ಉಸಿರಾಡಲಾಗದೆ ಕಣ್ಮುಚ್ಚಿ ಮಲಗಿ ನರಳುತ್ತಿದ್ದ ನಾಯಿಗೆ ವ್ಯಕ್ತಿಯೊಬ್ಬ ಮತ್ತೆ ಜೀವ ತುಂಬಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆತನ ದಯಾ ಗುಣಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ. ಆ ಮೂಕ ಪ್ರಾಣಿ ಪ್ರಜ್ಞೆ ತಪ್ಪಿತ್ತು. ಉಸಿರಾಟವೂ ಕ್ಷೀಣವಾಗುತ್ತಿತ್ತು. ಒಮ್ಮೊಮ್ಮೆ ಬಾಯಿಯಿಂದ ವಿಚಿತ್ರ ಶಬ್ದ ಹೊರಡುತ್ತಿತ್ತು. ಆದರೆ ಯುವಕನಿಂದಾಗಿ ಮತ್ತೆ ಉಸಿರಾಡತೊಡಗಿದೆ. ಅಷ್ಟೇ ಅಲ್ಲ ಫಟ್ಟನೆ ಎದ್ದುನಿಂತಿದ್ದನ್ನೂ ವಿಡಿಯೋದಲ್ಲಿ ನೋಡಬಹುದು. ಅಂದಹಾಗೆ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬುವರು ಶೇರ್ ಮಾಡಿಕೊಂಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದ್ದು, ಸಾವಿರಾರು ಜನ ರೀಟ್ವೀಟ್ ಮಾಡಿಕೊಂಡಿದ್ದಾರೆ.
ಎಚ್ಚರವಿಲ್ಲದ ನಾಯಿಗೆ ಈ ವ್ಯಕ್ತಿ ಕೊಟ್ಟಿದ್ದು ಸಿಪಿಆರ್ (ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ಚಿಕಿತ್ಸೆ. ಕ್ಷೀಣವಾದ ಉಸಿರಾಟ ನಡೆಸುತ್ತಿದ್ದ ಶ್ವಾನದ ಹೃದಯ ಇರುವ ಜಾಗದಲ್ಲಿ ಎರಡೂ ಹಸ್ತಗಳನ್ನು ಇಟ್ಟು ವೇಗವಾಗಿ ಒತ್ತಿದ್ದಾರೆ. ಸಿಪಿಆರ್ ಎಂದರೆ ಮನುಷ್ಯರಲ್ಲಿ ಹೃದಯಸ್ತಂಭನವಾದಾಗ ನೀಡುವ ಪ್ರಾಥಮಿಕ ಚಿಕಿತ್ಸೆ. ಹೃದಯ ಸ್ತಂಭನವಾದಾಗ ಇಡೀ ದೇಹದಲ್ಲಿ ರಕ್ತಸಂಚಾರ ನಿಲ್ಲುತ್ತದೆ. ಮಿದುಳಿಗೆ ರಕ್ತ ಹೋಗದೆ ಇದ್ದಾಗ ಆ ವ್ಯಕ್ತಿ ಪ್ರಜ್ಞಾಹೀನನಾಗುತ್ತಾನೆ. ಆಗ ಪ್ರಾಥಮಿಕ ಚಿಕಿತ್ಸೆಯಾಗಿ ಸಿಪಿಆರ್ ಮಾಡಬೇಕು. ಅಂದರೆ ಎರಡೂ ಹಸ್ತಗಳನ್ನು ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಯ ಎದೆ ಮೇಲೆ ಇಟ್ಟು ಬಲವಾಗಿ ಮತ್ತು ವೇಗವಾಗಿ ಒತ್ತಬೇಕು. ಎದೆ ಸ್ವಲ್ಪ ಒಳಭಾಗಕ್ಕೆ ಹೋಗುವ ಹಾಗೆ ಒತ್ತುತ್ತ ಹೋದರೆ, ರಕ್ತ ಸಂಚಾರ ಮತ್ತೆ ಪ್ರಾರಂಭವಾಗಿ, ಹೃದಯ ಬಡಿತ ಶುರುವಾಗುತ್ತದೆ. ಬಳಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಬಹುದು. ಅದೇ ಪ್ರಯೋಗವನ್ನೇ ನಾಯಿಯ ಮೇಲೆ ಈ ವ್ಯಕ್ತಿ ಮಾಡಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಆತನನ್ನು ಹೊಗಳಿ ಕಮೆಂಟ್ ಮಾಡಿದ್ದಾರೆ. ʼಪ್ರಪಂಚದಲ್ಲಿ ಒಳ್ಳೇತನ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದೇ ಸಾಕ್ಷಿʼ ಎಂದು ಒಬ್ಬರು ಹೇಳಿದ್ದರೆ, ʼಮೂಕ ಪ್ರಾಣಿಯ ಕಷ್ಟಕ್ಕೆ ಮಿಡಿಯುವ ಹೃದಯವಂತʼ ಎಂದು ಇನ್ನೊಬ್ಬರು ಹೊಗಳಿದ್ದಾರೆ. ʼಎಲ್ಲರೂ ಇನ್ನೊಬ್ಬರ ಮತ್ತು ಇನ್ನೊಂದು ಜೀವಿಯ ಬಗ್ಗೆ ಇಷ್ಟೇ ದಯೆ ತೋರಿಸಿದರೆ ಭೂಮಿಯೆಂಬುದು ಸ್ವರ್ಗವಾಗುತ್ತದೆ,ʼ ʼನಿಮಗೆ ದೇವರು ಒಳ್ಳೆಯದನ್ನು ಮಾಡಲಿʼ, ʼನಾನು ನನ್ನ ಹೃದಯದಿಂದ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆʼ ಎಂಬಿತ್ಯಾದಿ ಕಮೆಂಟ್‌ಗಳನ್ನೂ ಬರೆದಿದ್ದಾರೆ.
ಇದನ್ನೂ ಓದಿ: Viral Video: ಭಯ ಹುಟ್ಟಿಸುವ ಮದುವೆ; ಹೂವಲ್ಲ, ಹಾವಿನ ಹಾರ ಹಾಕಿಕೊಂಡ ವಧು-ವರ