Site icon Vistara News

Viral News : ಪ್ರತಿಭಟನೆಯ ಬಿಸಿ, ಕಾರು ಬಿಟ್ಟು ಬೈಕ್‌ನಲ್ಲಿ ಮದುವೆ ಮಂಟಪಕ್ಕೆ ತೆರಳಿದ ವರ!

#image_title

ರಾಂಚಿ: ಮದುವೆ ಎಂದಾಕ್ಷಣ ದೊಡ್ಡ ದಿಬ್ಬಣ ಸಜ್ಜಾಗಿಬಿಡುತ್ತದೆ. ಸಿಂಗರಿಸಿದ ಕಾರು, ಬಸ್ಸನ್ನೇರಿ ವಧು, ವರರು ಕಲ್ಯಾಣ ಮಂಟಪಕ್ಕೆ ತೆರಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವರ ಬಸ್ಸು, ಕಾರನ್ನೆಲ್ಲ ಬಿಟ್ಟು ಬೈಕನ್ನೇರಿ ಮದುವೆ ಮಂಟಪಕ್ಕೆ ಹೋಗಿದ್ದಾನೆ. ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಈ ವರನ ಸುದ್ದಿಯೇ (Viral News) ಹರಿದಾಡುತ್ತಿದೆ.

ಜಾರ್ಖಂಡ್‌ನ ಬಕರೊದಲ್ಲಿ ವರ ಮತ್ತು ವಧುವಿಗೆ ಮದುವೆ ನಿಶ್ಚಯಿಸಲಾಗಿತ್ತು. ವಧುವಿನ ಮನೆಯಲ್ಲೇ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದ್ದು, ಅದಕ್ಕೆಂದು ವರನ ಕುಟುಂಬ ದಿಬ್ಬಣ ಸಮೇತವಾಗಿ ಹೊರಟಿತ್ತು. ಹೂವಿನ ಅಲಂಕಾರ ಮಾಡಲಾಗಿದ್ದ ಕಾರಿನಲ್ಲಿ ಮಧುಮಗನಾಗಿ ಸಿಂಗಾರಗೊಂಡಿದ್ದ ವರ ಹೊರಟಿದ್ದ. ಆದರೆ ಅದೇ ದಿನ ಬಕರೊ ನಗರದಲ್ಲಿ ಯುವ ಬಿಸಿನೆಸ್‌ ಅಸೋಸಿಯೇಷನ್‌ ಕಡೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದಕ್ಕೆಂದು ರಸ್ತೆಯನ್ನೆಲ್ಲ ಬ್ಲಾಕ್‌ ಮಾಡಲಾಗಿತ್ತು.

ಇದನ್ನೂ ಓದಿ: Viral Video : ನಟ ಸಲ್ಮಾನ್‌ ಖಾನ್‌ಗೆ ಪ್ರೊಪೋಸ್‌ ಮಾಡಿದ ಫಾರಿನ್‌ ಬೆಡಗಿ ಯಾರು? ಏನು ಆಕೆಯ ಕೆಲಸ?
ಈ ಪ್ರತಿಭಟನೆಯಿಂದಾಗಿ ರಸ್ತೆ ಬ್ಲಾಕ್‌ ಮಾಡಿದ ಹಿನ್ನೆಲೆ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಆ ಟ್ರಾಫಿಕ್‌ನಲ್ಲಿ ವರನ ಕಾರು ಮತ್ತು ದಿಬ್ಬಣ ಸಿಕ್ಕಿಹಾಕಿಕೊಂಡಿದೆ. ಗಂಟೆಗಳ ಕಾಲ ಕಾದರೂ ಟ್ರಾಫಿಕ್‌ ಜಾಮ್‌ ಒಂಚೂರೂ ಕಡಿಮೆಯಾಗಿಲ್ಲ.

ಇತ್ತ ವಧುವಿನ ಕುಟುಂಬವೂ ಚಿಂತೆಗೆ ಸಿಲುಕಿಕೊಂಡಿದೆ. ಮದುವೆ ಮುಹೂರ್ತ ಮುಗಿಯುತ್ತಾ ಬಂದರೂ ವರನ ದಿಬ್ಬಣ ಇನ್ನೂ ಬಂದಿಲ್ಲವೆಂದು ಆತಂಕ ಶುರುವಾಗಿದೆ. ಈ ವೇಳೆ ವರನ ಕುಟುಂಬದವರೊಬ್ಬರು ಒಂದು ಉಪಾಯ ಮಾಡಿದ್ದಾರೆ. ವರನನ್ನು ಯಾವುದಾದರೂ ಬೈಕ್‌ನಲ್ಲಿ ಮದುವೆ ಮಂಟಪಕ್ಕೆ ಕಳುಹಿಸೋಣ ಎಂದಿದ್ದಾರೆ. ಅದರಂತೆ ಬೈಕ್‌ ಒಂದರಲ್ಲಿ ವರ ಮತ್ತು ಒಬ್ಬ ಮಹಿಳೆಯನ್ನು ಮದುವೆ ಮಂಟಪಕ್ಕೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ: ಕಂದಕಕ್ಕೆ ಬಿದ್ದ ಬಸ್​; ವೈಷ್ಣೋದೇವಿ ದೇಗುಲಕ್ಕೆ ಹೊರಟಿದ್ದ 10 ಮಂದಿ ಸಾವು, 20ಜನರಿಗೆ ಗಾಯ
ಬೈಕ್‌ನಲ್ಲಿ ಚಾಲಕನ ಜತೆ ವರ ಹಾಗೂ ಮಹಿಳೆ ಹೋಗುವ ದೃಶ್ಯವನ್ನು ಯಾರೋ ಒಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಆಗುತ್ತಿದ್ದಂತೆಯೇ ಎಲ್ಲೆಡೆ ಶೇರ್‌ ಆಗಲಾರಂಭಿಸಿದೆ. ಸಾವಿರಾರು ಜನರು ವಿಡಿಯೊವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸದ್ಯ ಎಲ್ಲ ಕಡೆಗಳಲ್ಲಿ ಈ ವರನದ್ದೇ ಸುದ್ದಿಯಾಗುತ್ತಿದೆ.

Exit mobile version