ತಿರುವನಂತಪುರಂ: ಧರ್ಮಸ್ಥಳ ಸೇರಿ ಕರ್ನಾಟಕದ ಅನೇಕ ಪುಣ್ಯಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಯಾತ್ರೆ ಹೋಗುವವರನ್ನು ನೋಡಿರುತ್ತೀರಿ. ಆದರೆ ಕೇರಳದ ಈ ಒಬ್ಬ ವ್ಯಕ್ತಿ 8,600 ಕಿ.ಮೀ. ದೂರದ ಹಜ್‌ಗೆ ಪಾದಯಾತ್ರೆ ನಡೆಸಿದ್ದಾನೆ. ಬರೋಬ್ಬರಿ ಒಂದು ವರ್ಷದ ಕಾಲ ನಡೆದು ಇದೀಗ ಹಜ್ (Viral News) ತಲುಪಿದ್ದಾನೆ.
ಕೇರಳದ ಮಲಪ್ಪುರಂನ ವಲಂಚೇರಿಯ ನಿವಾಸಿಯಾಗಿರುವ ಯೂಟ್ಯೂಬರ್ ಶಿಹಾಬ್ ಚೋಟ್ಟೂರ್ ಈ ರೀತಿ ಸಾಹಸ ಮಾಡಿರುವ ವ್ಯಕ್ತಿ. ಆತ ಕಳೆದ ವರ್ಷ ಜೂನ್ 2ರಂದು ಮನೆಯಿಂದ ಕಾಲ್ನಡಿಗೆ ಆರಂಭಿಸಿದ್ದಾನೆ. ಭಾರತ, ಪಾಕಿಸ್ತಾನ, ಇರಾನ್ ಮತ್ತು ಕುವೈತ್ ಮಾರ್ಗವಾಗಿ ಸೌದಿ ಅರೇಬಿಯಾ ತಲುಪಿದ್ದಾನೆ. ಒಟ್ಟಾರೆಯಾಗಿ 8,640ಕಿ.ಮೀ. ದೂರ ನಡೆದಿದ್ದಾನೆ.
ಇದನ್ನೂ ಓದಿ: Viral Video: ಎಸ್ಎಸ್ಎಲ್ಸಿಯಲ್ಲಿ ಶೇ. 35 ಅಂಕ ಪಡೆದ ಮಗ; ಭರ್ಜರಿ ಖುಷಿಯಿಂದ ಸಂಭ್ರಮಿಸಿದ ಅಪ್ಪ-ಅಮ್ಮ
ಶಿಹಾಬ್ ಈ ವರ್ಷದ ಮೇ ತಿಂಗಳ ಎರಡನೇ ವಾರದಲ್ಲಿ ಕುವೈತ್ ಗಡಿ ದಾಟಿ ಸೌದಿ ಅರೇಬಿಯಾಕ್ಕೆ ತೆರಳಿದ್ದಾನೆ. ಅಲ್ಲಿ ಇಸ್ಲಾಂನ ಎರಡನೇ ಪವಿತ್ರ ನಗರ ಮತ್ತು ಪ್ರವಾದಿ ಮುಹಮ್ಮದ್ ಅವರ ಸಮಾಧಿ ಇರುವ ಮದೀನಾಕ್ಕೆ ತೆರಳಿದ್ದಾನೆ. ಅದಾದ ನಂತರ 21 ದಿನ ಬಿಟ್ಟು ಮೆಕ್ಕಾದತ್ತ ಹೆಜ್ಜೆ ಹಾಕಲಾರಂಭಿಸಿದ್ದಾನೆ. ಮದೀನಾದಿಂದ ಮೆಕ್ಕಾಗಿರು 440ಕಿ.ಮೀ ಅನ್ನು ಕೇವಲ 9 ದಿನಗಳಲ್ಲಿ ನಡೆದಿದ್ದಾನೆ. ಮೆಕ್ಕಾ ತಲುಪಿರುವ ಆತ ಅಲ್ಲಿಗೆ ಕೇರಳದಿಂದ ತನ್ನ ತಾಯಿ ಜೈನಾಬಾ ಬರುವುದನ್ನು ಕಾಯುತ್ತಿದ್ದಾನೆ. ತಾಯಿ ಬಂದ ಮೇಲೆ ಅವರು ಹಜ್‌ನ ಅಂತಿಮ ಯಾತ್ರೆ ನಡೆಸಲಿದ್ದಾರೆ.
ಶಿಹಾಬ್ ತನ್ನ ಪಾದಯಾತ್ರೆ ಕುರಿತಾಗಿ ಯೂಟ್ಯೂಬ್‌ನಲ್ಲಿ ಬ್ಲಾಗ್‌ಗಳನ್ನು ಹಾಕಿದ್ದಾನೆ. ಅದರಲ್ಲಿ ಅವನು ಹೇಳಿರುವ ಪ್ರಕಾರ ಪಾಕಿಸ್ತಾನದಲ್ಲಿ ಆತನಿಗೆ ವೀಸಾ ಸಮಸ್ಯೆ ಉಂಟಾಗಿದೆ. ರಾಯಭಾರ ಕಚೇರಿಯಿಂದ ಅವರ ವೀಸಾವನ್ನು ನಿರಾಕರಿಸಲಾಗಿತ್ತು. ವೀಸಾ ಕೊಡುವುದಕ್ಕೆ ಲಾಹೋರ್ ಹೈಕೋರ್ಟ್ ಕೂಡ ಒಪ್ಪಿಗೆ ನೀಡಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ವೀಸಾಕ್ಕೆ ಅನುಮತಿ ನೀಡಲಾಗಿದ್ದು, ಅವರು ಫೆಬ್ರವರಿಯಲ್ಲಿ ಪಾಕಿಸ್ತಾನದಿಂದ ಮೆಕ್ಕಾದತ್ತ ಹೊರಟರು.