ಬೆಂಗಳೂರು: ʻʻನಾನು ಕನ್ನಡದಲ್ಲಿ ಮಾತನಾಡುವುದಿಲ್ಲʼʼ ಎಂದು ಬಿತ್ತಿಪತ್ರ ಹಿಡಿದುಕೊಂಡು ಟ್ವೀಟ್ ಮಾಡಿ (Viral News) ಕನ್ನಡಿಗರ ಸಿಟ್ಟಿಗೆ ಕಾರಣರಾಗಿದ್ದ ಉದ್ಯೋಗ ಮಾರುಕಟ್ಟೆ ತಜ್ಞ, ವಾಗ್ಮಿ ರಾಹುಲ್ ಮಹೇಶ್ವರಿ ಟ್ವಿಟ್ಟರ್‌ನಲ್ಲಿಯೇ ಕ್ಷಮೆ ಯಾಚಿಸಿದ್ದು, ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ʻʻಐಟಿ ಸಿಟಿ ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್, ಆಟೋ ಡ್ರೈವರ್, ಟ್ರಾಫಿಕ್ ಪೊಲೀಸ್ ಸೇರಿದಂತೆ ಎಲ್ಲರೂ ʻಕನ್ನಡ ಬರುವುದಿಲ್ಲ ಎಂದರೆ….ʼ ತಾರತಮ್ಯ ತೋರುತ್ತಾರೆ. ಬೆಂಗಳೂರಿನ ಆರ್ಥಿಕತೆ ಹೊರಗಿನಿಂದ ಬಂದವರನ್ನೇ ಅವಲಂಬಿಸಿದ್ದರೂ ಕನ್ನಡ ಕಲಿಯಲೇಬೇಕೆಂದು ಒತ್ತಡ ಹೇರಲಾಗುತ್ತದೆʼʼ ಎಂದೆಲ್ಲಾ ರಾಹುಲ್ ಮಹೇಶ್ವರಿ ಟ್ವೀಟ್ ಮಾಡಿ ಅಸಮಧಾನ ತೋಡಿಕೊಂಡಿದ್ದರು. ಬೆಂಗಳೂರಿನಲ್ಲಿ ಭಾಷಾ ತಾರತಮ್ಯತೆ ಹೆಚ್ಚುತ್ತಿದೆ ಎಂದು ಸುಳ್ಳು ಮಾಹಿತಿ ಹಂಚಿಕೊಂಡಿದ್ದರು. ಇದು ವೈರಲ್ ಕೂಡ ಆಗಿತ್ತು.
ಕೋವಿಡ್ ಸಂದರ್ಭದಲ್ಲಿ ಹೊರಗಿನವರು ಬಾರದೇ ಇದ್ದುದ್ದರಿಂದ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಯ ಮಾಲ್‌ಗಳಲ್ಲಿ ಜನರೇ ಇರಲಿಲ್ಲ. ಮೊಬೈಲ್ ಕಳ್ಳತನ ಹೆಚ್ಚಿತ್ತು. ಹೊರಗಿನಿಂದ ಬಂದ ನಾವು ತೆರಿಗೆ ಕಟ್ಟುತ್ತಿರುವು ದರಿಂದಲೇ ಬೆಂಗಳೂರು ಈಗ ಅಭಿವೃದ್ಧಿಯಾಗಿದೆ ಎಂಬರ್ಥದಲ್ಲಿ ತಮ್ಮ ವಾದ ಮಂಡಿಸಿದ್ದರು. ಯಾರೂ ನನಗೆ ಕನ್ನಡ ಕಲಿಯಿರಿ ಎಂದು ಒತ್ತಾಯಿಸಬಾರದು. ನನಗೆ ಬಿಡುವಾದಾಗ ಬೇರೆ ಬೇರೆ ಭಾಷೆಗಳಂತೆ ಕನ್ನಡ ಕಲಿಯುತ್ತೇನೆ. ಅಲ್ಲಿಯವರೆಗೂ ʻʻನನಗೆ ಕನ್ನಡ ಗೊತ್ತಿಲ್ಲʼʼ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದರು.
ಇವರ ಟ್ವೀಟ್‌ಗೆ ಕನ್ನಡಿಗರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಈ ನಡುವೆ ತಮ್ಮ ಟ್ವೀಟ್ ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದ ಅವರು, ʻʻನಾನು ಕನ್ನಡ ಮಾತನಾಡುವುದಿಲ್ಲʼʼ ಎಂದು ಹೇಳಿದ್ದಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವಲತ್ತುಕೊಂಡಿದ್ದರು. ಇವರ ವಿರುದ್ಧ ಕಾನೂನು ಹೋರಾಟಕ್ಕೆ ಕನ್ನಡಿಗರು ಮುಂದಾಗುತ್ತಿದ್ದಂತೆಯೇ ಇದರ ಸುಳಿವು ಅರಿತ ರಾಹುಲ್ ಮಹೇಶ್ವರಿ ತಮ್ಮ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದು, ಕ್ಷಮೆ ಯಾಚಿಸಿದ್ದಾರೆ.
ʻʻದೇಶದ ಬೇರೆ ಬೇರೆ ಭಾಗದಿಂದ ಬಂದಿರುವವರೊಂದಿಗೆ ಕನ್ನಡಿಗರನ್ನು ಬಹಳ ಚೆನ್ನಾಗಿ ನಡೆಸಿಕೊಳ್ಳುವುದೂ ತಮ್ಮ ಗಮನಕ್ಕೆ ಬಂದಿದೆ. ಈ ರೀತಿಯ ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿರುವುದಕ್ಕೆ ಕ್ಷಮೆ ಯಾಚಿಸುತ್ತಿದ್ದೇನೆʼʼ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಕನ್ನಡದ ಪರವಾದ ಹೋರಾಟಕ್ಕೆ, ಹಿಂದಿ ಹೇರಿಕೆಯ ವಿರುದ್ಧ ನಡೆಸಲಾಗುವ ಆಂದೋಲನಕ್ಕೆ ಪ್ರತಿಯಾಗಿ ಹಿಂದಿಭಾಷಿಗರು ಕೂಡ ಪ್ರತಿ ಹೋರಾಟ ರೂಪಿಸುತ್ತಿದ್ದು, ಬೆಂಗಳೂರಿನಲ್ಲಿ ಹಿಂದಿ ಭಾಷಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: Zameer Ahmed Khan: ಜಮೀರ್ ಇಂಗ್ಲಿಷ್ ಪ್ರಮಾಣ; ಕನ್ನಡ ಕಲಿಯದ ಬಗ್ಗೆ ಮುಂದುವರಿದ ಕನ್ನಡಿಗರ ಆಕ್ರೋಶ