ಬೆಂಗಳೂರು: ಹಣದಿಂದ ಸಂತೋಷವನ್ನು ಖರೀದಿಸಬಹುದೇ ಎನ್ನುವುದು ಸಾಕಷ್ಟು ಬಾರಿ ಚರ್ಚೆಗೆ ಬಂದ ವಿಚಾರ. ಅನೇಕ ಬಾರಿ ಜನರು ಹಣದಿಂದ ದುಬಾರಿ ವಸ್ತುಗಳನ್ನು ಖರೀದಿಸಿ, ಹಣದಿಂದ ಸಂತೋಷ ಸಾಧ್ಯ ಎಂದು ಹೇಳಿಕೊಂಡಿದ್ದಾರೆ. ಆದರೆ ಇದೀಗ ಬೆಂಗಳೂರಿನ 24 ವರ್ಷದ ಟೆಕ್ಕಿಯೊಬ್ಬರು ಲಕ್ಷಗಟ್ಟಲೆ ಹಣವಿದ್ದರೂ ಸಂತೋಷವಿಲ್ಲ, ಒಬ್ಬಂಟಿಯಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral News) ಆಗಿದೆ.
ಬೆಂಗಳೂರಿನಲ್ಲಿರುವ ಅನಾಮಧೇಯ ಟೆಕ್ಕಿ ಒಬ್ಬರು ಈ ಬಗ್ಗೆ ಗ್ರೇಪ್‌ವೈನ್ ಆಪ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ಜೀವನದಲ್ಲಿ ಬೇಸರ ತುಂಬಿಕೊಂಡಿದೆ. ನಾನು ಕಳೆದ 2.9 ವರ್ಷದಿಂದ ಬೆಂಗಳೂರಿನಲ್ಲಿ FAANG ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ವರ್ಷಕ್ಕೆ 58 ಲಕ್ಷ ರೂ. ಸಂಬಳವಿದೆ. ವೃತ್ತಿ ಜೀವನವೂ ತೊಂದರೆಯಿಲ್ಲದೆ ನಡೆಯುತ್ತಿದೆ. ಹಾಗಿದ್ದರೂ ನಾನು ಜೀವನದಲ್ಲಿ ಒಂಟಿಯಾಗಿದ್ದೇನೆ. ನನಗೆ ಗರ್ಲ್‌ಫ್ರೆಂಡ್ ಇಲ್ಲ. ಎಲ್ಲ ಸ್ನೇಹಿತರು ಅವರವರ ಜೀವನದಲ್ಲಿ ಬಿಜಿ ಇದ್ದಾರೆ. ನಾನು ಮಾತ್ರ ಒಬ್ಬಂಟಿಯಾಗಿ ಉಳಿದುಕೊಂಡಿದ್ದೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಪ್ರತಿಷ್ಠಿತ ಶೌರ್ಯ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ
“ನಾನು ವೃತ್ತಿ ಆರಂಭಿಸಿದಾಗಿನಿಂದ ಒಂದೇ ಕಂಪನಿಯಲ್ಲಿ ಇದ್ದೇನೆ. ಹಾಗಾಗಿ ಕೆಲಸದಲ್ಲೂ ಏನೂ ಇಂಟ್ರೆಸ್ಟಿಂಗ್ ಎನ್ನುವಂಥದ್ದು ಇಲ್ಲ. ಆದರೆ ಸದ್ಯಕ್ಕೆ ಕೆಲಸವನ್ನು ಬದಲಾಯಿಸಿ, ಹೊಸ ಸವಾಲುಗಳನ್ನು ಎದುರಿಸುವುದಕ್ಕೂ ನಾನು ಸಿದ್ಧವಿಲ್ಲ. ಆದರೆ ಈ ಒಬ್ಬಂಟಿತನ ಹೋಗಬೇಕೆಂದರೆ ಏನು ಮಾಡಬೇಕು ಎಂದು ಯಾರಾದರೂ ಸಲಹೆ ಕೊಡಿ. ದಯವಿಟ್ಟು ಜಿಮ್‌ಗೆ ಹೋಗಿ ಎಂದು ಮಾತ್ರ ಹೇಳಬೇಡಿ. ಏಕೆಂದರೆ ನಾನು ಈಗಾಗಲೇ ಜಿಮ್‌ಗೆ ಹೋಗುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗೆ ಎಲ್ಲಿಲ್ಲದ ಚರ್ಚೆ ಆರಂಭವಾಗಿದೆ. “ಇಷ್ಟೊಂದು ಸಂಬಳ ಸಿಕ್ಕರೂ ಗರ್ಲ್‌ಫ್ರೆಂಡ್ ಸಿಕ್ಕಿಲ್ಲವೇ?” ಎಂದು ಜನರು ಆಶ್ಚರ್ಯದಿಂದ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ. ಒಬ್ಬಂಟಿತನ ಹೋಗುವುದಕ್ಕೆ ಏನು ಮಾಡಬಹುದು ಎಂದು ಅನೇಕರು ಸಲಹೆಗಳನ್ನೂ ಕೊಡಲಾರಂಭಿಸಿದ್ದಾರೆ.