Site icon Vistara News

Viral news | ತಿಂಗಳಿಗೊಂದು ಫ್ರೀ ಪಿಜ್ಜಾ: ಮದುವೆಯ ವಿಚಿತ್ರ ಒಪ್ಪಂದಕ್ಕೆ ಸಿಕ್ಕ ಉಡುಗೊರೆ!

free pizza

ಪಿಜ್ಜಾ ಯಾರಿಗೆ ಇಷ್ಟವಿಲ್ಲ ಹೇಳಿ. ಭಾರತೀಯ ಆಹಾರವಲ್ಲದಿದ್ದರೂ ಇಂದು ಪಿಜ್ಜಾ ಪ್ರಪಂಚದಾದ್ಯಂತ ಹುಟ್ಟುಹಾಕಿದ ಕ್ರೇಜ್‌ ಬಹಳ ದೊಡ್ಡದೇ. ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಗೊತ್ತಿದ್ದರೂ, ಪಿಜ್ಜಾ ತಿನ್ನಲು ಕಾರಣಗಳು ಬೇಕಿಲ್ಲ. ವಾರಾಂತ್ಯ, ಎಲ್ಲರೂ ಜೊತೆ ಸೇರಿದ ಸಂದರ್ಭ ಹೀಗೆ, ಪಿಜ್ಜಾ ಪಾರ್ಟಿಗೆ ನೆಪಗಳೇ ಬೇಕಿಲ್ಲ.

ಹೀಗಾಗಿಯೇ, ಇಲ್ಲೊಬ್ಬ ದಂಪತಿಗಳಿಗೆ ಕರ್ವಾಚೌತ್‌ ಉಡುಗೊರೆಯಾಗಿ ವರ್ಷಪೂರ್ತಿ ಪ್ರತಿ ತಿಂಗಳಲ್ಲಿ ಒಮ್ಮೆ ಪಿಜ್ಜಾ ಸಿಗಲಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ! ಛೇ, ಈ ಭಾಗ್ಯ ನಮಗಾದರೂ ಸಿಕ್ಕಿದ್ದಿದ್ದರೆ ಎಂದೆನಿಸುತ್ತಿದೆಯಾ? ಅಷ್ಟಕ್ಕೂ ಈ ದಂಪತಿಗೆ ಪಿಜ್ಜಾ ಉಡುಗೊರೆ ಸಿಕ್ಕಿದ್ದಾದರೂ ಹೇಗೆ ಅನ್ನುತ್ತೀರಾ? ಅದರ ಹಿಂದೆಯೂ ಒಂದು ಇಂಟರೆಸ್ಟಿಂಗ್‌ ಕಥೆಯಿದೆ.

ಅಸ್ಸಾಂನ ಜೋಡಿಯೊಂದು ಕೆಲವೊಂದು ತಮ್ಮ ಮದುವೆಯ ಸಂಬಂಧ ವಿಚಿತ್ರವಾದ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಇದು ಈಗ ಪಿಜ್ಜಾ ಸಂಸ್ಥೆಯೊಂದಕ್ಕೆ ಉಚಿತ ಪಿಜ್ಜಾ ನೀಡುವ ಪ್ರೇರಣೆ ನೀಡಿದೆ.

ಶಾಂತಿಪ್ರಸಾದ್‌ ಮತ್ತು ಮಿಂಟು ರೈ ಎಂಬ ಇಬ್ಬರು ಜೂನ್‌ ೨೧ಕ್ಕೆ ಅಸ್ಸಾಂನಲ್ಲಿ ಮದುವೆಯಾಗಿದ್ದು ಇವರಿಬ್ಬರೂ ಮದುವೆಯ ನಂತರ ಒಂದು ಒಪ್ಪಂದದ ಪತ್ರಕ್ಕೆ ಸಹಿ ಹಾಕಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಮದುವೆಯ ನಂತರ ಮಾಡಬಹುದಾದ, ಮಾಡಲೇಬೇಕಾದ, ಮಾಡಬಾರದ ನಿಯಮಗಳನ್ನು ತಮ್ಮಿಬ್ಬರಿಗೆ ಹಾಕಿಕೊಂಡಿದ್ದರು. ಈ ನಿಯಮಗಳಲ್ಲಿ ಕೆಲವು ತಮಾಷೆಯ ಸಂಗತಿಗಳಿದ್ದು, ಪ್ರತಿನಿತ್ಯ ಜಿಮ್‌ ಮಾಡುವುದು, ಪ್ರತಿ ೧೫ ದಿನಕ್ಕೊಮ್ಮೆ ಶಾಪಿಂಗ್‌ ಮಾಡುವುದು ಹಾಗೂ ಪ್ರತಿ ತಿಂಗಳು ಒಮ್ಮೆ ಪಿಜ್ಜಾ ತಿನ್ನುವುದು ಈ ಒಪ್ಪಂದದಲ್ಲಿ ಸೇರಿಕೊಂಡಿತ್ತು.‌

ಇದನ್ನೂ ಓದಿ | Virat kohli | ವಿಶ್ವ ಕಪ್‌ ನೆಟ್‌ ಪ್ರಾಕ್ಟೀಸ್‌ ವೇಳೆ ಡಾನ್ಸ್‌ ಮಾಡಿದ ವಿರಾಟ್‌ ಕೊಹ್ಲಿ, ವಿಡಿಯೊ ವೈರಲ್‌

“ಸಂತೋಷದಾಯಕ ದಾಂಪತ್ಯಕ್ಕೆ ತಿಂಗಳಿಗೊಮ್ಮೆ ಗಂಡನ ಜೊತೆ ಪಿಜ್ಜಾ ತಿನ್ನಿ. ಪಿಜ್ಜಾ ಇಷ್ಟಪಡುವ ಎಲ್ಲ ದಂಪತಿಗಳಿಗೂ  ಕರ್ವಾಚೌತ್ ಶುಭಾಶಯಗಳು” ಎಂದು ಪಿಜ್ಜಾಹಟ್‌ ಶುಭಕೋರುವ ಜೊತೆಗೆ ಪ್ರತಿ ತಿಂಗಳಿಗೊಮ್ಮೆ ಪಿಜ್ಜಾ ತಿನ್ನುವ ಒಪ್ಪಂದದಲ್ಲಿರುವ ಈ ದಂಪತಿಗಳ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋನಲ್ಲಿ ಈ ದಂಪತಿಗಳು ತಮ್ಮ ಹತ್ತಿರದ ಪಿಜ್ಜಾಹಟ್‌ನಲ್ಲಿ ಪಿಜ್ಜಾ ತಿಂದು ಸೆಲ್ಫೀ ತೆಗೆದುಕೊಳ್ಳುವ ಸಂತಸದ ಕ್ಷಣವನ್ನು ಹಂಚಿಕೊಳ್ಳುವುದು ಇದೆ.

ಇದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಾಕಷ್ಟು ವೀಕ್ಷಣೆ ಗಳಿಸಿಕೊಂಡಿದ್ದು, ಬಹುತೇಕರು, ಫ್ರೀ ಪಿಜ್ಜಾ ಪಡೆಯಲು ಹೀಗೊಂದು ಒಪ್ಪಂದ ಮಾಡಿಕೊಂಡರೆ ಸಾಕೇ ಎಂದು ಕಾಲೆಳೆಯುತ್ತಿದ್ದಾರೆ. ಹಲವರು, ಈ ಒಪ್ಪಂದದಿಂದ ದಂಪತಿಗಳಿಗೆ ಭರ್ಜರಿ ಲಾಭವಾಗಿದೆ ಎಂದು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Baby Bump | ಹಾರ್ಲೇ ಡೇವಿಡ್ಸನ್ ಬೈಕ್ ರೈಡ್‌ ಮಾಡಿದ ಗರ್ಭಿಣಿ; ಬೇಬಿ ಬಂಪ್‌ ಫೋಟೊ ಶೂಟ್‌ ವೈರಲ್‌

Exit mobile version