Site icon Vistara News

ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಬೆಂಗಳೂರು ಮೂಲದ ಯುವತಿಯ ಬೈಸೆಪ್ಸ್ ಫೋಟೊ; ಜಾತೀಯತೆಯ ಚರ್ಚೆಗೆ ಕಾರಣವೇನು?

Viral News

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಯಾವಾಗ, ಯಾವ ಸಂಗತಿ ವೈರಲ್‌ ಆಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಒಂದು ಚಿಕ್ಕ ಕ್ಯಾಪ್ಶನ್‌ ಅಥವಾ ಒಂದು ಫೋಟೊ ವಿವಾದ ಹುಟ್ಟು ಹಾಕುತ್ತದೆ, ಚರ್ಚೆಯ ಕಿಡಿ ಹೊತ್ತಿಸಿ ಬಿಡುತ್ತದೆ. ಈಗ ಅಂತಹದ್ದೇ ಒಂದು ಪೋಸ್ಟ್‌ ನೆಟ್ಟಿಗರ ಗಮನ ಸೆಳೆದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ಉದ್ಯಮಿಯೊಬ್ಬರು ತಮ್ಮ ಫೋಟೊ ಹಂಚಿಕೊಂಡು ಬರೆದ ಎರಡೇ ಎರಡು ಪದದ ಕ್ಯಾಪ್ಶನ್‌ ಇದೀಗ ಜಾತೀಯತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಏನಿದು ವಿವಾದ? ಇಲ್ಲಿದೆ ವಿವರ (Viral News).

ಬೆಂಗಳೂರು ಮೂಲದ ಕಂಟೆಂಟ್ ರೈಟಿಂಗ್ ಏಜೆನ್ಸಿಯ ಸಿಇಒ ಆಗಿರುವ ಅನುರಾಧಾ ತಿವಾರಿ (Anuradha Tiwari) ಎನ್ನುವವರು ಆಗಸ್ಟ್ 22ರಂದು ಸಾAಮಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಬೈಸೆಪ್ಸ್ ಫೋಟೊವನ್ನು ಪೋಸ್ಟ್ ಮಾಡಿ ʼಬ್ರಾಹ್ಮಿನ್ ಜೀನ್ಸ್ʼ (Brahmin genes) ಎಂಬ ಶೀರ್ಷಿಕೆ ನೀಡಿದ್ದಾರೆ. ಇದೀಗ ಈ ಶಿರ್ಷಿಕೆ ಹಾಗೂ ಪೋಟೊ ವೈರಲ್ ಆಗಿದ್ದು, ಅನೇಕರು ಅನುರಾಧಾ ಅವರ ನಡೆಯನ್ನು ಟೀಕಿಸಿದ್ದಾರೆ. ಜಾತೀಯತೆ ಇನ್ನೂ ಅಸ್ತಿತ್ವದಲ್ಲಿದೆ ಎಂದೆಲ್ಲ ಹೇಳಿದ್ದಾರೆ. ಸದ್ಯ ಈ ಎಲ್ಲ ಟೀಕೆಗಳಿಗೆ ಉತ್ತರಿಸಿ ಅವರು ಸರಣಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಮೊದಲ ಪೋಸ್ಟ್‌ನಲ್ಲಿ ರಸ್ತೆಯಲ್ಲಿ, ಸ್ಕೂಟರ್‌ ಪಕ್ಕ ನಿಂತ ಅನುರಾಧಾ ತಿವಾರಿ ಅವರು ಎಡಗೈನಲ್ಲಿ ಎಳನೀರು ಹಿಡಿದುಕೊಂಡು ಬಲಗೈಯ ಬೈಸೆಪ್ಸ್ ಪ್ರದರ್ಶಿಸಿರುವ ಫೋಟೊ ಶೇರ್‌ ಮಾಡಿ ʼಬ್ರಾಹ್ಮಿನ್ ಜೀನ್ಸ್ʼ ಎಂದು ಬರೆದುಕೊಂಡಿದ್ದಾರೆ. ಇಷ್ಟಕ್ಕೇ ಉರಿದುಕೊಂಡ ಹಲವರು, ಇಂತಹ ಫಿಟ್‌ನೆಸ್ ಬ್ರಾಹ್ಮಣರಲ್ಲಿ ಮಾತ್ರ ಕಂಡುಬರಲು ಸಾಧ್ಯ ಎಂಬಂತಿದೆ ಈ ಪೋಸ್ಟ್‌ ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ. ಜತೆಗೆ ಜಾತೀಯತೆಯನ್ನು ಎಳೆದು ತಂದಿದ್ದಾರೆ. ಯಾಕೆ ಜಾತಿ ಪದ್ಧತಿ ಇನ್ನೂ ಬೇರೂರಿದೆ? ಇವರು ಹೇಳುತ್ತಿರುವುದು ನೋಡಿದರೆ ಉನ್ನತ ಅಥವಾ ನಿರ್ದಿಷ್ಟ ವಂಶವಾಹಿಗಳು ಫಿಟ್ ಆಗಿದ್ದಾರೆ. ಫಿಟ್ ಆಗಿರಲು ವಂಶಾವಾಹಿ ಕಾರಣ ಎಂಬಂತಿದೆ ಎಂದು ಹೇಳಿದ್ದಾರೆ. ಹೀಗೆ ಸಾಕಷ್ಟು ಮಂದಿ ಈ ಪೋಸ್ಟ್ ಅನ್ನು ಟೀಕಿಸಿದ್ದಾರೆ.

ತಿರುಗೇಟು ಕೊಟ್ಟ ಅನುರಾಧಾ

ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಸ್ಟ್‌ 23ರಂದು ಮತ್ತೊಂದು ಪೋಸ್ಟ್‌ ಮೂಲಕ ಅನುರಾಧಾ ತಿರುಗೇಟು ನೀಡಿದರು. “ನಿರೀಕ್ಷಿಸಿದಂತೆ ‘ಬ್ರಾಹ್ಮಣ’ ಎಂಬ ಪದದ ಉಲ್ಲೇಖವು ಅನೇಕರನ್ನು ಕೆರಳಿಸಿದೆ. ನಿಜವಾದ ಜಾತಿವಾದಿಗಳು ಯಾರು ಎಂಬುದನ್ನು ಇದು ತಿಳಿಸುತ್ತದೆ. ಸಾಮಾನ್ಯ ವಿಭಾಗದವರು ವ್ಯವಸ್ಥೆಯಿಂದ ಏನನ್ನೂ ಪಡೆಯುವುದಿಲ್ಲ – ಯಾವುದೇ ಮೀಸಲಾತಿ ಇಲ್ಲ, ಉಚಿತ ಕೊಡುಗೆಗಳಿಲ್ಲ. ನಾವು ಎಲ್ಲವನ್ನೂ ಸ್ವಂತವಾಗಿ ಸಂಪಾದಿಸುತ್ತೇವೆ ಮತ್ತು ನಮ್ಮ ವಂಶಾವಳಿಯ ಬಗ್ಗೆ ಹೆಮ್ಮೆ ಪಡಲು ಎಲ್ಲ ಹಕ್ಕು ನಮಗಿದೆʼʼ ಎಂದು ಹೇಳಿದರು. ಇದಕ್ಕೆ ಹಲವರು ಬೆಂಬಲ ಸೂಚಿಸಿದರೆ, ಸಹಜವಾಗಿ ಟೀಕೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ: Rohit Sharma: ಪಾರ್ಕ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್​; ವಿಡಿಯೊ ವೈರಲ್​

ಆಗಸ್ಟ್‌ 24ರಂದು ಮತ್ತೊಂದು ಪೋಸ್ಟ್‌ ಮಾಡಿದ ಅವರು ʼʼದಲಿತ / ಮುಸ್ಲಿಂ / ಬುಡಕಟ್ಟು ಜನಾಂಗ ಎಂದು ಹೆಮ್ಮೆಯಿಂದ ಹೇಳಿದರೆ ತೊಂದರೆ ಇಲ್ಲ. ಆದರೆ ಬ್ರಾಹ್ಮಣ ಎಂದು ಹೆಮ್ಮೆಯಿಂದ ಹೇಳಿದರೆ ಟೀಕಿಸುತ್ತಾರೆ. ಒಟ್ಟಿನಲ್ಲಿ ಬ್ರಾಹ್ಮಣರಲ್ಲಿ ತಪ್ಪಿತಸ್ಥ ಭಾವನೆ ಮೂಡಿಸಲು ಇಡೀ ವ್ಯವಸ್ಥೆ ಕೆಲಸ ಮಾಡುತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು (ಆಗಸ್ಟ್‌ 25) ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡ ಅನುರಾಧಾ, ʼʼಬ್ರಾಹ್ಮಣರು ಇಂದು ತಮ್ಮ ಪೂರ್ಣ ಹೆಸರನ್ನು ಬಹಿರಂಗಪಡಿಸಲು ಹೆದರುತ್ತಾರೆ. ನಮ್ಮ ವಿರುದ್ಧ ತುಂಬಾ ದ್ವೇಷವನ್ನು ಹರಡಲಾಗಿದೆ. ಸಾಮಾಜಿಕ ನ್ಯಾಯ ಕಾರ್ಯಕರ್ತರು ಮತ್ತು ರಾಜಕಾರಣಿಗಳು ನಮ್ಮನ್ನು ಖಳನಾಯಕರನ್ನಾಗಿ ಮಾಡಿದ್ದಾರೆ. ನಾವು ಯಾರಿಗೂ ಹಾನಿ ಮಾಡುವುದಿಲ್ಲ. ನಮಗೆ ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ನಮ್ಮ ಜಾತಿಯ ಬಗ್ಗೆ ನಾವೇಕೆ ನಾಚಿಕೆಪಡಬೇಕು?ʼʼ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸದ್ಯ ಅವರ ಈ ಎಲ್ಲ ಪೋಸ್ಟ್‌ಗಳು ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದಂತೂ ಹೌದು.

Exit mobile version