ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹದಿಹರೆಯದವರೂ ಕೂಡ ಎಂಥೆಂಥದ್ದೋ ಕಾಯಿಲೆಗೆ ತುತ್ತಾಗಿ ಕೊನೆಯುಸಿರೆಳೆದುಬಿಡುತ್ತಾರೆ. ಆದರೆ ಇಲ್ಲೊಂದು ನಾಯಿ ಮಾತ್ರ ಹಾಗಿಲ್ಲ. ಪ್ರಪಂಚದ ಅತ್ಯಂತ ಹಿರಿಯ ನಾಯಿ ಎಂದು ದಾಖಲೆಯನ್ನೇ ಬರೆದಿರುವ ಈ ನಾಯಿ ಇದೀಗ ಬರ್ತ್‌ಡೇ ಸಂಭ್ರಮದಲ್ಲಿದೆ. ವೈರಲ್ (Viral News) ಆಗಿರುವ ಈ ನಾಯಿಯ ಬಗ್ಗೆ ಇಲ್ಲಿದೆ ಮಾಹಿತಿ.
ಪೋರ್ಚುಗಲ್‌ನ ಲೈರಾ ಜಿಲ್ಲೆಯಲ್ಲಿ ಲಿಯೋನೆಲ್ ಕೋಸ್ಟಾ ಹೆಸರಿನವರು ಬಾಬಿ ಹೆಸರಿನ ನಾಯಿ ಸಾಕಿದ್ದಾರೆ. ಅಂದ ಹಾಗೆ ಈ ಬಾಬಿ ಹುಟ್ಟಿದ್ದು 1992ರ ಮೇ 11ರಂದು. ಬಾಬಿ ಗುರುವಾರದಂದು 31ನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡಿದೆ. ಇದು ವಿಶ್ವದಲ್ಲೇ ಅತ್ಯಂತ ಹಿರಿಯ ನಾಯಿ ಎನ್ನುವ ದಾಖಲೆಯನ್ನೂ ಪಡೆದುಕೊಂಡಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಈ ವರ್ಷ ಫೆಬ್ರವರಿಯಲ್ಲಿ ಬಾಬಿಗೆ ಅವಾರ್ಡ್ ಕೊಟ್ಟಿದೆ.
ಇದನ್ನೂ ಓದಿ: IPL 2023 : ಅರ್ಜೆಂಟಲ್ಲಿ ಉಲ್ಟಾ ಪ್ಯಾಂಟ್ ಹಾಕಿಕೊಂಡು ಬಂದ ವೃದ್ಧಿಮಾನ್ ಸಾಹ! ಏನಾಯಿತು ಮುಂದೆ?
ಈ ಬಾಬಿಯ ಬರ್ತ್‌ಡೇ ಆಚರಣೆಯನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಲಿಯೋನೆಲ್ ನಿರ್ಧರಿಸಿದ್ದಾರೆ. ಶನಿವಾರದಂದು ಅದಕ್ಕೆಂದೇ ದೊಡ್ಡ ಪಾರ್ಟಿ ಮಾಡಲಾಗುತ್ತಿದೆ. ಅದರಲ್ಲಿ ಬಾಬಿಯ ಅಭಿಮಾನಿಗಳು ಹಾಗೂ ಲಿಯೋನೆಲ್ ಬಂಧುಗಳು ಸೇರಿದಂತೆ ಒಟ್ಟು 100 ಜನರಿಗೆ ಆಮಂತ್ರಣ ನೀಡಲಾಗಿದೆ.
ಬಾಬಿ ಬಗ್ಗೆ ಮಾತನಾಡಿರುವ ಲಿಯೋನೆಲ್, “ನಾನು ಈ ಹಿಂದೆ ಹಲವಾರು ನಾಯಿಗಳನ್ನು ಸಾಕಿದ್ದೆ. ಬಾಬಿಯ ತಾಯಿಯನ್ನೂ ಕೂಡ ನಾನೇ ಸಾಕಿದ್ದೆ. ಅವಳು 18 ವರ್ಷ ಬದುಕಿದ್ದಳು. ನಾನು ಯಾವ ನಾಯಿಯೂ ಕೂಡ 30 ವರ್ಷ ಮೇಲ್ಪಟ್ಟು ಬದುಕಲು ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆದರೆ ನಮ್ಮ ಬಾಬಿ ಬದುಕಿದ್ದಾಳೆ. ಅವಳ ಆರೋಗ್ಯ ಕೂಡ ಚೆನ್ನಾಗಿಯೇ ಇದೆ. ಆದರೆ ದಾಖಲೆ ಬರೆದ ಮೇಲೆ ಸಾಕಷ್ಟು ಸಮಸ್ಯೆ ಅವಳಿಗೆ ಆಗಿದೆ. ಬೇರೆ ಬೇರೆ ದೇಶಗಳಿಂದ ಪತ್ರಕರ್ತರು ಬಂದು ಆಕೆಯ ಫೋಟೋ ತೆಗೆದುಕೊಂಡಿರುವುದರಿಂದ ಅವಳಿಗೆ ಕಿರಿಕಿರಿಯಾಗಿದೆ” ಎಂದು ಹೇಳಿದ್ದಾರೆ.