Site icon Vistara News

Viral News:‌ ವೈದ್ಯೆಯನ್ನೇ ರಕ್ಷಿಸಿದ ಬಿಎಂಟಿಸಿ ಬಸ್‌ ಚಾಲಕ; ಇದು ರಿಯಲ್‌ ಹೀರೊನ ಕತೆ!

deepika

deepika

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ಇತ್ತೀಚಿನ ಕೆಲವು ದಿನಗಳಲ್ಲಿ ಟ್ರಾಫಿಕ್‌ ಜಾಮ್‌ನಂತಹ ಕೆಟ್ಟ ಕಾರಣಗಳಿಗೆ ಸುದ್ದಿಯಲ್ಲಿತ್ತು. ಈ ಕುರಿತಾದ ಹಲವು ವಿಡಿಯೊಗಳು, ಪೋಸ್ಟ್‌ಗಳು ವೈರಲ್‌ ಆಗಿದ್ದವು. ಆದರೆ ಈ ಬಾರಿ ಬೆಂಗಳೂರು ಒಳ್ಳೆಯ ಕಾರಣಕ್ಕೆ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಜಡಿ ಮಳೆಯಲ್ಲಿ ನಡೆದ ಹೃದಯ ಸ್ಪರ್ಶಿ ಘಟನೆಯೊಂದು ನೆಟ್ಟಿಗರ ಗಮನ ಸೆಳೆದಿದೆ (Viral News). ಇದು ಹಲವರಿಗೆ ಈ ಮಹಾನಗರದ ಮೇಲಿದ್ದ ಅಭಿಪ್ರಾಯವನ್ನು ಬದಲಿಸುವಂತೆ ಮಾಡಿದೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಘಟನೆ ಬಿಎಂಟಿಸಿ ಬಸ್‌ ಚಾಲಕನ ಮಾನವೀಯತೆ ಮುಖವನ್ನು ತೆರೆದಿಟ್ಟಿದೆ. ಅಸಹಾಯಕ ಸ್ಥಿಯಲ್ಲಿದ್ದ ಮಹಿಳೆಯನ್ನು ಕಾಪಾಡಿದ ಆ ಡ್ರೈವರ್‌ ನಿಜಾರ್ಥದಲ್ಲಿ ಹೀರೊ ಆಗಿದ್ದಾರೆ.

ಏನಿದು ಘಟನೆ?

ಪೆರಿಯೊಡಾಂಟಿಸ್ಟ್ ಆಗಿರುವ ಡಾ.ದೀಪಿಕಾ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಸ್ತೆಯಲ್ಲಿ ನಿಂತಿದ್ದರು. ʼʼಸ್ವಂತ ವಾಹನವಿಲ್ಲದ ಕಾರಣ ನಾನು ಬಿಎಂಟಿಸಿ ಬಸ್‌ ಸೇವೆಯನ್ನೇ ಅವಲಂಬಿಸಿದ್ದೇನೆ. ಜತೆಗೆ ವಿವಿಧ ರೈಡ್‌ ಶೇರಿಂಗ್‌ ಆ್ಯಪ್ ಬಳಸುತ್ತೇನೆ. ಆದರೆ ಆ ದಿನ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಸುತ್ತಮುತ್ತಲಿನ ಯಾವ ಆಟೋ ಕೂಡ ನನ್ನ ರಿಕ್ವೆಸ್ಟ್‌ ಸ್ವೀಕರಿಸಿರಲಿಲ್ಲ. ಆ ಜಡಿ ಮಳೆಯಲ್ಲಿ ನಾನು ಸುಮಾರು 1 ಗಂಟೆ ಆಟೋ, ಕ್ಯಾಬ್‌ ಬುಕ್‌ ಮಾಡಲು ಪ್ರಯತ್ನಿಸುತ್ತಲೇ ಇದ್ದೆ. ಆದರೆ ನನ್ನ ಪ್ರಯತ್ನಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗುವಂತೆ ವಿಫಲವಾಗುತ್ತಿದ್ದವುʼʼ ಎಂದು ಡಾ. ದೀಪಿಕಾ ವಿವರಿಸಿದ್ದಾರೆ.

ಇಷ್ಟೆಲ್ಲ ಆದರೂ ಡಾ. ದೀಪಿಕಾಗೆ ಬಿಎಂಟಿಸಿ ಬಸ್‌ ಬಗ್ಗೆ ಇದ್ದ ನಿರೀಕ್ಷೆ ಕಡಿಮೆಯಾಗಿರಲಿಲ್ಲ. ಅವರ ನಂಬಿಕೆಯನ್ನು ಬಿಎಂಟಿಸಿ ಬಸ್‌ ಚಾಲಕ ನಿಜವಾಗಿಸಿದ್ದ . ನಿಜವಾದ ಹೀರೊನನ್ನು ಅಂದು ನಾನು ಬಸ್‌ ಚಾಲಕನ ರೂಪದಲ್ಲಿ ಕಂಡೆ ಎಂದು ಡಾ. ದೀಪಿಕಾ ವಿವರಿಸುತ್ತಾರೆ.

ʼʼಕೊನೆಗೂ ಬಸ್‌ ಬಂತು. ಬಸ್‌ ಬಾಗಿಲು ತೆರೆಯುತ್ತಿದ್ದಂತೆ ಚಾಲಕ ನಸು ನಕ್ಕ. ಅದುವರೆಗಿನ ನನ್ನ ಆಯಾಸ, ಟೆನ್ಶನ್ ಇದರೊಂದಿಗೆ ಮಾಯವಾಯಿತು. ಆಪತ್ತಿನಲ್ಲಿದ್ದ ನನ್ನನ್ನು ಕಾಪಾಡಲು ಸೂಪರ್‌ ಹೀರೊ ಆ ಡ್ರೈವರ್‌ ರೂಪದಲ್ಲಿ ಬಂದ ಎನಿಸಿತು. ಇದು ನನ್ನ ಬಸ್‌ ಸ್ಟಾಪ್‌ಗೆ ನೇರ ತೆರಳುವ ಬಸ್‌ ಆಗಿತ್ತು. ಪಿಂಕ್‌ ಟಿಕೆಟ್‌ ತೆಗೆದು ನೆಮ್ಮದಿಯಿಂದ ಪ್ರಯಾಣ ಮಾಡಿದೆʼʼ ಎಂದು ಅವರು ಅಂದಿನ ಘಟನೆಯನ್ನು ತಿಳಿಸುತ್ತಾರೆ.

ಇದನ್ನೂ ಓದಿ: Bhupesh Baghel: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕ್ಯಾಂಡಿ ಕ್ರಶ್‌ ಆಡಿದ ಭೂಪೇಶ್‌ ಬಘೇಲ್‌!

ಬಸ್‌ ಚಾಲಕ ಮತ್ತು ನಿರ್ವಾಹಕನ ಫೋಟೊ ತೆಗೆಯಲು ಮತ್ತು ಹೆಸರು ತಿಳಿದುಕೊಳ್ಳಲು ಆಕೆಗೆ ಸಾಧ್ಯವಾಗಿಲ್ಲವಂತೆ. ಆಕೆ ತನ್ನ ಸ್ಟಾಪ್‌ ಬಂದಾಗ ಕೃತಜ್ಞತೆ ಹೇಳಿದಾಗ ಚಾಲಕನ ಮೊಗದಲ್ಲಿ ಅದೇ ಮುಗ್ಧ ನಗು ಮೂಡಿತ್ತು ಎಂದು ಹೇಳಿದ್ದಾರೆ. ʼʼಇತ್ತೀಚಿನ ದಿನಗಳಲ್ಲಿ ನನಗೆ ಸಿಕ್ಕ ದೊಡ್ಡ ಉಡುಗೊರೆ ಇದು. ನನ್ನ ಕಾಪಾಡಿದ ಬಿಎಂಟಿಸಿ ಹೀರೊಗೆ ದೊಡ್ಡ ಮಟ್ಟದಲ್ಲಿ ಧನ್ಯವಾದ ಹೇಳಬೇಕು ಅಂದುಕೊಂಡಿದ್ದೆ, ಆದರೆ ಬಸ್‌ ನಂಬರ್‌ ನೋಟ್‌ ಮಾಡಿಕೊಳ್ಳಲು ಮಾತ್ರ ನನ್ನಿಂದ ಸಾಧ್ಯವಾಯಿತುʼʼ ಎಂದು ದೀಪಿಕಾ ತಿಳಿಸಿದ್ದಾರೆ.

ಬೆಂಗಳೂರು ನಿವಾಸಿಯಾಗಿರುವ ದೀಪಿಕಾ ಸುಮಾರು 1 ದಶಕಗಳಿಂದ ಬಿಎಂಟಿಸಿ ಬಸ್‌ ಬಳಸುತ್ತಿದ್ದಾರೆ ಮತ್ತು ಈ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ʼʼಬಿಎಂಟಿಸಿ ನಗರದ ಅತ್ಯಂತ ವಿಶ್ವಾಸಾರ್ಹ ಸಾರಿಗೆ ವಿಧಾನʼʼ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನಲ್ಲಿರುವ ಎಲ್ಲ ಬಿಎಂಟಿಸಿ ಸಿಬ್ಬಂದಿಗೆ ದೀಪಿಕಾ ಕೃತಜ್ಞತೆ ಸಲ್ಲಿಸಿದ್ದಾರೆ. ನಿಸ್ವಾರ್ಥ ಸೇವೆ ಸಲ್ಲಿಸುವ ಬಿಎಂಟಿಸಿ ಸಿಬ್ಬಂದಿಯ ಪ್ರಯತ್ನವನ್ನು ನೆಟ್ಟಿಗರೂ ಶ್ಲಾಘಿಸಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version