ವಿದೇಶದಲ್ಲಿರುವ ಗೆಳೆಯರು, ನೆಂಟರಿಷ್ಟರು, ಆಪ್ತರನ್ನು ನೋಡಿದರೆ ನಮಗೂ ಇಂಥದ್ದೊಂದು ಅವಕಾಶ ಸಿಕ್ಕು ವಿದೇಶದಲ್ಲಿ ಕೆಲ ವರ್ಷ ಇದ್ದು ಬರುವ ಯೋಗ ಇದ್ದಿದ್ದರೆ ಅಂತ ಎಂದಾದರೂ ಯೋಚಿಸಿದ್ದೀರಾ? ಅಮೆರಿಕಾದಲ್ಲೋ, ಜರ್ಮನಿಯಲ್ಲೋ, ಇಟಲಿಯಲ್ಲೋ ಮನೆಯೊಂದು ಇದ್ದಿದ್ದರೆ ನಾನು ಹೇಗಿರುತ್ತಿದ್ದೆ ಎಂದು ಸುಖಾಸುಮ್ಮನೆ ಯೋಚಿಸಿದ್ದೀರೋ? ಇಲ್ಲೇ ನಮ್ಮ ನೆಲದಲ್ಲೇ ಮನೆಯೊಂದು ಕೊಂಡು ಗೃಹಪ್ರವೇಶ ಮಾಡಿ, ಕಾರು ಓಡಿಸುತ್ತಾ, ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಿ ಎಲ್ಲರ ದೃಷ್ಟಿಯಲ್ಲಿ ನೆಮ್ಮದಿಯ ಸಂಸಾರ ನಡೆಸುತ್ತಿರುವೆ ಎಂಬಂತೆ ಕಾಣಲು ಬೇಕಾದ ಎಲ್ಲವನ್ನೂ ಮಾಡಿ, ಅವುಗಳ ಸಾಲ ತೀರಿಸಲು ಜೀವನ ಪರ್ಯಂತ ಕೆಲಸ ಮಾಡುತ್ತಾ ಎಲ್ಲ ಮುಗಿಯುವಾಗ ಆಯಸ್ಸೂ ಮುಗಿದುಬಿಡುತ್ತದಲ್ಲಾ ಅಂತ ಒಮ್ಮೆಯಾದರೂ ಅನಿಸಿದೆಯಾ? ಹಾಗಾದರೆ ಇಟಲಿಯ ಕಥೆ ಕೇಳಿ. ಇಲ್ಲಿನ ಕೆಲವು ಪುಟ್ಟ ಪುಟ್ಟ ಊರುಗಳಲ್ಲಿ ಇರಬೇಕಾದರೆ ಜನರನ್ನು ಕರೆದು ಕರೆದು ಸರ್ಕಾರವೇ ದುಡ್ಡು ಕೊಟ್ಟು ಮನೆ ಕೊಳ್ಳಿ ಎಂದು ಬೇಡುತ್ತಿದೆ! ಇಲ್ಲಿನ ಕೆಲವು ಊರುಗಳಲ್ಲಿ ನಾವು ದುಡ್ಡು ಕೊಟ್ಟು ಮನೆ ಕೊಳ್ಳಲು ಸರ್ಕಾರವೇ ಧನಸಹಾಯ ಮಾಡುತ್ತಿದೆ!
ಹೀಗೂ ಉಂಟೇ ಎನ್ನಬೇಡಿ! ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇಂಥದ್ದೊಂದು ಸುದ್ದಿಯೀಗ ಇಟಲಿಯಿಂದ ಬಂದಿದೆ. ಇಲ್ಲಿನ ಕೆಲವೊಂದು ಪುಟ್ಟ ಪುಟ್ಟ ಊರುಗಳಲ್ಲಿ ಖಾಲಿ ಬಿದ್ದ ಮನೆಗಳನ್ನು ಮತ್ತೆ ತುಂಬಿಸಿಕೊಳ್ಳಲು ಹಾಗೂ ಸ್ಮಶಾನ ಸದೃಶ ಊರುಗಳನ್ನು ಜನರಿಂದ ಮತ್ತೆ ಚಿಗಿತುಕೊಳ್ಳುವಂತೆ ಮಾಡಲು ಸರ್ಕಾರ ಇಂಥ ಉಪಾಯವೊಂದು ಮಾಡಿದೆ.
ಇಟಲಿಯ ಪುಲ್ಗಿಯಾದ ಪ್ರಿಸೀಸ್ ಎಂಬ ಪುಟ್ಟ ಪಟ್ಟಣದಲ್ಲಿ ಜನರೇ ಇಲ್ಲವಂತೆ. 1991ರಿಂದ ಇಲ್ಲಿನ ಎಷ್ಟೋ ಮನೆಗಳು ಜನರೇ ಇಲ್ಲದೆ ಖಾಲಿ ಬಿದ್ದಿವೆಯಂತೆ. ಇದಕ್ಕಾಗಿ ಅಲ್ಲಿನ ಸರ್ಕಾರ ಜನರನ್ನು ಸೆಳೆಯಲು, ಮತ್ತೆ ಈ ಊರಿಗೆ ಬಂದು ವಾಸ ಮಾಡಿ ಎಂದು ಕರೆಯುತ್ತಿದ್ದು, ಇಲ್ಲಿ ಮನೆ ಕೊಳ್ಳಲು 30,000 ಯೂರೋಗಳ (ಸುಮಾರು 25.1 ಲಕ್ಷ ರೂಪಾಯಿಗಳು) ಧನಸಹಾಯ ಮಾಡುತ್ತೇವೆ ಎಂದು ಡಂಗುರ ಹೊರಡಿಸಿದೆ. ಈ ಆಕರ್ಷಕ ಕೊಡುಗೆಯಿಂದಾದರೂ ಜನರು ಮತ್ತೆ ಇಂಥ ಪಾಳು ಬಿದ್ದ ಊರುಗಳಲ್ಲಿ ವಾಸ ಮಾಡುವಂತಾಗಲಿ ಎಂಬುದು ಇದರ ಮುಖ್ಯ ಉದ್ದೇಶ.
ಈ ಊರಿನ ಕೌನ್ಸಿಲರ್ ಅಲ್ಫ್ರೆಡೋ ಪ್ಯಲೀಸ್ ಹೊರಡಿಸಿದ ಪ್ರಕಟಣೆಯಲ್ಲಿ, ಇಲ್ಲಿನ ಮನೆಗಳಿಗೆ ವಲಸೆ ಬಂದು ಇರಲು ಬಯಸುವುದಾದರೆ ಅಂಥವರಿಗೆ 30,000 ಯೂರೋಗಳನ್ನು ನೀಡುತ್ತೇವೆ. ಈ ಮನೆಗಳು 1991ರಲ್ಲಿ ಕಟ್ಟಲಾದ ಖಾಲಿ ಮನೆಗಳು. ಇವುಗಳಲ್ಲಿ ಜನರು ಮತ್ತೆ ವಾಸ ಮಾಡತೊಡಗಿದರೆ, ಈ ಪಾಳು ಬಿದ್ದ ಊರುಗಳಿಗೆ ಜೀವ ಬರಬಹುದು ಎಂಬ ಆಸೆಯಿದೆ ಎಂದವರು ಹೇಳಿದ್ದಾರೆ.
ಇಲ್ಲಿನ ಹಳೆಯ ಊರುಗಳಿಗೆ ಚಂದದ ಇತಿಹಾಸವಿದ್ದು, ಅತ್ಯದ್ಭುತ ಸೌಂದರ್ಯದಿಂದಲೂ ಕೂಡಿದೆ. ಮನೆಗಳ ವಾಸ್ತುಶಿಲ್ಪವೂ ಕೂಡ ಸುಂದರವಾಗಿದೆ. ಆದರೆ, ನಿಧಾನವಾಗಿ ಇಲ್ಲಿಂದ ಎಲ್ಲರೂ ಬೇರೆಡೆಗೆ ಹೋಗಿ ಊರು ಖಾಲಿಯಾಗಿದೆ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ಜನಸಂಖ್ಯೆಯೂ ಕೂಡಾ ಕಡಿಮೆಯಾಗುತ್ತಾ ಬಂದಿದ್ದು ಹುಟ್ಟವ ಮಕ್ಕಳ ಅನುಪಾತದಲ್ಲಿ ಇಳಿಕೆಯಾಗಿದೆ. ಜನರು ಬೇರೆಡೆಗೆ ಉದ್ಯೋಗ, ಉತ್ತಮ ಸೌಲಭ್ಯಗಳನ್ನು ಅರಸಿಕೊಂಡು ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಊರಿಗೆ ಊರೇ ಖಾಲಿ ಬಿದ್ದಿದೆ. ಇಂತಹ ಐತಿಹಾಸಿಕ ಊರುಗಳಲ್ಲಿ ಸ್ಮಶಾನ ಕಳೆಯನ್ನು ಕಾಣುವುದು ಬೇಸರದ ವಿಷಯ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: Viral Video : ಕತ್ತಲೆ ತುಂಬಿದ ಮನೆಗೆ ಬೆಳಕು ತಂದ ಐಪಿಎಸ್ ಅಧಿಕಾರಿ!
ಯಾರಿಗೆ ಮತ್ತೆ ಈ ಊರುಗಳಿಗೆ ವಲಸೆ ಬರಲು ಮನಸ್ಸಿದೆಯೋ ಅವರು ಅರ್ಜಿ ಹಾಕಬಹುದು. ಇಲ್ಲಿನ ಪಾಳುಬಿದ್ದ ಮನೆಗಳನ್ನು ಕೊಳ್ಳಬಹುದು. ಅಂದಾಜು ಸುಮಾರು 30,000 ಯೂರೋಗಳವರೆಗೂ ನಾವು ಧನ ಸಹಾಯ ಮಾಡಲು ನಿರ್ಧರಿಸಿದ್ದೇವೆ. ಇದರಲ್ಲಿ ಅರ್ಧ ಭಾಗವನ್ನು ಮನೆ ಕೊಳ್ಳಲು ಹಾಗೂ ಇನ್ನರ್ಧ ಭಾಗವನ್ನು ಮನೆಯನ್ನು ಮತ್ತೆ ವಾಸಕ್ಕೆ ಯೋಗ್ಯವನ್ನಾಗಿ ಪರಿವರ್ತಿಸಿಕೊಳ್ಳಲು ಬಳಸುವಂತೆ ಇಷ್ಟು ಮೊತ್ತದ ಹಣವನ್ನು ನೀಡಲು ನಿರ್ಧರಿದ್ದೇವೆ. ಮುಂಬರುವ ದಿನಗಳಲ್ಲಿ ಬರುವ ಅರ್ಜಿಗಳ ಆಧಾರದಲ್ಲಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದವರು ಹೇಳಿದ್ದಾರೆ.
ಇಟಲಿಯಲ್ಲಿ ಹೋಗಿ ಸೆಟಲ್ ಆಗುವ ಆಸೆಯಿದ್ದರವರು ಈ ಯೋಜನೆಯ ಬಗ್ಗೆ ಯೋಚನೆ ಮಾಡಬಹುದು ನೋಡಿ!
ಇದನ್ನೂ ಓದಿ: Viral Video: ಕಾಟ ಕೊಟ್ಟ ಪುಂಡನನ್ನು ಕೆಡವಿ ಹೊಡೆದು ಹಾಕಿದ್ರು! ಅಕ್ಕ-ತಂಗಿಯ ವಿಡಿಯೊ ಸಕತ್ ವೈರಲ್