ಸದ್ಯ ಬೆಳೆಯುತ್ತಿರುವ ಇಂಧನ ಸಮಸ್ಯೆ, ಪರಿಸರ ಮಾಲಿನ್ಯ ಹಾಗೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬಹಳಷ್ಟು ದೇಶಗಳು ಜನರನ್ನು ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೇರಣೆ ನೀಡುತ್ತಿದ್ದು, ಇದೀಗ ರೊಮೇನಿಯಾ ದೇಶ ಈ ಹಿನ್ನೆಲೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಜನರಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಪ್ರಚೋದಿಸುವುದನ್ನೂ ಮುಖ್ಯ ಗುರಿಯನ್ನಾಗಿಸಿಕೊಂಡು, ಅದರ ಜೊತೆಗೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಈ ವಿನೂತನ ಆಕರ್ಷಕ ತಂತ್ರ ಬಳಸುತ್ತಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಕಾಣುವಂತೆ ಸಾರ್ವಜನಿಕ ಸಾರಿಗೆಯ ಪಕ್ಕದಲ್ಲೇ ಟೆಲಿಫೋನ್ ಬೂತ್‌ನಂತಹ ಬೂತ್ ಒಂದನ್ನು ಇಡಲಾಗಿದೆ. ಬೂತ್‌ನಲ್ಲಿ ಇಪ್ಪತ್ತು ಬಸ್ಕಿ (ಸ್ಕ್ವಾಟ್) ವ್ಯಾಯಾಮವನ್ನು ಮಾಡುವ ಟಾಸ್ಕ್ ಸಾರ್ವಜನಿಕರಿಗೆ ನೀಡಲಾಗಿದ್ದು, ಇದರಲ್ಲಿ ಪರಿಪೂರ್ಣವಾಗಿ ೨೦ ಬಸ್ಕಿ ತೆಗೆದ ಮಂದಿಗೆ ಉಚಿತ ಬಸ್ ಟಿಕೆಟ್ ನೀಡಲಾಗುತ್ತಿದೆಯಂತೆ!
ಎಟಿಯಂ ಮೆಷಿನ್‌ನಂಥ ಒಂದು ಮೆಷಿನ್ ಎದುರು ನಿಂತು ಈ ವ್ಯಾಯಾಮ ಮಾಡಬೇಕಾಗುತ್ತದೆ. ಬೂತ್‌ನಲ್ಲಿ ಕ್ಯಾಮೆರಾ ಕೂಡಾ ಅಳವಡಿಸಲಾಗಿದ್ದು, ಪ್ರತಿಯೊಬ್ಬರೂ ಸರಿಯಾಗಿ ೨೦ ಬಾರಿ ವ್ಯಾಯಾಮ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸಿ, ಅಂಥವರಿಗೆ ಮಾತ್ರ ಉಚಿತ ಟಿಕೆಟ್ಟನ್ನು ನೀಡಲಾಗುತ್ತಿದೆಯಂತೆ. ಸರಿಯಾದ ಸಂಖ್ಯೆಯ ವ್ಯಾಯಾಮ ಮಾಡಿದ ಮಂದಿ ಮಾತ್ರ ಮೆಷಿನ್ ಮೂಲಕ ಉಚಿತ ಟಿಕೆಟ್ ಪಡೆಯಲು ಅರ್ಹರಾಗುತ್ತಾರಂತೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಂದಿನಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಿಲಿಯಗಟ್ಟಲೆ ವೀಕ್ಷಣೆ ಗಳಿಸಿದೆ. ಬಹಳಷ್ಟು ಮಂದಿ ಇದೊಂದು ಉತ್ತಮ ಐಡಿಯಾ ಎಂದು ರೊಮೇನಿಯಾ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಹಣದ ಉಳಿತಾಯದ ಜೊತೆಗೆ ಪರಿಸರವನ್ನೂ ಉಳಿಸಿದಂತಾಗುತ್ತದೆ. ಪರಿಸರ ಉಳಿಸುವ ಕೆಲಸಕ್ಕೆ ಪ್ರತಿಯೊಬ್ಬರ ಕೈಯಿಂದ ಪುಟ್ಟ ಕಾಣಿಕೆಯಿದು ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | Viral post | ದೇವಸ್ಥಾನದೆದುರು ಹೊಸ ಹೆಲಿಕಾಪ್ಟರ್ ತಂದು ವಾಹನ ಪೂಜೆ ಮಾಡಿಸಿದ ಉದ್ಯಮಿ!
ಅಂದಹಾಗೆ ಇದು ದಿನನಿತ್ಯದ ಬಳಕೆಗೆ ಮಾಡಿದ್ದಲ್ಲ ಎಂದು ರೊಮೇನಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. ಈ ಹೊಸ ಐಡಿಯಾವನ್ನು ಅಲ್ಲಿನ ಕ್ರೀಡಾ ಉತ್ಸವದ ಹಿನ್ನೆಲೆಯಲ್ಲಿ ವಿಶೇಷವಾಗಿ ಆಯೋಜಿಸಲಾಗಿತ್ತು. ಇದರ ಅಧಿಕೃತ ವೆಬ್‌ಸೈಟ್ ಹೇಳುವಂತೆ, ಈ ಯೋಜನೆಯ ಹೆಸರು ಹೆಲ್ತ್ ಟಿಕೆಟ್ ಎಂದಾಗಿದ್ದು, ಕ್ರೀಡಾ ಉತ್ಸವವೊಂದರ ಹಿನ್ನೆಲೆಯಲ್ಲಿ ವಿಶೇಷವಾಗಿ ಅಳವಡಿಸಲಾಗಿತ್ತು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ರೊಮೇನಿಯಾ ದೇಶದಲ್ಲಿ ವ್ಯಕ್ತವಾಗಿದ್ದು, ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಜನರು ಇದಕ್ಕೆ ಕೈಜೋಡಿಸಿದ್ದಾರೆ. ಎರಡು ನಿಮಿಷದ ಅಂತರದೊಳಗೆ ೨೦ ಸ್ವ್ಕಾಟ್ ವ್ಯಾಯಾಮ ಮಾಡಿದ ಮಂದಿಗಷ್ಟೇ ಉಚಿತ ಟಿಕೆಟ್ ನೀಡಲಾಗುತ್ತಿತ್ತು. ಜನರು ಇದರಲ್ಲಿ ಉತ್ಸಾಹದಿಂದ ಭಾಗವಹಿಸಿ, ಈ ಯೋಜನೆ ಅತ್ಯದ್ಭುತ ರೀತಿಯಲ್ಲಿ ಜನರಿಂದ ಮನ್ನಣೆ ಗಳಿಸಿತು ಎಂದು ಅದು ಹೇಳಿದೆ.
ಜನರ ಆರೋಗ್ಯ ದೃಷ್ಟಿಯಿಂದ ಹಾಗೂ ಪ್ರತಿನಿತ್ಯ ಪ್ರತಿಯೊಬ್ಬರೂ ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮ ಮಾಡಬೇಕೆಂಬ ಉತ್ಸಾಹ ಚಿಗುರಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿತ್ತು. ಜೊತೆಗೆ ಸಾರ್ವಜನಿಕ ಸಾರಿಗೆ ಬಳಸುವ ಮೂಲಕ ಎಷ್ಟೆಲ್ಲ ಅನುಕೂಲತೆಗಳಿವೆ ಎಂಬುದನ್ನು ಅರಿವು ಮೂಡಿಸುವುದು ಪ್ರಮುಖವಾಗಿತ್ತು ಎಂದು ಅದು ಹೇಳಿದೆ.
ಇದನ್ನೂ ಓದಿ | Viral video | ಹಿಮ ಸುರಿಯುವುದನ್ನು ಮೊದಲ ಬಾರಿ ನೋಡಿ ಹುಚ್ಚೆದ್ದು ಕುಣಿದ ಒಂಟೆ!