Site icon Vistara News

Viral news | ನೀಲಿ, ಪಿಂಕ್‌ ಬಣ್ಣದ ಬ್ಲೂಬೆರಿ, ಸ್ಟ್ರಾಬೆರಿ ಸಮೋಸಾಗಳನ್ನು ನೋಡಿದ್ದೀರಾ?

viral samosa

ದಿನ ಬೆಳಗಾದರೆ ಸಾಕು ಅಂತರ್ಜಾಲದ ಮೂಲಕ ಚಿತ್ರ ವಿಚಿತ್ರ ಖಾದ್ಯಗಳನ್ನು ನೋಡುತ್ತೇವೆ. ಕೆಲವನ್ನು ನೋಡಿ ಬಾಯಿ ಚಪ್ಪರಿಸಿದರೆ, ಇನ್ನೂ ಕೆಲವು ಹೀಗೂ ಉಂಟೇ ಅನಿಸುತ್ತವೆ. ಇದೂ ಅಂಥದ್ದೇ ಒಂದು ʻಹೀಗೂ ಉಂಟೇ?ʼಗಳಲ್ಲಿ ಒಂದು.

ಹಿತವಾದ ಮಳೆಯಲ್ಲಿ, ಬಿಸಿಬಿಸಿಯಾಗಿ ಎಣ್ಣೆಯಲ್ಲಿ ಆಗಷ್ಟೇ ಕರಿದು ಹೊರತೆಗೆದ ಸಮೋಸಾಕ್ಕೆ ಖಾರವಾದ ಹಸಿರು ಚಟ್ನಿ ಹಾಗೂ ಸಿಹಿ ಚಟ್ನಿಗಳನ್ನು ಸೇರಿಸಿ ತಿನ್ನುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ಭಾವ. ಉತ್ತರ ಭಾರತೀಯರಿಗಂತೂ ಸಮೋಸವಿಲ್ಲದೆ ಜೀವನವೇ ಖಾಲಿ ಎಂದರೂ ತಪ್ಪಿಲ್ಲ. ಅಂತಹ ಸಮೋಸಾಗಳಲ್ಲೂ ಈಗಾಗಲೇ ಸಾಕಷ್ಟು ವೆರೈಟಿಗಳನ್ನು ಟ್ರೈ ಮಾಡಲಾಗಿದೆ. ಕೇವಲ ಈರುಳ್ಳಿಯನ್ನೇ ಹಾಕಿದ ಈರುಳ್ಳಿ ಸಮೋಸಾ, ಪುಟಾಣಿ ಆಕಾರದಲ್ಲಿರುವ ಕ್ರಿಸ್ಪೀ ಮಿನಿ ಸಮೋಸಾಗಳು ಕೂಡಾ ಜನರನ್ನು ಮೋಡಿ ಮಾಡಿವೆ. ಕ್ಲಾಸಿಕ್‌ ಆಲೂಗಡ್ಡೆ ಸಮೋಸಾಗಳು ಇಂದಿಗೂ, ಮುಂಬೈ ಮಂದಿಗೆ ವಡಾಪಾವ್‌ನಂತೆಯೇ ಜೀವ ಎಂದರೂ ತಪ್ಪಿಲ್ಲ!

ಈಗ ಇಂತಹ ವೆರೈಟಿ ಸಮೋಸಾಗಳ ಲಿಸ್ಟಿಗೆ ಇವು ಹೊಸ ಸೇರ್ಪಡೆಯಾಗಿ ಲಗ್ಗೆಯಿಟ್ಟಿದೆ. ನೀಲಿ ಬಣ್ಣದ ಬ್ಲೂಬೆರಿ ಸಮೋಸಾ, ಗುಲಾಬಿ ಬಣ್ಣದ ಸ್ಟ್ರಾಬೆರಿ ಸಮೋಸಾಗಳು ಸದ್ಯ ಚಾಲ್ತಿಯಲ್ಲಿರುವಂತಹುಗಳು. ಅರೆ, ಇವೇನಿವು ಎಂದು ಕೇಳಬೇಡಿ. ಇವುಗಳೂ ಸಮೋಸಾಗಳೇ. ಆದರೆ ಇವುಗಳ ಬಣ್ಣ ಬೇರೆ. ಒಳಗಿರುವ ಹೂರಣವೂ ಬೇರೆಯೇ. ಸ್ಟ್ರಾಬೆರಿ ಸಮೋಸಾದ ಒಳಗೆ ಸ್ಟ್ರಾಬೆರಿ ಜ್ಯಾಮ್‌ ಇದ್ದರೆ, ಬ್ಲೂಬೆರಿ ಸಮೋಸಾದೊಳಗೆ ಬ್ಲೂಬೆರಿ ಜ್ಯಾಮ್! ಸಿಹಿಯಾದ ಸಮೋಸ. ಸಮೋಸ ಅನ್ನುವುದಕ್ಕಿಂತಲೂ ಸಿಹಿ ತಿನಿಸು ಅನ್ನಬಹುದೇನೋ. ಆದರೆ, ಮಾಡುವ ವಿಧಾನ ಆಕಾರ ಎಲ್ಲ ಸಮೋಸಾದ್ದೇ ಆದ್ದರಿಂದ ಸಮೋಸಾ ಹೆಸರಿನಲ್ಲಿ ಸದ್ದು ಮಾಡುತ್ತಿವೆ. ದೆಹಲಿಯ ಸಮೋಸಾ ಹಬ್‌ ಎಂಬಲ್ಲಿ ಈ ಬಗೆಯ ಸಮೋಸಾ ಸಿಗುತ್ತಿದ್ದು, ಇತ್ತೀಚೆಗೆ ಫುಡ್‌ ಬ್ಲಾಗರ್‌ ಒಬ್ಬರು ಈ ಬಗ್ಗೆ ಪೋಸ್ಟ್‌ ಮಾಡುವುದು ಆಹಾರಪ್ರಿಯರಲ್ಲಿ ಸಂಚಲನ ಮೂಡಿಸಿದೆ.‌

ಆದರೆ ಸಮೋಸಾ ಪ್ರಿಯರಲ್ಲಿ ಬಹುತೇಕ ಮಂದಿ, ಈ ಹೊಸ ಸಮೋಸಾವನ್ನು ನೋಡಿ ಖುಷಿ ಪಟ್ಟಿದ್ದಕ್ಕಿಂತ ಬೇಸರ ಪಟ್ಟಿದ್ದೇ ಹೆಚ್ಚು. ಸಮೋಸಾ ಎಂದರೆ ಅದೊಂದು ಭಾವನೆ. ಇಂತಹ ಸಮೋಸಾಗಳನ್ನೆಲ್ಲ ಮಾಡಿ ನಮ್ಮ ಭಾವನೆಗೆ ಧಕ್ಕೆ ತರಬೇಡಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ ಕೂಡಾ.

ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಫುಡ್‌ ಬ್ಲಾಗಿಂಗ್‌ ಮಾಡುವ ಅನೇಕರು ಏನಾದರೊಂದು ಫ್ಯೂಶನ್‌ ತಿನಿಸುಗಳನ್ನು ಪೋಸ್ಟ್‌ ಮಾಡುತ್ತಲೇ ಇರುವುದು ಎಲ್ಲರಿಗೂ ತಿಳಿದಿದೆ. ಈಗೆಲ್ಲ ಅಂತರ್ಜಾಲ ನೋಡಿಕೊಂಡು ವಿಧವಿಧವಾಗಿ ಅಡುಗೆ ಮಾಡುವುದು, ವೆರೈಟಿಗಳನ್ನು ಟ್ರೈ ಮಾಡುವುದು ಸುಲಭ ಕೂಡಾ. ಅದಕ್ಕಾಗಿಯೇ ಅಂತರ್ಜಾಲವೂ ಇಂತಹ ಬಗೆಯ ವಿಡಿಯೋಗಳಿಂದ ಸದಾ ತುಂಬಿ ತುಳುಕುತ್ತಲೇ ಇರುತ್ತವೆ ಕೂಡಾ. ಕೆಲವು ನಿಜವಾಗಿಯೂ ಹೃದಯ ಗೆದ್ದರೆ ಕೆಲವು ಇಷ್ಟವಾಗುವುದಿಲ್ಲ. ಇತ್ತೀಚೆಗೆ ಗುಲಾಬ್‌ ಜಾಮೂನ್‌ ಬರ್ಗರ್‌ ಇದೇ ಮಾದರಿಯಲ್ಲಿ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡಿತ್ತು. ಆಗಾಗ, ದೋಸೆಯನ್ನು ಪಿಜ್ಜಾ ಆಗಿ ಪರಿವರ್ತಿಸಿದಂತಹ ವಿಡಿಯೋಗಳೂ, ನಾನಾ ಅವತಾರಗಳಲ್ಲಿ ಸಾಂಪ್ರದಾಯಿಕ ತಿನಿಸುಗಳು ಕಾಣಿಸಿಕೊಂಡು ಹಲವರಿಗೆ ಶಾಕ್‌ ಕೊಡುತ್ತಲೇ ಇರುತ್ತವೆ. ಈ ನೀಲಿ, ಪಿಂಕ್‌ ಸಮೋಸಾಗಳೂ ಕೂಡಾ ಅಂತಹುಗಳಲ್ಲಿ ಒಂದು. ಇಂಥದ್ದನ್ನೆಲ್ಲ ಮಾಡುವ ಮೂಲಕ ಸಾಂಪ್ರದಾಯಿಕ ತಿನಿಸುಗಳಿಗೇ ಮೋಸ ಮಾಡಿದಿರಲ್ಲಾ ಎಂದೂ ಹಲವರಿಗೆ ಅನಿಸುವುದುಂಟು.

ಇಲ್ಲಿ ಈ ಬ್ಲಾಗರ್‌ ಹೇಳುವ ಪ್ರಕಾರ, ಹೆಸರಿಗೆ ಇದು ಸಮೋಸಾವಾದರೂ ರುಚಿಯಲ್ಲಿ ಸಿಹಿ ತಿನಿಸೇ ಆಗಿದೆ. ಹಾಗಾಗಿ ಇದನ್ನು ಡೆಸರ್ಟಿನ ರೂಪದಲ್ಲಿ ತಿನ್ನಲಡ್ಡಿಯಿಲ್ಲ. ಯಾರಾದರೂ ನೋಡಿದರೆ, ಖಂಡಿತ ಆಶ್ಚರ್ಯದಿಂದ ಇದೇನು ತಿನ್ನುತ್ತಿದ್ದೀರಿ ಎಂದು ಪ್ರಶ್ನಿಸಬಹುದು, ಯಾಕೆಂದರೆ ಇದರ ಬಣ್ಣಗಳೇ ಹಾಗಿವೆ ಎಂದು ಅವರು ವಿಡಿಯೋದ ಜೊತೆಗೆ ವಿವರಣೆ ನೀಡಿದ್ದಾರೆ. ಬಹುಶಃ ಮಕ್ಕಳಿಗೆ ಸಾಮಾನ್ಯ ಸಮೋಸಾಕ್ಕಿಂತ ಬಣ್ಣಬಣ್ಣದ ಸಮೋಸ ಹೆಚ್ಚು ಆಕರ್ಷಕವಾಗಿ ಕಾಣಬಹುದೇನೋ!

Exit mobile version