Site icon Vistara News

Viral News: ಮ್ಯಾನ್ಮಾರ್‌ನಲ್ಲಿ ಹೊಸ ಪ್ರಭೇದದ ಹಾವು ಪತ್ತೆ; ಏನಿದರ ವೈಶಿಷ್ಟ್ಯ?

snake

snake

ಮ್ಯಾನ್ಮಾರ್‌: ಅಭಿವೃದ್ಧಿಯ ಹೆಸರಿನಲ್ಲಿ, ತಂತ್ರಜ್ಞಾನದ ನೆಪದಲ್ಲಿ ಅತಿಯಾದ ಚಟುವಟಿಕೆ ನಡೆಸುತ್ತಿರುವ ಕಾರಣ ಪ್ರಸ್ತುತ ಕೆಲವೊಂದು ಜೀವಿಗಳ ವಂಶ ನಾಶವಾಗಿದ್ದರೆ ಹಲವು ಶಾಶ್ವತವಾಗಿ ಕಣ್ಮರೆಯಾಗುವ ಭೀತಿ ಎದುರಿಸುತ್ತಿವೆ. ಈ ಮಧ್ಯೆ ಉರಗಪ್ರಿಯರು ಖುಷಿ ಪಡುವ ಸುದ್ದಿಯೊಂದು ದೂರದ ಮ್ಯಾನ್ಮಾರ್‌ನಿಂದ ತೇಲಿ ಬಂದಿದೆ. ಅಲ್ಲಿ ಹೊಸ ಪ್ರಬೇಧದ ಹಾವೊಂದನ್ನು ಗುರುತಿಸಲಾಗಿದೆ. ಸದ್ಯ ಈ ಕುರಿತಾದ ಸುದ್ದಿ ಸದ್ದು ಮಾಡುತ್ತಿದೆ (Viral News).

ಮೂವರು ವಿಜ್ಞಾನಿಗಳ ಗುಂಪು ಮ್ಯಾನ್ಮಾರ್‌ನಲ್ಲಿ ಹೊಸ ಜಾತಿಯ ಹಾವನ್ನು ಪತ್ತೆಹಚ್ಚಿದ್ದು, ಇದಕ್ಕೆ ಟ್ರಿಮೆರೆಸುರಸ್ ಯುಟ್ಜಿ (Trimeresurus Uetzi) ಎಂಬ ಹೆಸರಿಡಲಾಗಿದೆ. ಇದು ಪಿಟ್ ವೈಪರ್ ಕುಟುಂಬಕ್ಕೆ ಸೇರಿದೆ. 2008ರಲ್ಲಿ ಮಧ್ಯ ಮ್ಯಾನ್ಮಾರ್‌ನ ಈ ವಿಜ್ಞಾನಿಗಳ ಕಣ್ಣಿಗೆ ವಿಭಿನ್ನ ಬಣ್ಣದ ಈ ಹಾವು ಕಂಡು ಬಂದಿತ್ತು. ಹಸಿರು ಬಣ್ಣದ ಇದು ಸುಮಾರು 20 ಅಡಿ ಎತ್ತರದ ಮರದ ಮೇಲಿತ್ತು. ಬಳಿಕ ಇದನ್ನು ಸಂರಕ್ಷಿಸಿ ಇಡಲಾಯಿತು. ಸಂಶೋಧನೆಯ ಬಳಿಕ ಇದು ಹೊಸ ಪ್ರಭೇದದ ಹಾವು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಅಕ್ಟೋಬರ್ 20ರಂದು ಝೂಟಾಕ್ಸಾ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ, ಮೂವರು ವಿಜ್ಞಾನಿಗಳು ಆಗ್ನೇಯ ಏಷ್ಯಾದಲ್ಲಿ ಪಿಟ್ ವೈಪರ್‌ಗಳ ಮೂಲ ಮತ್ತು ವಿವಿಧ ಜಾತಿಗಳನ್ನು ಅಧ್ಯಯನ ಮಾಡುತ್ತಿದ್ದರು. ಈ ಸಂದರ್ಭದಲ್ಲೇ ಅವರು ಟ್ರಿಮೆರೆಸುರಸ್ ಯುಟ್ಜಿಯನ್ನು ಕಂಡು ಹಿಡಿದರು. ಇದು 1998 ಮತ್ತು 2009ರ ನಡುವೆ ಮ್ಯಾನ್ಮಾರ್‌ನಲ್ಲಿ ಕಂಡುಬಂದ ಪಿಟ್ ವೈಪರ್ ಮಾದರಿಗಳ ಪೈಕಿ ಒಂದು ಎಂದು ವಿವರಿಸಿದೆ.

ವೈಶಿಷ್ಟ್ಯವೇನು?

ಟ್ರಿಮೆರೆಸುರಸ್ ಯುಟ್ಜಿ ಪಿಟ್ ವೈಪರ್‌ಗಳು ಹಸುರು ಹುಲ್ಲಿನ ಬಣ್ಣದಲ್ಲಿರುತ್ತವೆ. ಉದ್ದ ಮತ್ತು ತೆಳುವಾದ ದೇಹವನ್ನು ಹೊಂದಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅವು 2.7 ಅಡಿ ಉದ್ದ ಬೆಳೆಯುತ್ತವೆ. ಹೆಣ್ಣು ಟ್ರಿಮೆರೆಸುರಸ್ ಯುಟ್ಜಿ ಪಿಟ್ ವೈಪರ್‌ಗಳು ಹಸಿರು-ಚಿನ್ನದ ಬಣ್ಣದ ಕಣ್ಣುಗಳನ್ನು ಹೊಂದಿದ್ದರೆ, ಗಂಡು ಹಾವುಗಳಿಗೆ ತಾಮ್ರದ ಬಣ್ಣದ ಕಣ್ಣು ಇರುತ್ತವೆ ಎಂದು ಝೂಟಾಕ್ಸಾ ಜರ್ನಲ್‌ ತಿಳಿಸಿದೆ. ಫೋಟೊಗಳಲ್ಲಿ ಈ ಹಾವು ಮರದ ಕೊಂಬೆಗಳ ಮೇಲೆ ಕುಳಿತಿರುವುದನ್ನು ಮತ್ತು ನೆಲದ ಮೇಲೆ ಸುರುಳಿಯಾಗಿ ಸುತ್ತಿರುವುದನ್ನು ಕಾಣಬಹುದು. ಈ ಫೋಟೊಗಳನ್ನು 2022 ಮತ್ತು 2023ರಲ್ಲಿ ತೆಗೆಯಲಾಗಿದೆಯಂತೆ. ಸದ್ಯ ಇವು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: Shocking Video: ಸಹೋದರನ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್‌ ಹತ್ತಿಸಿ ಕೊಂದ!

ಮ್ಯಾನ್ಮಾರ್‌ನ ವಸತಿ ಪ್ರದೇಶಗಳಲ್ಲಿ ಟ್ರಿಮೆರೆಸುರಸ್ ಯುಟ್ಜಿ ಪಿಟ್ ವೈಪರ್‌ಗಳು ಸಾಮಾನ್ಯವಾಗಿ ಕಂಡು ಬರುತ್ತವೆ ಎಂದು ಅಧ್ಯಯನ ತಂಡದ ಸದಸ್ಯ ಟಾನ್ ವ್ಯಾನ್ ನ್ಗುಯೆನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈ ಹೊಸ ಜಾತಿಯ ಹಾವು ವಿಷಕಾರಿಯಾಗಿದ್ದು, ವಿಷದ ತೀವ್ರತೆ ಬಗ್ಗೆ ಇನ್ನೂ ಸಂಶೋಧನೆ ನಡೆದಿಲ್ಲ. ಅವು ಹೆಚ್ಚಾಗಿ ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ಕಂಡುಬರುತ್ತವೆ ಎಂದು ಅವರು ವಿವರಿಸಿದ್ದಾರೆ. ಮರಗಳು, ಪೊದೆಗಳು, ಕೊಂಬೆಗಳು ಮತ್ತು ನೆಲದ ಮೇಲೆ ಇವು ಸಾಮಾನ್ಯವಾಗಿ ವಾಸಿಸುತ್ತವೆ ಎಂದು ಅಧ್ಯಯನ ತಿಳಿಸಿದೆ. ಈ ಉರಗ ಪ್ರಭೇದದ ಕುರಿತು ಇನ್ನಷ್ಟು ಅಧ್ಯಯನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Exit mobile version