ಲಂಡನ್: ರಸ್ತೆ ಗುಂಡಿ ಸಮಸ್ಯೆ ನಮ್ಮ ಬೆಂಗಳೂರಿನ ಮಂದಿಗೆ ಚೆನ್ನಾಗಿ ಗೊತ್ತಿರುವಂತದ್ದು. ಕೇವಲ ಬೆಂಗಳೂರು ಮಾತ್ರವಲ್ಲ, ದೇಶ ವಿದೇಶದಲ್ಲೂ ಈ ರಸ್ತೆ ಗುಂಡಿ ದೊಡ್ಡ ಸಮಸ್ಯೆಯೇ. ಅಭಿವೃದ್ಧಿಹೊಂದಿರುವ ರಾಷ್ಟ್ರ ಎಂದು ಕರೆಸಿಕೊಳ್ಳುವ ಬ್ರಿಟನ್‌ನಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಅಲ್ಲಿಯೂ ಕೂಡ ಈ ರಸ್ತೆ ಗುಂಡಿ ವಿಚಾರದಲ್ಲಿ ಸಾಕಷ್ಟು ಮಂದಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ, ಸೋತಿದ್ದಾರೆ. ಇದೀಗ ಈ ವ್ಯಕ್ತಿಯೊಬ್ಬರು ವಿಶೇಷ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯುತ್ತಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗಿದೆ.
ಇದನ್ನೂ ಓದಿ: Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!
ಮಾರ್ಕ್ ಮೊರೆಲ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಿಸ್ಟರ್ ಪ್ಯಾಥ್‌ಹೋಲ್ ಎಂದೇ ಕರೆಯಲಾಗುತ್ತದೆ. ಕಾರಣ ಅವರು ಮಾಡುತ್ತಿರುವ ಕೆಲಸ. ರಸ್ತೆಗಳಲ್ಲಿರುವ ಗುಂಡಿಗಳಿಂದ ಚಾಲಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಇವರು ಹತ್ತು ವರ್ಷಗಳಿಂದ ಸರ್ಕಾರಕ್ಕೆ ಮನವರಿಕೆ ಮಾಡಿಸುವ ಯತ್ನದಲ್ಲೇ ಇದ್ದಾರಂತೆ. ಗುಂಡಿಗಳಿಗೆ ರಬ್ಬರ್ ತುಂಬುವುದು, ಬೇರೆ ಬೇರೆ ವಸ್ತು ತುಂಬಿಸಿ ಗುಂಡಿ ಮುಚ್ಚುವ ಕೆಲಸವನ್ನು ಅವರು ಈವರೆಗೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇದೀಗ ವಿಶೇಷ ರೀತಿಯಲ್ಲಿ ಗುಂಡಿ ಮುಚ್ಚುವುದಕ್ಕೆ ಆರಂಭಿಸಿದ್ದಾರೆ.
ಮಾರ್ಕ್ ಅವರು ರಸ್ತೆ ಗುಂಡಿಗಳಿಗೆ ತಿನ್ನುವ ನೂಡೆಲ್ಸ್ ಅನ್ನೇ ಹಾಕಿ ಮುಚ್ಚಲಾರಂಭಿಸಿದ್ದಾರೆ. ಅದಕ್ಕೆಂದೇ ನೂಡಲ್ಸ್ ಕಂಪನಿಯೊಂದರ ಜತೆಗೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಎಲ್ಲೆಲ್ಲಿ ಗುಂಡಿ ಕಾಣುತ್ತದೆಯೋ ಅಲ್ಲೆಲ್ಲಾ ಅವರು ನೂಡಲ್ಸ್ ತುಂಬಲಾರಂಭಿಸಿದ್ದಾರೆ. ನೂಡಲ್ಸ್ ಗುಂಡಿಯೊಳಗೆ ನೀಟಾಗಿ ಕುಳಿತುಕೊಳ್ಳುತ್ತದೆ ಎಂದೂ ಅವರು ಹೇಳಿದ್ದಾರೆ. ಅವರ ಮೂಲ ಊರಾದ ಬ್ರಾಕ್ಲೆ ನಗರದಲ್ಲಿ ಬಹುತೇಕ ಗುಂಡಿಗಳನ್ನು ಇದೇ ರೀತಿಯಲ್ಲಿ ಮುಚ್ಚಿದ್ದಾರೆ.
ಈ ಮಾರ್ಕ್ ಅವರ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿರುವಂತಹ ವಿಚಾರ. ನನ್ನ ಈ ಕೆಲಸದಿಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಗುಂಡಿ ಮುಚ್ಚಲಿ ಎನ್ನುತ್ತಾರೆ ಮಾರ್ಕ್.