ವಾಷಿಂಗ್ಟನ್: ʼಮೂಗಿಗಿಂತ ಮೂಗುತಿ ಭಾರʼ ಎನ್ನುವ ಗಾದೆ ಮಾತಿದೆ. ಬಹುಶಃ ಈ ಮಾತು ಅಮೆರಿಕದ ವ್ಯಕ್ತಿಯೊಬ್ಬರಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಯಾಕೆಂದರೆ ಕಾರಿಗಿಂತ ಹಲವು ಪಟ್ಟು ಹೆಚ್ಚಿನ ದಂಡ ಅವರಿಗೆ ಬಂದಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕಾಗಿ ಜಾರ್ಜಿಯಾ ಮೂಲದ ಈತನಿಗೆ ಬರೋಬ್ಬರಿ 1.4 ಮಿಲಿಯನ್ ಡಾಲರ್ (11.65 ಕೋಟಿ ರೂ.) ದಂಡ ವಿಧಿಸಲಾಗಿದೆ! ಸದ್ಯ ಈ ಸುದ್ದಿ ವೈರಲ್ ಆಗಿದೆ (Viral News).
ಏನಿದು ಪ್ರಕರಣ?
ಕಾನರ್ ಕ್ಯಾಟೊ ಎಂಬ ವ್ಯಕ್ತಿ ಸೆಪ್ಟಂಬರ್ 2ರಂದು ಸವನ್ನಾ ಮೂಲಕ ವಾಹನ ಚಲಾಯಿಸುತ್ತಿದ್ದರು. ಗಂಟೆಗೆ 55 ಮೈಲಿ ವೇಗದಲ್ಲಿ ಸಾಗಬೇಕಾದ ರಸ್ತೆಯಲ್ಲಿ ಕಾರು ಗಂಟೆಗೆ 90 ಮೈಲಿ ವೇಗದಲ್ಲಿ ಸಾಗುತ್ತಿತ್ತು. ಇದು ಜಾರ್ಜಿಯಾ ಸ್ಟೇಟ್ ಗಸ್ತು ಪಡೆಯ ಗಮನಕ್ಕೆ ಬಂದಿತ್ತು. ಇದರಿಂದ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ. ಕಾನರ್ “ಸೂಪರ್ ಸ್ಪೀಡರ್” ಟಿಕೆಟ್ ಪಡೆಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ವೇಗದ ಮಿತಿಗಿಂತ 35 ಮೈಲಿ ಅಥವಾ ಅದಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಓಡಿಸುವ ಚಾಲಕರಿಗೆ ಇದನ್ನು ನೀಡಲಾಗುತ್ತದೆ ಮತ್ತು ದಂಡವು 1,000 ಡಾಲರ್ (83,320 ರೂ.) ಮೀರುವುದಿಲ್ಲ. ಹೀಗಾಗಿ 1.4 ಮಿಲಿಯನ್ ಡಾಲರ್ ದಂಡ ಮುದ್ರಣ ದೋಷ ಎಂದು ಭಾವಿಸಿ, ಕಾನರ್ ನ್ಯಾಯಾಲಯಕ್ಕೆ ಕರೆ ಮಾಡಿದ್ದರು. ನ್ಯಾಯಾಲಯವು ಮೊತ್ತವನ್ನು ದೃಢಪಡಿಸಿದ್ದಷ್ಟೆ ಅಲ್ಲದೆ ಅದನ್ನು ಪಾವತಿಸಬೇಕು ಅಥವಾ ನ್ಯಾಯಾಧೀಶರ ಮುಂದೆ ಹಾಜರಾಗಬೇಕು ಎಂದು ಹೇಳಿದೆ.
ಇದನ್ನೂ ಓದಿ: Viral Video: ಸನ್‌ರೂಫ್ ಕಾರಿನ ಮೇಲೆ ಕಪಲ್ ಫುಲ್ ಕಿಸ್ಸಿಂಗ್! ಕ್ರಮ ಕೈಗೊಳ್ಳಿ ಅಂದ್ರು ನೆಟ್ಟಿಗರು
”ಇದು ಮುದ್ರಣ ದೋಷವಾಗಿರಬಹುದು ಎಂದು ನಾನು ಹೇಳಿದೆ. ಅದಕ್ಕೆ ಅವರು ಇಲ್ಲ, ಸರ್, ನೀವು ಅಷ್ಟು ಮೊತ್ತವನ್ನು ಪಾವತಿಸಿ ಅಥವಾ ಡಿಸೆಂಬರ್ 21ರಂದು ಮಧ್ಯಾಹ್ನ 1.30ಕ್ಕೆ ನ್ಯಾಯಾಲಯಕ್ಕೆ ಬನ್ನಿ ಎಂದು ಹೇಳಿದ್ದಾರೆʼʼ ಎಂದು ಕಾನರ್ ತಿಳಿಸಿದ್ದಾರೆ. ಸ್ಥಳೀಯ ರೆಕಾರ್ಡರ್ ಕೋರ್ಟ್ ಬಳಸುವ ಇ-ಸೈಟೇಶನ್ ಸಾಫ್ಟ್‌ವೇರ್‌ನಿಂದ ದಂಡ ಹಾಕಲಾಗಿದೆ ಎಂದು ಸವನ್ನಾ ನಗರದ ವಕ್ತಾರ ಜೋಶುವಾ ಪೀಕಾಕ್ ಸ್ಪಷ್ಟಪಡಿಸಿದ್ದಾರೆ.
ಮುಂದಿನ ನಡೆ ಏನು?
ಕಾನರ್ ನ್ಯಾಯಾಲಯಕ್ಕೆ ಹಾಜರಾದ ನಂತರ ನ್ಯಾಯಾಧೀಶರು ನಿಜವಾದ ದಂಡವನ್ನು ನಿಗದಿಪಡಿಸುತ್ತಾರೆ ಎನ್ನಲಾಗಿದೆ. ಈ ಮೊತ್ತವು ಯಾರನ್ನೂ ಹೆದರಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸರ್ಕಾರದ ವಕ್ತಾರರು ಉಲ್ಲೇಖಿಸಿದ್ದಾರೆ. ಇಲ್ಲಿ 2017ರಿಂದ ಇ-ಸೈಟೇಶನ್ ಸಾಫ್ಟ್‌ವೇರ್ ವಿಧಾನವನ್ನು ಬಳಸುತ್ತಿದೆ. ದಂಡ ಪಾವತಿಸುವವರಲ್ಲಿ ಮೂಡುವ ಗೊಂದಲ ನಿವಾರಿಸಲು ಈ ವಿಧಾನ ಅನುಸರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಚಾರ ಉಲ್ಲಂಘನೆಗಳನ್ನು ನಿರ್ವಹಿಸಿದ ಕ್ರಿಮಿನಲ್ ಡಿಫೆನ್ಸ್ ಅಟಾರ್ನಿ ಸ್ನೇಹ್ ಪಟೇಲ್ ಕೂಡ ದಂಡದ ಮೊತ್ತ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಇಷ್ಟು ಹೆಚ್ಚಿನ ದಂಡವನ್ನು ತಾನು ಹಿಂದೆಂದೂ ನೋಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ʼʼಮೇಲ್ನೋಟಕ್ಕೆ ಇದು 5,000 ಡಾಲರ್ (4.16 ಲಕ್ಷ ರೂ.) ಮೊತ್ತದ ಅಪರಾಧದಂತೆ ಕಂಡು ಬರುತ್ತಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಇಷ್ಟು ದೊಡ್ಡ ಮೊತ್ತ ನೋಡಿ ಕಾನರ್ ಕಂಗಾಲಾಗಿದ್ದು, ಮುಂದಿನ ದಾರಿ ತೋಚದೆ ತಲೆ ಮೇಲೆ ಕೈ ಇಟ್ಟು ಕುಳಿತಿದ್ದಾರೆ.