ನಾಯಿಗಳು ಹಾಗೂ ಬೆಕ್ಕುಗಳು ರೈಲ್ವೇ ಸ್ಟೇಷನ್ನು, ಬಸ್ ಸ್ಟ್ಯಾಂಡು ಸೇರಿದಂತೆ ಬೀದಿಬದಿಯಲ್ಲೆಲ್ಲ ಬೇಕುಬೇಕಾದಂಎ ತಿರುಗಾಡುವುದನ್ನು ನಾವು ನೋಡಿರುತ್ತೇವೆ. ಅವುಗಳ ಬಗ್ಗೆ ಹೆಚ್ಚು ಗಮನ ಕೊಡುವವರು ಯಾರೂ ಇರುವುದಿಲ್ಲ. ಅಲ್ಲೇ ಸುತ್ತಮುತ್ತಲ ಅಂಗಡಿಯವರು ಎಸೆದೆದ್ದು, ಪ್ರಯಾಣಿಕರು ತಿಂದು ಬಿಟ್ಟಿದ್ದು ಸೇರಿದಂತೆ ಪ್ರತಿದಿನವೂ ಅವುಗಳಿಗೆ ಅವುಗಳ ಸರಹದ್ದಿನಲ್ಲಿ ತಿನ್ನಲೂ ಕೊರತೆಯಿರುವುದಿಲ್ಲ. ನೀವುಗಳು ರೈಲ್ವೇಸ್ಟೇಷನ್ನಿನಲ್ಲಿ ಯಾಕೆ ಮಲಗಿದಿರಿ ಎಂದು ನಾಯಿಗಳಿಗೋ, ಬೆಕ್ಕುಗಳಿಗೋ ಯಾರೂ ಕೇಳುವುದಿಲ್ಲ. ಅವುಗಳೂ ಅಷ್ಟೇ ಸಹಜವಾಗಿ ಮನುಷ್ಯ ನಿರ್ಮಿತ ಈ ಪ್ರಪಂಚದಲ್ಲಿ ಸಹಜವಾಗಿ ಸುತ್ತಾಡಿಕೊಂಡಿರುತ್ತವೆ. ಆದರೆ, ಹೀಗೆ ಸುತ್ತಾಡುವ ನಾಯಿಗೋ ಬೆಕ್ಕಿಗೋ ಜವಾಬ್ದಾರಿಯನ್ನು ಕೊಟ್ಟರೆ ಏನಾದೀತು? ಈ ಪ್ರಾಣಿಗಳಿಗೆ ಬಸ್ ಸ್ಟಾಂಡಿನಲ್ಲೇನು ಜವಾಬ್ದಾರಿ ಕೊಡುವುದು ಅಂತ ನಕ್ಕುಬಿಡಬೇಡಿ. ಈ ಸುದ್ದಿ ಓದಿದರೆ ನೀವು ಮೂಗಿನ ಹೀಗೂ ಉಂಟೇ ಅನ್ನದೆ ಇರಲಾರಿರಿ!
ಹೌದು. ತೈವಾನ್‌ನ ಮೆಟ್ರೋ ಸ್ಟೇಷನ್ನಿನಲ್ಲೀಗ ಬೆಕ್ಕೊಂದು ಸ್ಟೇಷನ್ ಮಾಸ್ಟರ್ ಆಗಿದೆ. ಕೋವ್ಸಿಯಂಗ್ ಮಾಸ್ ರ್ಯಾಪಿಡ್ ಟ್ರಾನ್ಸಿಟ್ ಎಂಬ 37 ಸ್ಟೇಷನ್‌ಗಳನ್ನು ಸಂಪರ್ಕಿಸುವ ಮೆಟ್ರೋ ಸೇವೆ ತನ್ನ 15ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತಂತೆ. ಈ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಈ ಪರಿಸರದಲ್ಲಿ ಬಹಳ ವರ್ಷಗಳಿಂದ ಸುತ್ತಾಡುತ್ತಿದ್ದ ಮಿಕಾನ್ ಎಂಬ ಹೆಸರಿನ ಜಿಂಜರ್ ಬೆಕ್ಕೊಂದನ್ನು ಸ್ಟೇಷನ್ ಮಾಸ್ಟರ್ ಆಗಿ ಗೌರವಯುತವಾಗಿ ನೇಮಕ ಮಾಡಲಾಗಿದೆ. ಮೆಟ್ರೋ ಹುಟ್ಟುಹಬ್ಬವೂ ತೈವಾನ್‌ನ ಮಕ್ಕಳ ದಿನವೂ ಒಂದೇ ಆದ್ದರಿಂದ ಈ ಮಿಕಾನ್‌ಗೆ ಈ ಗೌರವ ಹುದ್ದೆ ದೊರೆತಿದೆ!
ಮಿಕಾನ್ ಎಂಬ ಈ ಬೆಕ್ಕು ಅಲ್ಲಿನ ಮೆಟ್ರೋ ಸ್ಟೇಷನ್‌ಗೆ ನಿತ್ಯವೂ ಬರುವ ಮಂದಿಗೆ ಚಿರಪರಿಚಿತ. ಯಾವಾಗಲೂ ಇದೇ ಮೆಟ್ರೋ ಸ್ಟೇಷನ್ನಿನ ಸುತ್ತ ಸುತ್ತಾಡುವ ಈ ಬೆಕ್ಕೆಂದರೆ ಹಲವರಿಗೆ ಪ್ರಿಯ. ಮಿಕಾನ್‌ನ ಸಾಕಷ್ಟು ವಿಡಿಯೋಗಳು, ಫೋಟೋಗಳನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವುದರಿಂದ ಮಿಕಾನ್‌ಗೆ ತನ್ನದೇ ಆದ ಫ್ಯಾನ್ ಫಾಲೋವರ್‌ಗಳಿದ್ದಾರಂತೆ. ಮಿಕಾನ್‌ನ ಇನ್ಸ್ಟಾಗ್ರಾಂ ಹ್ಯಾಂಡಲ್‌ಗೆ 59,000 ಫಾಲೋವರ್‌ಗಳಿದ್ದಾರಂತೆ. ಹಾಗಾಗಿ, ಮಿಕಾನ್ ತಕ್ಕಮಟ್ಟಿಗೆ ಸೆಲೆಬ್ರಿಟಿ ಕೂಡಾ.
ಸಿಯಾಟೋ ಶುಗರ್ ರಿಫೈನರಿ ಮೆಟ್ರೋ ಸ್ಟೇಷನ್ನಿನಲ್ಲಿ ಸಾಮಾನ್ಯವಾಗಿ ಕಾಣ ಸಿಕ್ಕುವ ಮಿಕಾನ್‌ನ ನಿತ್ಯ ಚಟುವಟಿಕೆಗಳು ಈ ಪ್ರೊಫೈಲ್ ಮೂಲಕ ಹಂಚಿಕೊಳ್ಳಲಾಗುತ್ತಿದೆಯಂತೆ. ಈಗ ಸ್ಟೇಷನ್ ಮಾಸ್ಟರ್ ಆಗಿ ಭಡ್ತಿ ಹೊಂದಿದ ವಿಡಿಯೋ ಹಾಗೂ ಫೋಟೋಗಳೂ ಕೂಡಾ ಇದರಲ್ಲಿ ಶೇರ್ ಮಾಡಲಾಗಿದ್ದು, ತೈವಾನ್‌ನಲ್ಲಿ ಮಿಕಾನ್ ತನ್ನ ಬ್ರ್ಯಾಂಡ್ ವ್ಯಾಲ್ಯೂವನ್ನು ಹೆಚ್ಚಿಸಿಕೊಳ್ಳುತ್ತಿದೆಯಂತೆ. ಆ ಮೂಲಕ ಮಿಕಾನ್‌ನ ಹೆಸರಿನ, ಚಿತ್ರಗಳಿರುವ ಬ್ಯಾಗ್‌ಗಳು ಸೇರಿದಂತೆ ಹಲವು ವಸ್ತುಗಳಿನ್ನು ಮಾರುಕಟ್ಟೆಗೂ ಲಗ್ಗೆಯಿಡಲಿವೆಯಂತೆ.
ಇದನ್ನೂ ಓದಿ: Viral News: ಫ್ರೆಂಡ್‌ಶಿಪ್ ಗೋಲ್ ಎಂದರೆ ಹೀಗಿರಬೇಕು; 81ನೇ ವರ್ಷದಲ್ಲಿ ಪ್ರಪಂಚ ಸುತ್ತಿದ ಸ್ನೇಹಿತೆಯರು