್ಯ ಉಡುಪು ಅತಿಯಾದ ಬೆಲೆಯಿಂದಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಉಡುಪು ಮೊಣಕಾಲಿನವರೆಗೆ ಬರುವ ಉದ್ದದ ವಿನ್ಯಾಸವನ್ನು ಹೊಂದಿದೆ. ಟೆರ್ರಿ-ಕಾಟನ್ ಬಟ್ಟೆಯಿಂದ ಈ ಟವೆಲ್‌ ಅನ್ನು ನಿರ್ಮಿಸಲಾಗಿದೆ. ಅದರ ಮುಂಭಾಗದಲ್ಲಿ ಬಲೆನ್ಸಿಯಾಗಾ ಲಾಂಛನವನ್ನು ಕಸೂತಿ ಮಾಡಲಾಗಿದೆ. ಇದು ಯುನಿಸೆಕ್ಸ್ ಆಯ್ಕೆ ಮತ್ತು ಕಸ್ಟಮೈಸ್ ಮಾಡಬಹುದಾದ ಅವಕಾಶವನ್ನು ಹೊಂದಿದೆ. ಇದು ಮೂಲತಃ ದೈನಂದಿನ ಟವೆಲ್‌ನಂತೆ ಕಂಡು ಬರುತ್ತಿದೆ ಮತ್ತು ಫ್ಯಾಷನ್ ಆವಿಷ್ಕಾರವಲ್ಲ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಗೂಳಿಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸಬೇಕೆ? ಈತನ ತಂತ್ರ ಫಾಲೋ ಮಾಡಿ!

ನೆಟ್ಟಿಗರು ಏನಂದ್ರು?

ʼʼಟವೆಲ್‌ ಸ್ಕರ್ಟ್‌ ಹೊಸ ಫ್ಯಾಷನ್‌ ಅಂತೆ. ಇದು ಕೆಟ್ಟದಾಗಿದೆʼʼ ಎಂದು ಒಬ್ಬರು ಹೇಳಿದ್ದಾರೆ. “ಟವೆಲ್ ಸ್ಕರ್ಟ್ ತಮಾಷೆಯಲ್ಲ ಎಂದು ನನಗೆ ನಂಬಲು ಸಾಧ್ಯವಿಲ್ಲʼʼ ಎಂದಿದ್ದಾರೆ ಇನ್ನೊಬ್ಬರು. ಇತರರು ಈ ಸ್ಕರ್ಟ್‌ನ ಅಸಂಬದ್ಧತೆಯನ್ನು ಎತ್ತಿ ತೋರಿಸಿದ್ದಾರೆ. “ಯಾರಾದರೂ ಅದನ್ನು ಧರಿಸುವುದನ್ನು ನೋಡಿದರೆ ಅವರು ಬಾತ್‌ರೂಮ್‌ನಿಂದ ಹಾಗೆಯೇ ಸೀದಾ ಬಂದಿದ್ದಾರೆ ಎಂದು ಭಾವಿಸುತ್ತೇನೆʼʼ ಎಂದು ಮತ್ತೊಬ್ಬರು ಟೀಕಿಸಿದ್ದಾರೆ. “ನಾನು ಈ ಡಿಸೈನರ್ ಬ್ರ್ಯಾಂಡ್‌ ಅನ್ನು ಪ್ರೀತಿಸುತ್ತೇನೆ. ಆದರೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲʼʼ ಮಗದೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. “ಬಲೆನ್ಸಿಯಾಗಾ ಟವೆಲ್ ಸ್ಕರ್ಟ್‌ಗೆ 920 ಡಾಲರ್‌ಗೆ ಎನ್ನುವುದು ಹುಚ್ಚುತನದ ಪರಮಾವಧಿ. ಯಾಕೆಂದರೆ 5 ಡಾಲರ್‌ನ ಟವೆಲ್‌ ಧರಿಸಿದರೆ ನಾನು ಇದೇ ನೋಟವನ್ನು ಸಾಧಿಸಬಹುದುʼʼ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.

ಐಕೆಇಎ (IKEA) ಈ ನಡುವೆ ಬಲೆನ್ಸಿಯಾಗಾ ಅನ್ನು ಟ್ರೋಲ್ ಮಾಡಲು ಮತ್ತು ಮಾರ್ಕೆಟಿಂಗ್ ತಂತ್ರವಾಗಿ ಬಳಸಲು ಈ ಅವಕಾಶವನ್ನು ಬಳಸಿಕೊಂಡಿದೆ. ಐಕೆಇಎಯ ಯುಕೆ ಇನ್‌ಸ್ಟಾಗ್ರಾಮ್‌ ಹ್ಯಾಂಡಲ್ ಬಲೆನ್ಸಿಯಾಗಾ ವೆಬ್‌ಸೈಟ್‌ನಲ್ಲಿ ಕಂಡುಬರುವ ತನ್ನ ವಿನಾರ್ನ್ ಬಾತ್ ಟವೆಲ್ ಮಾದರಿಯನ್ನು ಹೈಲೈಟ್ ಮಾಡಿದೆ. ಐಕೆಇಎಯಲ್ಲಿ ಟವೆಲ್ ಬೆಲೆ 16 ಡಾಲರ್‌ ಆಗಿದ್ದು, ಇದು ಅಗ್ಗದ ಮತ್ತು ಹೆಚ್ಚು ಸೂಕ್ತ ಆವೃತ್ತಿ ಎಂದು ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version