ಪ್ರತಿಯೊಬ್ಬರ ಆಹಾರವೂ ಅವರವರ ವೈಯಕ್ತಿಕ ಆಯ್ಕೆ. ಅದು ಮಾಂಸಾಹಾರವಿರಲಿ, ಸಸ್ಯಾಹಾರವಿರಲಿ, ವೇಗನ್ (vegan diet) ಇರಲಿ, ಯಾರಿಗೇ ಆದರೂ ತಮ್ಮ ಆಯ್ಕೆಯ ಆಹಾರದ ಅಭ್ಯಾಸವಿರುತ್ತದೆ. ವೃತ್ತಿಯ ಸಂದರ್ಭ ಪ್ರತಿಯೊಬ್ಬರ ಆಹಾರ ಪದ್ಧತಿಯ ಮೇಲೆ ಸಂಸ್ಥೆಗಳು ಸಾಮಾನ್ಯವಾಗಿ ಯಾವ ನಿರ್ಬಂಧವನ್ನೂ ಹೇರುವುದಿಲ್ಲ. ಎಲ್ಲರಿಗೂ ಅವರವರ ಆಹಾರವನ್ನು ಪಾಲಿಸುವ ಸ್ವಾತಂತ್ರ್ಯ ಇರುತ್ತದೆ. ಆದರೆ, ಸಂಸ್ಥೆಯೊಂದು ತನ್ನ ಕೆಲಸಗಾರರಿಗೆ ಕಚೇರಿಯ ಸಮಯದಲ್ಲಿ ವೇಗನ್ ಆಹಾರ ಪದ್ಧತಿಯನ್ನು ಪಾಲಿಸಬೇಕು ಎಂಬ ನಿಯಮ ಹೇರಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ (viral news) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು, ಸಂಸ್ಥೆಯ ಹೆಸರು ಹಾಗೂ ವಿವರಗಳು ಲಭ್ಯವಿಲ್ಲದಿದ್ದರೂ, ಇದೀಗ ಈ ಕುರಿತಾದ ಪೋಸ್ಟ್ ಒಂದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಸಂಸ್ಥೆಯೊಂದಕ್ಕೆ ಕೆಲಸಕ್ಕಾಗಿ ಅರ್ಜಿ ಗುಜರಾಯಿಸಿದ್ದ ವ್ಯಕ್ತಿಯೊಬ್ಬರು ಈ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ಇದು ಚರ್ಚೆಗೀಡಾಗುತ್ತಿದೆ. ʻಇತ್ತೀಚೆಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಅವರಿಂದ ಈ ಕುರಿತಾಗಿ ಇಮೇಲ್ ಒಂದು ಬಂದಿತ್ತು. ಅದರಲ್ಲಿ ಅವರದೊಂದು ವಿಚಿತ್ರ ನಿಯಮವಿತ್ತುʼ ಎಂದು ವ್ಯಕ್ತಿಯೊಬ್ಬರು ಈ ಕುರಿತಾದ ಮಾಹಿತಿಯನ್ನು ಹೀಗೆ ಹಂಚಿಕೊಂಡಿದ್ದಾರೆ. ʻನೀವು ನಮ್ಮಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಕ್ಕಾಗಿ ವಂದನೆಗಳು. ಆದರೆ, ನಿಮ್ಮನ್ನು ಶಾರ್ಟ್‌ಲಿಸ್ಟ್ ಮಾಡುವ ಮೊದಲು ಸಂಸ್ಥೆಯ ಕೆಲವು ನಿಬಂಧನೆಗಳನ್ನು ನಿಮಗೆ ತಿಳಿಸಲು ಇಚ್ಛಿಸುತ್ತೇವೆ. ಅದು ನಿಮಗೆ ಒಪ್ಪಿಗೆಯಾದಲ್ಲಿ ನಮ್ಮ ಆಯ್ಕೆಯ ಪ್ರಕ್ರಿಯೆಗಳು ಮುಂದುವರಿಯುತ್ತದೆ. ಯಾಕೆಂದರೆ ನಮ್ಮ ಸಂಸ್ಥೆಯ ಆವರಣ ಪೂರ್ಣವಾಗಿ ವೇಗನ್ ಆಹಾರ ಪದ್ಧತಿಯನ್ನು ಪಾಲಿಸುತ್ತಿದ್ದು, ನೀವೂ ಕೂಡಾ, ಸಂಸ್ಥೆಯ ಆವರಣದಲ್ಲಿ ಕಚೇರಿ ಸಮಯದಲ್ಲಿ ಅದೇ ಆಹಾರ ಪದ್ಧತಿಯನ್ನೇ ಪಾಲಿಸಲು ಕೋರಲಾಗಿದೆ. ನೀವು ವೇಗನ್ ಆಹಾರವನ್ನೇ ಮಧ್ಯಾಹ್ನಕ್ಕೆ ಊಟದ ಡಬ್ಬಿಯಲ್ಲಿ ತರಬೇಕಾಗುತ್ತದೆ. ಸಂಸ್ಥೆಯ ಆವರಣದಲ್ಲಿ ಕುಡಿಯಲೂ ಸಹ ಸಸ್ಯಾಧಾರಿತ ಹಾಲನ್ನೇ ತರಬೇಕು. ಕಚೇರಿಯ ಸಮಯದ ಹೊರತು ಬೇರೆಡೆ ನೀವು ನಿಮ್ಮ ಇಚ್ಛಿತ ಆಹಾರ ಪದ್ಧತಿ ಪಾಲಿಸಬಹುದಾದರೂ, ಕಚೇರಿಯಲ್ಲಿ ಇದನ್ನೇ ಪಾಲಿಸಬೇಕಾಗಿರುವುದರಿಂದ ನೀವು ದಯವಿಟ್ಟು ಈ ಬಗ್ಗೆ ಉತ್ತರಿಸಿದರೆ ಆಯ್ಕೆ ಪ್ರಕ್ರಿಯೆ ಸುಗಮವಾಗುತ್ತದೆ. ಇದಕ್ಕೆ ನಿಮ್ಮ ಒಪ್ಪಿಗೆಯ ಆಧಾರದಲ್ಲಿ ನಾವು ಆಯ್ಕೆ ಪ್ರಕ್ರಿಯೆ ಮುಂದುವರಿಸುತ್ತೇವೆʼ ಎಂದು ಕಚೇರಿಯಿಂದ ಬಂದ ಇಮೇಲ್‌ನಲ್ಲಿ ವಿವರವಾಗಿ ಬರೆಯಲಾಗಿತ್ತು ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Vegan Life: ಈ ಬಾಲಿವುಡ್ ಹೀರೋಯಿನ್‌ಗಳು ವೇಗನ್ ಆಗಿಯೂ ಆರೋಗ್ಯವಾಗಿದ್ದಾರೆ!
ರೆಡಿಟ್‌ನಲ್ಲಿ ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, ಇದಕ್ಕೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಬಹುತೇಕರು, ಇದು ಸಂಸ್ಥೆಯೊಂದರ ಬೇಜವಾಬ್ದಾರಿಯುತ ನಡವಳಿಕೆ ಎಂದು ಸಂಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನೊಬ್ಬರು, ಇಲ್ಲೊಂದು ವೇಗನ್ ಮಾರ್ಕೆಟ್ ಇದ್ದು, ಅದರೊಳಗೂ ಇಂತಹ ನಿಯಮವನ್ನೇ ಮಾಡಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ. ತಾನೊಂದು ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಆ ರೆಸ್ಟೊರೆಂಟ್‌ನಲ್ಲೂ ಇದೇ ನಿಯಮ ಇಟ್ಟಿದ್ದರು ಎಂದೂ ಮತ್ತೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಇದೊಂದು ನಾಯಿ ರಕ್ಷಣಾ ಕೇಂದ್ರವೊಂದರ ಕೆಲಸದ ಕುರಿತಾದ ಅರ್ಜಿಯಾಗಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Viral Video : ವೇದಿಕೆ ಮೇಲೆ ಧೂಳೆಬ್ಬಿಸಿದ ಭಲೇ ಜೋಡಿ; ಸಕತ್ ಆಗಿದೆ ಈ ಸೆನೋರಿಟಾ ಡ್ಯಾನ್ಸ್