ಮುಂಬೈ ನಗರಿಯು ಲೋಕಲ್ ರೈಲುಗಳಿಗೆ ಪ್ರಸಿದ್ಧಿ. ಇಲ್ಲಿ ನಿತ್ಯವೂ ಲಕ್ಷಗಟ್ಟಲೆ ಮಂದಿ ಲೋಕಲ್ ರೈಲಿನಲ್ಲಿಯೂ, ಮೆಟ್ರೋನಲ್ಲಿಯೂ ಓಡಾಡುತ್ತಿರುತ್ತಾರೆ. ಇಲ್ಲಿನ ಜನದಟ್ಟಣೆ, ಸಂಚಾರದಟ್ಟಣೆಯು ರಸ್ತೆಯಲ್ಲಿ ನಿತ್ಯ ಪ್ರಯಾಣಕ್ಕೆ ಅಷ್ಟು ಅನುಕೂಲಕರವಿಲ್ಲ ಎಂಬುದು ಬಹುತೇಕರಿಗೆ ಗೊತ್ತಿರುವ ಸತ್ಯ. ಅದಕ್ಕಾಗಿಯೇ, ಜನರನ್ನು ಹೆಚ್ಚು ಹೆಚ್ಚು ರೈಲಿನ ಬಳಕೆಗೆ, ಮೆಟ್ರೋನ ಬಳಕೆಗೆ ಪ್ರೋತ್ಸಾಹಿಸಲಾಗುತ್ತದೆ. ಇಲ್ಲೊಬ್ಬ ಪುಟಾಣಿ ಹುಡುಗ ಮೆಟ್ರೋನಲ್ಲಿ ಸೈಕಲ್ ತೆಗೆದುಕೊಂಡು ದೂರದ ಜಾಗಕ್ಕೆ ಟ್ಯೂಷನ್‌ಗೆಂದು ಓಡಾಡುತ್ತಿರುವ ಚಿತ್ರವೊಂದು ಹಲವರ ಮೆಚ್ಚುಗೆಗೆ ಪಾತ್ರವಾಗಿ ವೈರಲ್ ಆಗಿದೆ.
ಹೌದು. ಹುಡುಗನೊಬ್ಬ ತನ್ನ ಸೈಕಲನ್ನು ಮೆಟ್ರೋ ರೈಲಿನೊಳಗೆ ಪಾರ್ಕ್ ಮಾಡಿಕೊಂಡು ತಾನೂ ಬದಿಯಲ್ಲೇ ಕೂತು, ಮೆಟ್ರೋನಲ್ಲಿ ಪಯಣ ಮಾಡುತ್ತಿರುವ ಫೋಟೋ ಒಂದನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರಾಜೀವ್ ಎಂಬವರೊಬ್ಬರು ಶೇರ್ ಮಾಡಿದ್ದರು. ʻಈ ಹುಡುಗ ನಿತ್ಯವೂ ತನ್ನ ಸೈಕಲ್ ಜೊತೆಗೆ ಮೆಟ್ರೋನಲ್ಲಿ ಪಯಣ ಮಾಡುತ್ತಿದ್ದಾನೆ. ಆರಾಮವಾಗಿ, ಯಾವುದೇ ಭಯವಿಲ್ಲದೆ ಈ ಹುಡುಗ ಮೆಟ್ರೋಲ್ಲಿ ಪ್ರಮಾಣ ಮಾಡುತ್ತಿದ್ದು, ತನ್ನ ಸೈಕಲನ್ನು ಅಚ್ಚುಕಟ್ಟಾಗಿ ತೊಂದರೆಯಾಗದಂತೆ ಪಾರ್ಕ್ ಕೂಡಾ ಮಾಡುತ್ತಾನೆ. ಆತನ ಭವಿಷ್ಯಕ್ಕೆ ಶುಭ ಹಾರೈಕೆಗಳುʼ ಎಂದು ಬರೆದ ಪೋಸ್ಟ್ ಒಂದು ಜಾಲತಾಣದಲ್ಲಿ ಬಹುತೇಕರ ಗಮನ ಸೆಳೆದಿದೆ.
ಹಲವರು ಈ ಹುಡುಗನ ನಿತ್ಯದ ಪಯಣದ ಈ ಚಿತ್ರ ನೋಡಿ ಫಿದಾ ಆಗಿದ್ದು, ಬಹಳ ಒಳ್ಳೆಯ ಕಾರ್ಯ. ಈತ ಮೆಟ್ರೋವನ್ನು ಸರಿಯಾದ ರೀತಿಯಲ್ಲಿ ಬಳಸುತ್ತಿದ್ದಾನೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಮಕ್ಕಳು ಇಷ್ಟು ಜವಾಬ್ದರಿಯುತವಾಗಿ ಪಯಣಿಸುವುದು ಕಡಿಮೆ. ಆದರೆ, ಈ ಹುಡುಗನನ್ನು ನೋಡಿದರೆ, ಹೆಲ್ಮೆಟ್ ಹಾಕಿ ಸರಿಯಾದ ಮಾದರಿಯಲ್ಲೇ ಇದನ್ನು ಬಳಸುತ್ತಿರುವುದು ಗಮನಕ್ಕೆ ಬರುತ್ತಿದೆ. ಈತನಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.
ವಾವ್, ಇಂಥ ಮಕ್ಕಳ ಕೈಯಲ್ಲಿ ಭವಿಷ್ಯ ಚೆನ್ನಾಗಿದೆ ಅನಿಸುತ್ತಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಒಬ್ಬರು, ಕಡೇ ಪಕ್ಷ ಮೆಟ್ರೋನಲ್ಲಿ ಉಚಿತವಾಗಿ ಸೈಕಲನ್ನು ತೆಗೆದುಕೊಂಡು ಪಯಣಸಿಬಹುದು. ಆದರೆ, ಲೋಕಲ್ ರೈಲಿನಲ್ಲಿ ಸೈಕಲ್ ತೆಗೆದುಕೊಂಡು ಹೋಗಬೇಕಾದರೆ, ೨೦೦ ರೂಪಾಯಿಗಳನ್ನು ಹೆಚ್ಚುವರಿ ಪಾವತಿಸಬೇಕು. ಸೈಕಲ್ ಸವಾರಿಯನ್ನು ಉತ್ತೇಜಿಸಬೇಕಾದರೆ, ಸ್ಥಳೀಯ ರೈಲು ವ್ಯವಸ್ಥೆಯಲ್ಲೂ ಸೈಕಲನ್ನು ಉಚಿತವಾಗಿ ತೆಗೆದುಕೊಂಡು ಹೋಗುವಂತಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಾವೂ ಕೂಡಾ ನಿತ್ಯ ಸೈಕಲ್‌ನಲ್ಲಿ ಮೆಟ್ರೋ ಮೂಲಕ ಪಯಣಿಸುತ್ತಿದ್ದೇವೆಂದು ಈ ಹುಡುಗನ ನಡೆಗೆ ಬೆಂಬಲವಾಗಿ ತಮ್ಮ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದು, ಹಲವು ಯುವಜನರು ಸೈಕಲ್ ಸವಾರಿಯತ್ತ ಹೊರಳುತ್ತಿರುವುದನ್ನು ತೋರಿಸುತ್ತಿದೆ.
ಇದನ್ನೂ ಓದಿ: Video Viral: ದಿಲ್ಲಿ ಮೆಟ್ರೋದಲ್ಲಿ ಬಿಕಿನಿ ರೀತಿ ಬಟ್ಟೆ ತೊಟ್ಟ ಯುವತಿಯ ವಿಡಿಯೋ ವೈರಲ್! ಡಿಎಂಆರ್‌ಸಿ ಹೇಳಿದ್ದೇನು?