ನಾಯಿಗಳು ಮನುಷ್ಯನ ಸಾಥಿಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಮನುಷ್ಯನ ಜೊತೆಗೆ ಭಾವನಾತ್ಮಕಾಗಿ ಸ್ಪಂದಿಸುವ, ತನ್ನನ್ನು ಸಾಕಿದಾತನಿಗೆ ನಿಷ್ಠೆಯಿಂದಿರುವ, ಕುಟುಂಬ ಸದಸ್ಯನಂತೆ ಇರುವ ಪ್ರಾಣಿಯೆಂದರೆಅದು ನಾಯಿ. ಇಂತಹ ನಾಯಿಯ ಜೀವಿತಾವಧಿ ಬಹಳ ಕಡಿಮೆ. ೧೦-೧೫ ವರ್ಷಗಳ ಕಾಲ ಬದುಕುವ ನಾಯಿ ಇಷ್ಟರೊಳಗೆ ಮುದುಕನಾಗಿ ಅಸುನೀಗುತ್ತದೆ. ಆದರೆ, ಪ್ರಪಂಚದಲ್ಲಿ ನಾಯಿ ಹೆಚ್ಚೆಂದರೆ ಎಷ್ಟು ವರ್ಷ ಬದುಕಿರಬಹುದು?, ಅತೀ ಹೆಚ್ಚು ಕಾಲ ಬದುಕಿದ ನಾಯಿ ಯಾವುದಿದ್ದೀತು ಎಂಬ ಪ್ರಶ್ನೆ ಸುಮ್ಮನೆ ಒಮ್ಮೆ ಕುತೂಹಲಕ್ಕಾದರೂ ಬಂದು ಹೋಗಿದೆಯೋ? ಹಾಗಿದ್ದರೆ ಇಲ್ಲಿ ಕೇಳಿ. ಇಲ್ಲೊಂದು ನಾಯಿ ಜಗತ್ತಿನಲ್ಲೇ ಅತೀ ಹೆಚ್ಚು ಕಾಲ ಬದುಕುಳಿದ ನಾಯಿ ಎಂಬ ಗಿನ್ನಿಸ್ ದಾಖಲೆ ಬರೆದಿದೆ.
ಮನುಷ್ಯ ೧೦೦ ವರ್ಷಕ್ಕಿಂತ ಹೆಚ್ಚು ಕಾಲ ಬದುಕಿದರೆ ನಾವು ಅಚ್ಚರಿಪಟ್ಟುಕೊಳ್ಳುತ್ತೇವೆ. ಅಂತೆಯೇ ಅಚ್ಚರಿಯಿಂದ ಈಗ ಈ ನಾಯಿಯ ಕಡೆಗೆ ನೋಡಬೇಕಾಗಿದೆ. ಯಾಕೆಂದರೆ, ಕ್ಯಾಲಿಫೋರ್ನಿಯಾದ ಈ ನಾಯಿ ಬರೋಬರಿ ೨೨ ವರ್ಷಗಳಿಂದ ಬದುಕಿದೆಯಂತೆ. ಇಂದಿಗೂ ಆರೋಗ್ಯವಾಗಿದೆಯಂತೆ!
ಹೌದು. ಗಿನೋ ಊಲ್ಫ್ ಎಂಬ ಕ್ಯಾಲಿಫೋರ್ನಿಯಾ ಲಾಸ್ ಎಂಜಲೀಸ್‌ನ ನಾಯಿ ಗಿನ್ನಿಸ್ ಪುಸ್ತಕದಲ್ಲಿ ತನ್ನ ಹೆಸರು ಬರೆಸಿಕೊಂಡಿದೆ. ಈ ನಾಯಿಯ ಒಡೆಯ ಅಲೆಕ್ಷ್ ಊಲ್ಫ್ (೪೦) ತನ್ನ ಹೆಸರಿನ ಊಲ್ಫನ್ನು ನಾಯಿಗೂ ಇಟ್ಟಿದ್ದು ನಾಯಿಯನ್ನು ೨೦೦೨ರಲ್ಲಿ ದತ್ತು ತೆಗೆದುಕೊಂಡು ಮನೆಗೆ ಕರೆದುಕೊಂಡು ಬಂದಿದ್ದರಂತೆ.
ಇದನ್ನೂ ಓದಿ | Viral Video | ಸರಸರ ಬಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಪೊದೆಯೊಳಗೆ ಸರಿದು ಹೋದ ಹಾವು!
ಅಲೆಕ್ಸ್ ಊಲ್ಫ್ ಅವರು ಹೇಳುವಂತೆ, ನಾನು ನಾಯಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದೇನೆ. ಉತ್ತಮ ಆಹಾರವನ್ನೂ ನೀಡಿದ್ದು ಈ ವಯಸ್ಸಿನಲ್ಲೂ ಅದು ಇರುವ ರೀತಿ ನೋಡಿದರೆ ಮುದ್ದು ಬರುತ್ತದೆ. ನಾಯಿಗಳು ಈ ವಯಸ್ಸಿನಲ್ಲಿ ಇಷ್ಟು ಚೆನ್ನಾಗಿ ಇರುವುದು ಅದ್ಭುತವೇ ಸರಿ ಎಂದಿದ್ದಾರೆ.
ಗಿನೋಗೆ ನವೆಂಬರ್ ೧೫ ೨೦೨೨ಕ್ಕೆ ಸರಿಯಾಗಿ ೨೨ ವರ್ಷ ೫೨ ದಿನಗಳಾಗುತ್ತವೆ. ಈ ನಾಯಿ ಪುಟಾಣಿಯಿದ್ದಾಗ ನನ್ನ ಹೆತ್ತವರ ಮನೆ ಹಿಂದೆ ಇದ್ದ ಸ್ವಲ್ಪ ಜಾಗದಲ್ಲಿ ಸುತ್ತಾಡಲು ಇಷ್ಟಪಡುತ್ತಿತ್ತು. ಈ ನಾಯಿಯ ಜೊತೆಗೆ ನಾನು ಸುತ್ತಿದ್ದು ಅಷ್ಟಷ್ಟಲ್ಲ. ಎಲ್ಲ ಜಾಗಗಳಿಗೂ ನನ್ನ ಜೊತೆಗೆ ಬರುತ್ತಿದ್ದ ಬಹಳ ಫ್ರೆಂಡ್ಲೀ ಚುರುಕು ನಾಯಿ. ಈಗಲೂ ಇಷ್ಟು ವಯಸ್ಸಾದರೂ ಆರೋಗ್ಯವಾಗಿರುವುದು ವಿಶೇಷ ಎಂದು ಹೇಳಿದ್ದಾರೆ.
ಬೆಂಕಿಯ ಬಳಿ ನಿದ್ದೆ ಮಾಡುವುದು ಇದಕ್ಕೆ ಇಷ್ಟ. ಮೊದಲಿಗೆ ಹೋಲಿಸಿದರೆ ಇದರ ದೃಷ್ಟಿ ಈಗ ಮಂದವಾಗಿದೆ. ಬಿಟ್ಟರೆ ಎಲ್ಲದರಲ್ಲೂ ಪರ್ಫಕ್ಟ್. ಉತ್ತಮ ಆಹಾರಾಭ್ಯಾಸ ಪಾಲಿಸಿಕೊಂಡು ಆರೋಗ್ಯವಾಗಿರುವ ಇದು ಇಷ್ಟು ವರ್ಷ ಬದುಕಿರುವುದು ಗಿನ್ನಿಸ್ ರೆಕಾರ್ಡ್‌ಗೆ ಸೇರಿಸಲಾಗಿದೆ. ಗಿನೋ ಗಿನ್ನಿಸ್‌ನಲ್ಲಿ ಹೆಸರು ಪಡೆದಿದದು ಬಹಳ ಖುಷಿಯಾಗುತ್ತಿದೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ | Video Viral | ಆನೆಯನ್ನು ನಾಯಿ ಅಟ್ಟಾಡಿಸಿತೋ ಇಲ್ಲವೇ ನಾಯಿ ಜತೆ ಆನೆ ಆಟವಾಡಿತೋ; ವೈರಲ್ ಆಯ್ತು ವಿಡಿಯೊ!