Site icon Vistara News

Viral News: ಟ್ಯಾಟೂ ಅಲ್ಲ! ಚರ್ಮದೊಳಗೆ ಹರಿದಾಡುತ್ತಿರುವ ನೂರಾರು ಲಾರ್ವಗಳ ಅಪರೂಪದ ಕಾಯಿಲೆಯಿದು

viral larva disease

ಇದೊಂದು ಬಹಳ ಅಪರೂಪವಾದ ಕಾಯಿಲೆ. ಶೌಚಾಲಯ ಸ್ವಚ್ಛ ಮಾಡುವ ಕಾರ್ಮಿಕನೊಬ್ಬನ ಕೈಯ ಚರ್ಮದ ಒಳಗಿನ ಪದರದಲ್ಲಿ ನೂರಾರು ಲಾರ್ವಾಗಳು ಹರಿದಾಡುತ್ತಿರುವ ಅಪರೂಪದ ಕಾಯಿಲೆ ಬೆಳಕಿಗೆ ಬಂದಿದೆ.

64ರ ಹರೆಯದ ಸ್ಪೈನ್‌ ದೇಶದ ನಿವಾಸಿಗೆ ಈ ಅಪರೂಪದ ಸಮಸ್ಯೆ ಕಾಣಿಸಿಕೊಂಡಿದ್ದು, ಆತನ ಚರ್ಮದ ಒಳಗಿನ ಪದರದಲ್ಲಿ ಹರಿದಾಡುತ್ತಿರುವ ಹುಳಗಳು ಚರ್ಮದ ಮೇಲಿನಿಂದಲೂ ಪಾರದರ್ಶಕವಾಗಿ ಕಾಣಬಹುದಾಗಿದ್ದು ವೈದ್ಯರನ್ನೂ ದಿಗ್ಭ್ರಮೆಗೊಳಿಸಿದೆ. ವಿಪರೀತ ತುರಿಕೆಯ ಜೊತೆಗೆ ಬೇದಿಯೂ ಆರಂಭವಾಗಿದ್ದರಿಂದ ಆತ ತನಗೇನೋ ತೊಂದರೆಯಿದೆ ಎಂದು ಕೈಯ ಮೇಲಿನ ತುರಿಕೆಗೆ ಒಳಗಾದ ಚರ್ಮವನ್ನು ವೈದ್ಯರಿಗೆ ತೋರಿಸಿದಾಗಲೇ ಈ ವಿಚಿತ್ರ ಬೆಳಕಿಗೆ ಬಂದಿದೆ. ಚರ್ಮದ ಒಳಗೆ ಹರಿದಾಡುವ ಹುಳಗಳು ಚರ್ಮದ ಮೇಲಿನಿಂದಲೂ ಕಾಣಬಹುದಾಗಿದ್ದು ಇದೊಂದು ವಿಚಿತ್ರವಾದ ಹಾಗೂ ಅಷ್ಟೇ ಅಪರೂಪವಾದ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.

ಇದು ನೋಡಲು ಚರ್ಮದ ಮೇಲೆ ಟ್ಯಾಟೂ ಬಿಡಿಸಿದಂತೆ ಕಾಣುತ್ತಿದ್ದು, ಬಹುಶಃ ಯಾವುದೋ ಪರಾವಲಂಬಿ ಲಾರ್ವಾ ದೇಹಕದೊಳಕ್ಕೆ ಪ್ರವೇಶಿಸಿದೆ. ಆದರೆ, ಇದು ಹೇಗೆ ಈತನ ದೇಹಕ್ಕೆ ಪ್ರವೇಶಿಸಿದೆ ಎಂದು ತಿಳಿಯುತ್ತಿಲ್ಲ ಎಂದು ವೈದ್ಯರ ತಂಡ ಹೇಳಿದೆ. ದೇಹದ ಚರ್ಮದೊಳಕ್ಕೆ ಪ್ರವೇಶಿಸಿರುವ ಲಾರ್ವಾವೊಂದು 24 ಗಂಟೆಗಳಲ್ಲಿ ದೇಹದೊಳಕ್ಕೆ ಚರ್ಮದ ಅಡಿಯಲ್ಲಿ ಚಲಿಸುತ್ತಿದೆ. ಇವುಗಳ ಸಂಖ್ಯೆಯೀಗ ಹೆಚ್ಚಾಗುತ್ತಿದೆ. ಬಹುಶಃ, ಸ್ವಚ್ಛತೆಯ ಕಾರ್ಯದಲ್ಲಿದ್ದಾಗ ಈತನಿಗೆ ಯಾವುದೋ ಇನ್‌ಫೆಕ್ಷನ್‌ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.

ಮ್ಯಾಡ್ರಿಡ್‌ ಯುನಿವರ್ಸಿಟಿ ಆಸ್ಪತ್ರೆಯ ವೈದ್ಯರ ಪ್ರಕಾರ, ಸ್ಟ್ರಾಂಜಿಲಾಯ್ಡ್ಸ್‌ ಸ್ಟೆರ್ಕೋರಾಲಿಸ್‌ ಎಂಬ ಅಪರೂಪದ ಪರಾವಲಂಬಿ ಜೀವಿ ಈತನ ದೇಹದೊಳಕ್ಕೆ ಪ್ರವೇಶಿಸಿದೆ. ಇದು ಸ್ಟ್ರಾಂಜಿಲಾಡಯಾಸಿಸ್‌ ಎಂಬ ಕಾಯಿಲೆಯನ್ನು ತರುತ್ತದೆ ಎಂದು ಹೇಳಿದೆ.

ಈ ಪರಾವಲಂಬಿ ಲಾರ್ವಾವು ದೇಹದೊಳಕ್ಕೆ ಪ್ರವೇಶಿಸಿದರೂ, ಕೆಲವೊಮ್ಮೆ ವರ್ಷಗಳವರೆಗೆ ತಿಳಿಯುವುದೇ ಇಲ್ಲ, ಹಾಗೂ ಯಾವ ಬಗೆಯ ರೋಗಲಕ್ಷಣಗಳನ್ನೂ ತೋರಿಸುವುದಿಲ್ಲ. ಹಲವರಿಗೆ ಇದು ದೇಹದೊಳಕ್ಕೆ ಪ್ರವೇಶಿಸಿದೆ ಎಂಬುದೂ ತಿಳಿಯುವುದೇ ಇಲ್ಲ. ಆದರೆ, ಈತನ ವಿಷಯದಲ್ಲಿ ಹಾಗಾಗಿಲ್ಲ. ಬಹುಶಃ, ಈತನ ದೇಹದೊಳಕ್ಕೆ ಬಹಳ ಹಿಂದೆಯೇ ಪ್ರವೇಶಿಸಿರುವ ಸಾಧ್ಯತೆಯೂ ಇದೆ. ಸ್ವಚ್ಛತಾ ಕಾರ್ಯದ ಕಾರ್ಮಿಕನಾಗಿರುವುದರಿಂದ ಆ ಸಾಧ್ಯತೆಗಳೂ ಇವೆ. ಹಾಗಾಗಿ ಈತನಿಗೆ ಈಗಾಗಲೇ ಚಿಕಿತ್ಸೆ ಆರಂಭಿಸಲಾಗಿದೆ. ಈತನ ರೋಗಲಕ್ಷಣಗಳನ್ನು ಗಮನಿಸಿ ಆತನಿಗೆ ಹಾರ್ಮೋನ್‌ ಥೆರಪಿ ಆರಂಭಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈತನ ಮಲದ ಸ್ಯಾಂಪಲ್‌ನಲ್ಲೂ ಈ ಜೀವಿ ಇರುವುದು ಪತ್ತೆಯಾಗಿದೆ. ಹಾಗಾಗಿ ಈತನ ದೇಹವಿಡೀ ಈ ಪರಾವಲಂಬಿ ಜೀವಿಗಳು ಮನೆ ಮಾಡಿರುವುದರಿಂದ ಈತನಿಗೆ ಅಂಗಾಂಗ ಹಾನಿ ಉಂಟಾಗುವ ಸಂಭವ ಹೆಚ್ಚಿದೆ ಎಂದು ವೈದ್ಯರು ಹೇಳಿದ್ದು ಈತನನ್ನು ಮುತುವರ್ಜಿಯಿಂದ ಗಮನಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದೆ.

ಇದನ್ನೂ ಓದಿ: Viral News : 58 ಲಕ್ಷ ರೂ. ಸಂಬಳವಿದ್ದರೂ ಗರ್ಲ್‌ಫ್ರೆಂಡ್‌ ಇಲ್ಲ; ಬೇಸರ ತೋಡಿಕೊಂಡ ಬೆಂಗಳೂರಿನ ಟೆಕ್ಕಿ!

Exit mobile version