ಕೆಲವೊಮ್ಮೆ ಹೀಗೂ ಉಂಟೇ ಅನಿಸಿದರೂ ನಂಬಲೇಬೇಕು. ಇದೊಂಥರಾ ʻಲೈಫ್ ಆಫ್ ಪೈʼ ಚಿತ್ರದ್ದೇ ಒಂದು ಭಾಗ ಅಂತನಿಸಿದರೂ ಆಶ್ಚರ್ಯವಿಲ್ಲ. ಯಾಕೆಂದರೆ ಇಲ್ಲೊಬ್ಬ, ಈಜು ಬರದ ಮೀನುಗಾರನೊಬ್ಬ ಸಮುದ್ರಕ್ಕೆ ಬಿದ್ದು ಕೈಗೆ ಸಿಕ್ಕಿದ ಫ್ರೀಜರ್‌ನಲ್ಲಿ ಹತ್ತಿ ಕುಳಿತು ತೇಲುತ್ತಾ ೧೧ ದಿನ ಅನ್ನ, ನೀರಿಲ್ಲದೆ ಬದುಕುಳಿದು ಕೊನೆಗೂ ರಕ್ಷಿಸಲ್ಪಟ್ಟಿದ್ದಾನೆ. ಈತನ ಕಥೆಯೇ ಮೈನವಿರೇಳಿಸುವಂಥದ್ದು.
ಬ್ರೆಜಿಲ್ ಮೂಲದ ೪೪ರ ಹರೆಯದ ರೋಮೌಲ್ಡೋ ಮೆಕೆಡೋ ರೋಡ್ರಿಗಸ್ ಎಂಬಾತ ಮೀನು ಹಿಡಿಯಲೆಂದು ಫ್ರೆಂಚ್ ಗಿಯಾನಾದ ಸಮುದ್ರ ತೀರದಿಂದ ತನ್ನ ಪುಟ್ಟ ಮರದ ದೋಣಿಯಲ್ಲಿ ನೀರಿಗಿಳಿದಿದ್ದ. ಈಜು ಬರದ ಈತನ ದೋಣಿ ಸ್ಪಲ್ಪ ದೂರ ಹೋಗುವಷ್ಟರಲ್ಲಿ ಮುಳುಗಿತ್ತು. ನೀರಿಗೆ ಬಿದ್ದ ಈತನಿಗೆ ಆಗ ಸಿಕ್ಕಿದ್ದು, ಸಮುದ್ರಕ್ಕೆ ಕಸದ ಜೊತೆಗೆ ಯಾರೋ ಎಸೆದಿದ್ದ ಫ್ರೀಜರ್‌ನ ತುಂಡು. ತೇಲುತ್ತಿದ್ದ ಫ್ರೀಜರ್‌ನ ತುಂಡಿನಲ್ಲಿ ಕೂತು ಈತ ರಕ್ಷಣೆಗಾಗಿ ಎದುರು ನೋಡಿದರೆ, ಬರೋಬ್ಬರಿ ೧೧ ದಿನಗಳ ನಂತರ ರಕ್ಷಣೆ ಸಿಕ್ಕಿದೆ. ಅಷ್ಟರವರೆಗೆ ಊಟ, ನೀರು ಯಾವುದೂ ಇಲ್ಲದೆ ಸಮುದ್ರದಲ್ಲಿ ತೇಲುತ್ತಲೇ ದಿನ ಕಳೆದಿದ್ದಾನೆ!
ಈತನ ದೋಣಿ ಎಲ್ಲಿ ಮುಳುಗಿತೋ ಅಲ್ಲಿ ಅಕಸ್ಮಾತಾಗಿ ಸಿಕ್ಕ ಫ್ರೀಜರ್ ತುಂಡೊಂದು ಈತನಿಗೆ ದೇವರ ಹಾಗೆ ಬಂದಿದೆ. ಅದನ್ನು ಹಿಡಿದು ಹತ್ತಿ ಕೂತ ಈತನನ್ನು ತೇಲಿಸಿಕೊಂಡೇ ಆ ಫ್ರೀಜರ್ ಸುಮಾರು ೨೮೦ ಮೈಲಿ ದೂರ ಮುಂದೆ ಹೋಗಿದೆ. ಕೊನೆಗೂ ಈತ ತನ್ನ ನೆರೆಯ ಸೂರ್ನಾಮ್ ದೇಶದ ಮೀನುಗಾರರ ಕಣ್ಣಿಗೆ ಕಂಡಿದ್ದು ಅವರು ಈತನನ್ನು ತಮ್ಮ ದೋಣಿಗೆ ಹತ್ತಿಸಿಕೊಂಡು ತೀರಕ್ಕೆ ಕರೆತಂದಿದ್ದಾರೆ. ತೀರಾ ಬಡಕಲಾಗಿ ನರಪೇತಲನಂತಾಗಿದ್ದ ಈತನನ್ನು ಕೂಡಲೇ, ಯಾವುದೇ ಪರವಾನಗಿ ಇಲ್ಲದೆ, ತಮ್ಮ ದೇಶದ ಗಡಿಯ ಸಮುದ್ರದೊಳಗೆ ಪ್ರಯಾಣಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ. ೧೬ ದಿನಗಳ ಕಾಲ ಪೊಲೀಸರ ಅತಿಥಿಯಾಗಿ ಸರಿಯಾಗಿ ತಿಂದುಂಡು ಶಕ್ತಿ ಬಂದ ಮೇಲೆ ಆತನನ್ನು ಆತನ ದೇಶಕ್ಕೆ ಕಳುಹಿಸಿಕೊಡಲಾಗಿದೆ.
ನನ್ನ ದೋಣಿ ಮುಳುಗಿ ಬಿದ್ದ ಕೂಡಲೇ ನನ್ನ ಪಾಲಿಗೆ ದೇವರಾಗಿ ಬಂದಿದ್ದು ಫ್ರೀಜರ್. ಇದೊಂದು ಪವಾಡವೇ ಸರಿ ಎಂದು ಬದುಕಿ ಬಂದ ರೋಡ್ರಿಗಸ್ ಹೇಳಿದ್ದಾನೆ.
ಇದನ್ನೂ ಓದಿ | Viral Video | ಉತ್ತರ ಪ್ರದೇಶದಲ್ಲಿ ಆಂಜನೇಯನ ವೇಷ ಧರಿಸಿ ಕುಣಿಯುವಾಗಲೇ ಕುಸಿದು ವ್ಯಕ್ತಿ ಸಾವು!
೧೧ ದಿನ ಏನೂ ತಿನ್ನದೆ, ಕುಡಿಯದೆ, ಸಮುದ್ರದ ನಡುವಲ್ಲಿ ತೇಲುತ್ತಾ ಯಾರಾದರೂ ಸಹಾಯಕ್ಕೆ ಸಿಕ್ಕಾರು ಎಂದು ಕಳೆದ ದಿನಗಳನ್ನು ನೆನೆದರೆ ಈಗಲೂ ಮೈ ಜುಂ ಎನ್ನುತ್ತದೆ. ಸಮುದ್ರದ ತುಂಬ ನನ್ನ ಕಣ್ಣೆದುರು ಚಿತ್ರ ವಿಚಿತ್ರ ಮೀನುಗಳು ದರ್ಶನ ನೀಡಿದ್ದವು. ಹಲವು ಶಾರ್ಕ್‌ಗಳು ನನ್ನ ಸುತ್ತ ನೆರೆದಿದ್ದವು. ಹಾಗಾಗಿ ಖಂಡಿತ ಇವುಗಳಲ್ಲಿ ಯಾವುದಾದರೊಂದು ಶಾರ್ಕ್ ತಿಂದು ಹಾಕುತ್ತದೆ ಎಂದುಕೊಂಡಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಅವು ಸುಮ್ಮನೆ ನನ್ನನ್ನು ನೋಡಿ ಹೋದವು. ದೇವರೇ, ನನ್ನನ್ನು ರಕ್ಷಿಸು ಎಂದು ಬೇಡುತ್ತಾ ನಿದ್ದೆ ಮಾಡದೆ ೧೧ ದಿನ ಕಳೆದೆ. ನನ್ನ ಹೆಂಡತಿ, ತಾಯಿ ಮಕ್ಕಳನ್ನು ನೆನಪು ಮಾಡಿಕೊಳ್ಳುತ್ತಲೇ ಭರವಸೆ ಕಳೆದುಕೊಳ್ಳದೆ ಜೀವ ಕೈಯಲ್ಲಿ ಹಿಡಿದು ಸೂರ್ಯೋದಯ ಸೂರ್ಯಾಸ್ತ ನೋಡುತ್ತಾ ದಿನ ನೂಕುತ್ತಿದ್ದೆ. ಆದರೂ ನನ್ನ ದಿನಗಳು ಮುಗಿದವು ಎಂದೇ ಅನಿಸುತ್ತಿತ್ತು. ಕೊನೆಗೂ ನನ್ನ ಕಣ್ಣೆದುರಿಗೆ ಈ ದೋಣಿ ಕಂಡಾಗ ನನ್ನ ಕಣ್ಣನ್ನೇ ನನಗೆ ನಂಬಲಾಗಲಿಲ್ಲ. ಸೂರ್ಯನ ಬಿಸಿಲಿನ ಝಳಕ್ಕೆ ಕಣ್ಣು ಮಂಜಾಗುತ್ತಿತ್ತು. ದೋಣಿ ಹತ್ತಿರ ಬಂದಾಗ ರಕ್ಷಿಸಿ ಎಂದು ಕೈಚಾಚಿದೆ. ಅದರಲ್ಲಿರುವ ಮಂದಿ ನನ್ನನ್ನು ತಮ್ಮ ದೋಣಿಗೆ ಹತ್ತಿಸಿಕೊಂಡರು ಎಂದು ಆತ ಹೇಳಿಕೊಂಡಿದ್ದಾನೆ.
ವಿಪರೀತ ಒಣಕಲಾಗಿ, ದೇಹರಲ್ಲಿ ನಿರ್ಜಲ ಸ್ಥಿತಿಯುಂಟಾಗಿ ಆರೋಗ್ಯ ಹದಗೆಟ್ಟ ಸ್ಥಿತಿಯಲ್ಲಿ ಈತ ಪತ್ತೆಯಾಗಿದ್ದು, ಈತನ ನಿಜವಾದ ತೂಕಕ್ಕಿಂತ ಐದು ಕೆಜಿ ಕಡಿಮೆಯಾಗಿದ್ದಾನೆ ಎನ್ನಲಾಗಿದೆ. ಸೂರ್ಯನ ಝಳಕ್ಕೆ ಚರ್ಮದ ತುಂಬ ಗಾಯಗಳಾಗಿದ್ದು, ಸನ್‌ಬರ್ನ್‌ಗಳಾಗಿವೆ. ಆದರೆ, ಮಾತಾಡಬಲ್ಲಷ್ಟು ಚೈತನ್ಯ ಈತ ಉಳಿಸಿಕೊಂಡಿದ್ದು, ತನಗಾದ ಪರಿಸ್ಥಿತಿಯನ್ನು ಸ್ಥಳೀಯ ಪೊಲೀಸರಿಗೆ ವಿವರಿಸಿದ್ದಾನೆ. ಆತನಿಗೆ ರಕ್ಷಣೆಯ ನಂತರ ಹೊಟ್ಟೆ ತುಂಬಾ ಊಟ ಹಾಗೂ ಕುಡಿಯಲು ಪೇಯಗಳನ್ನು ನೀಡುವ ಮೂಲಕ ಆತನಿಗೆ ಮರಳಿ ಚೈತನ್ಯ ಬರುವಂತೆ ನೋಡಿಕೊಳ್ಳಲಾಗಿತ್ತು.
೧೬ ದಿನಗಳ ಕಸ್ಟಡಿಯ ನಂತರ ಈತ ಕೊನೆಗೂ ತನ್ನ ದೇಶಕ್ಕೆ ಮರಳಿದ್ದಾನೆ. ಮರಳಿ ತನ್ನ ಕುಟುಂಬವನ್ನು ಸೇರಿಕೊಂಡಿರುವ ಈತ ಇದು ತನಗೆ ದಕ್ಕಿದ ಮರುಜನ್ಮ ಎಂದು ಭಾವುಕನಾಗಿ ನುಡಿದಿದ್ದಾನೆ.
ಇದನ್ನೂ ಓದಿ | Spinning Swing | ಮೇಲಿನಿಂದ ನೆಲಕ್ಕೆ ಅಪ್ಪಳಿಸಿದ ಸ್ಪಿನ್ನಿಂಗ್ ಸ್ವಿಂಗ್! 10ಕ್ಕೂ ಹೆಚ್ಚು ಜನರಿಗೆ ಗಾಯ, ವಿಡಿಯೋ ವೈರಲ್