Site icon Vistara News

Viral News : ಮದುವೆ ಮಂಟಪಕ್ಕೆ ಹೊರಟಿದ್ದ ವಧು ಲಿಫ್ಟ್‌ನಲ್ಲೇ ಸಿಕ್ಕಿಹಾಕಿಕೊಂಡಳು! ಮುಂದೇನಾಯ್ತು?

#image_title

ಮುಂಬೈ: ಮದುವೆ ಎಂದರೆ ಸಡಗರ, ಸಂಭ್ರಮ. ಆದರೆ ಮಹಾರಾಷ್ಟ್ರದ ಮುಂಬೈನ ಬಯೆಂದರ್‌ನಲ್ಲಿ ಇತ್ತೀಚೆಗೆ ನಡೆದ ಮದುವೆ ಸಂಭ್ರಮದಲ್ಲಿ ಕೆಲ ಕಾಲ ವಧುವಿನ ಕುಟುಂಬ ಗಾಬರಿಗೆ ಸಿಲುಕಿತ್ತು. ಮದುವೆ ನಡೆಯುವ ವಿಚಾರ ದೂರವಿರಲಿ, ಹಸೆಮಣೆ ಏರಬೇಕಿದ್ದ ವಧು ಬದುಕುತ್ತಾಳೋ ಇಲ್ಲವೋ ಎನ್ನುವ ಭಯ ವಧು-ವರರ ಕುಟುಂಬವನ್ನು (Viral News) ಕಾಡಿತ್ತು.

ಹೌದು. ಬಯೆಂದರ್‌ನ ರಾಯ್‌ ವಿಲೇಜ್‌ನ ವಿನಾಯಕ ನಗರದಲ್ಲಿ ಸೋಮವಾರ ರಾತ್ರಿ 9 ಗಂಟೆಗೆ ಪ್ರೀತಿ ವಾಗ್ಲೆ ಅವರ ಮದುವೆ ನಿಶ್ಚಯವಾಗಿತ್ತು. ಮದುವೆಗಾಗಿ ಪೂರ್ತಿ ಸಿದ್ಧವಾಗಿದ್ದ ಪ್ರೀತಿ ರಾತ್ರಿ 8.15ರ ಹೊತ್ತಿಗೆ ಮದುವೆ ಮಂಟಪಕ್ಕೆ ತೆರಳುವ ಮೊದಲು ತಾವಿದ್ದ ಅಪಾರ್ಟ್‌ಮೆಂಟ್‌ನಲ್ಲೇ ಮೊದಲನೆ ಮಹಡಿಯಲ್ಲಿದ್ದ ಮತ್ತೊಂದು ಮನೆಗೆ ತೆರಳಲು ಮುಂದಾದರು. ವಧುವಿನೊಂದಿಗೆ ಆಕೆಯ ಇಬ್ಬರು ಸಹೋದರಿಯರು ಮತ್ತು ಮನೆಗೆ ಬಂದಿದ್ದ ಬಂಧುಗಳ ಇಬ್ಬರು ಮಕ್ಕಳು ಆ ಮನೆಗೆ ತೆರಳಲೆಂದು ಲಿಫ್ಟ್‌ ಹತ್ತಿದ್ದರು.

ಇದನ್ನೂ ಓದಿ: Viral News: ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಜಾರ್ಖಂಡ್‌ ಸರ್ಕಾರ ನೀಡಿದ ಗಿಫ್ಟ್‌ ನೋಡಿ ನಾಚಿಕೊಂಡ ವಧುವರರು!
ಲಿಫ್ಟ್‌ ಹತ್ತಿ ಒಂದನೇ ಮಹಡಿಯ ಬಟನ್‌ ಒತ್ತುತ್ತಿದ್ದಂತೆಯೇ ಲಿಫ್ಟ್‌ ಮೇಲೆ ಹೋಗಲಾರಂಭಿಸಿತು. ಸ್ವಲ್ಪ ದೂರ ಹೋದ ಲಿಫ್ಟ್‌ ಮಧ್ಯದಲ್ಲಿಯೇ ನಿಂತುಬಿಟ್ಟಿತು. ಒಳಗಿದ್ದ ಐವರೂ ಜೋರಾಗಿ ಚೀರಿಕೊಳ್ಳಲಾರಂಭಿಸಿದರು. ಯಾರಾದರೂ ಕಾಪಾಡಿ ಎಂದು ಸಹಾಯಕ್ಕಾಗಿ ಕೂಗಾಡಿದರು. ವಧುವಿನ ಕುಟುಂಬ ಕೂಡ ಈ ವಿಚಾರದಲ್ಲಿ ಗಾಬರಿಗೆ ಬಿತ್ತು. ಎಷ್ಟೇ ಪ್ರಯತ್ನಿಸಿದರೂ ಲಿಫ್ಟ್‌ ಕೆಲಸವನ್ನೇ ಮಾಡದಿದ್ದನ್ನು ಕಂಡು ಭಯದಿಂದ ಕಣ್ಣೀರಿಡಲಾರಂಭಿಸಿದರು.

ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ವಿಚಾರದಲ್ಲಿ ಫೈಯರ್‌ ಬ್ರಿಗೇಡ್‌ಗೆ ಮಾಹಿತಿ ನೀಡಲಾಯಿತು. ಸುಮಾರು ಮೂವತ್ತು ನಿಮಿಷಗಳಾದ ನಂತರ ಸ್ಥಳಕ್ಕೆ ಬಂದ ಸಿಬ್ಬಂದಿ ಲಿಫ್ಟ್‌ ಅನ್ನು ಕೆಳಗೆ ಇಳಿಸಲು ಸಾಕಷ್ಟು ಪ್ರಯತ್ನ ಮಾಡಿದರು. 20 ನಿಮಿಷಗಳ ಸತತ ಪ್ರಯತ್ನದ ನಂತರ ಲಿಫ್ಟ್‌ ಅನ್ನು ಕೆಳಗಿಳಿಸಲಾಯಿತು. ಲಿಫ್ಟ್‌ನಿಂದ ಹೊರಬರುತ್ತಿದ್ದಂತೆಯೇ ಕುಟುಂಬದವರ ಜತೆ ವಧು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಆಕೆಯ ಸಹೋದರಿಯರಿಗೆ ಉಸಿರಾಟ ತೊಂದರೆ ಉಂಟಾಗಿದ್ದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಧುವನ್ನು ಮದುವೆ ಮಂಟಪಕ್ಕೆ ಕರೆದೊಯ್ದು ಮದುವೆ ಮಾಡಿಸಲಾಗಿದೆ.

Exit mobile version