ವಾಷಿಂಗ್ಟನ್: ಇತ್ತೀಚೆಗೆ ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬ ಹಣದ ಮಳೆ ಸುರಿಸಿದ್ದ ಸುದ್ದಿ ಎಲ್ಲೆಡೆ ಹರಿದಾಡಿ ಭಾರೀ ವೈರಲ್ ಆಗಿತ್ತು. ಇದೀಗ ಅಮೆರಿಕದಲ್ಲಿ ಇಂಥದ್ದೇ ಒಂದು ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ಕುಟುಂಬದವರೊಂದಿಗಿದ್ದ ಜಾಯಿಂಟ್ ಖಾತೆಯಲ್ಲಿದ್ದ ಹಣವನ್ನೆಲ್ಲ ಬರಿದು ಮಾಡಿ, ರಸ್ತೆಯ ಮೇಲೆ ಬರೋಬ್ಬರಿ 1.6 ಕೋಟಿ ರೂ. ಸುರಿದಿರುವ ವಿಚಾರ (Viral News) ಸುದ್ದಿಯಾಗಿದೆ.
ಹೌದು. ಅಮೆರಿಕದ ಒರಿಗಾನ್‌ನ ನಿವಾಸಿಯಾಗಿರುವ ಕೊಲಿನ್ ಡೇವಿಸ್ ಮ್ಯಾಕ್‌ಕಾರ್ತಿ (38) ಈ ರೀತಿ ಮಾಡಿರುವ ವ್ಯಕ್ತಿ. ಈತ ಇತ್ತೀಚೆಗೆ ರಸ್ತೆ ಮೇಲೆ ತೆರಳುವಾಗ 1.6 ಕೋಟಿ ರೂ. ಮೌಲ್ಯದ ಡಾಲರ್ ಅನ್ನು ಕಾರಿನಿಂದ ರಸ್ತೆಯ ಮೇಲೆ ಎಸೆದಿದ್ದಾನೆ. ಎಲ್ಲ ನೂರು ಡಾಲರ್‌ಗಳ ನೋಟನ್ನು ಎಸೆಯಲಾಗಿದೆ. ಅದನ್ನು ಕಾಣುತ್ತಿದ್ದಂತೆಯೇ ಹಿಂದೆ ಬರುತ್ತಿದ್ದ ವಾಹನಗಳ ಸವಾರರೆಲ್ಲರೂ ಕಾರು ನಿಲ್ಲಿಸಿ, ಹಣ ಎತ್ತಿಕೊಳ್ಳಲು ಆರಂಭಿಸಿದ್ದಾರೆ. ಈ ವಿಚಾರ ತಿಳಿದು ಸುತ್ತ ಮುತ್ತಲಿನ ಊರುಗಳ ಜನರೂ ಸಹ ಬಂದು ಹಣ ಹುಡುಕಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Viral video: ನೂರಾರು ಕಾರುಗಳೊಂದಿಗೆ ಕೆಜಿಎಫ್ ಸ್ಟೈಲ್‌ನಲ್ಲಿ ಎಂಟ್ರಿ; ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ವಿಡಿಯೋ ವೈರಲ್
ನಮಗೆ ಸಮೀಪದಲ್ಲೇ ಯಾರೋ ಒಬ್ಬರು ರಸ್ತೆ ಮೇಲೆ ಹಣ ಎಸೆದಿರುವ ವಿಚಾರ ನಮ್ಮ ಕಿವಿಗೆ ಬಿತ್ತು. ನಾನು ಮತ್ತು ನನ್ನ ಬಾಯ್‌ಫ್ರೆಂಡ್ ಅಲ್ಲಿಗೆ ತೆರಳಿ ಹುಡುಕಿದೆವು. ನಮಗೆ ಒಟ್ಟು 300 ಡಾಲರ್ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ ಹಣ ಸಂಗ್ರಹಿಸಲು ಬಂದಿದ್ದ ಯುವತಿ. ಅಂದ ಹಾಗೆ ತನ್ನ ಬಳಿ ಸಾಕಷ್ಟು ಹಣವಿದ್ದು, ಬೇರೆಯವರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಹಣ ಎಸೆದಿದ್ದಾಗಿ ಕೊಲಿನ್ ಹೇಳಿಕೊಂಡಿದ್ದಾನೆ.
ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಕೊಲಿನ್ ಡೇವಿಸ್ ಅವರ ಕುಟುಂಬ ಪೊಲೀಸರ ಬಳಿ ಬಂದು ತಮ್ಮ ಅಳಲು ತೋಡಿಕೊಂಡಿದೆ. ಕುಟುಂಬಸ್ಥರು ಜಾಯಿಂಟ್ ಖಾತೆ ಮಾಡಿಕೊಂಡಿದ್ದು, ಅದರಲ್ಲಿದ್ದ ಹಣವನ್ನೆಲ್ಲ ಆತ ಖಾಲಿ ಮಾಡಿದ್ದಾನೆ ಎಂದು ಅವರು ದೂರಿದ್ದಾರೆ. ಆದರೆ ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಣ ಸಿಕ್ಕವರು ದಯಮಾಡಿ ಆ ಹಣವನ್ನು ಪೊಲೀಸರ ಬಳಿ ತಲುಪಿಸಿ ಎಂದು ಕುಟುಂಬ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾರಂಭಿಸಿದೆ.