ಸ್ಫೂರ್ತಿದಾಯಕ ಮಾತುಗಳು ಕಳೆಗುಂದಿದ, ಖಿನ್ನರಾದವರ, ಸೋತಿರುವ ವ್ಯಕ್ತಿಗಳ ಬದುಕಿನಲ್ಲಿ ಆಶಾಕಿರಣವಾಗಿ ಕಾಣಿಸಬಹುದು. ಸ್ಫೂರ್ತಿಕತೆಗಳು ನಮ್ಮನ್ನು ಬದುಕಿನಲ್ಲಿ ಏನನ್ನಾದರೂ ಸಾಧಿಸುವ ಛಲ ತುಂಬಬಹುದು. ಇನ್ಯಾವುದೂ ನನ್ನಿಂದ ಸಾಧ್ಯವಾಗದು ಎಂದು ಹತಾಶರಾದ ಮಂದಿಗೆ ಒಂದು ಸ್ಫೂರ್ತಿಯ ಮಾತು ಕೂಡಾ ಬದುಕಿನಲ್ಲಿ ಹೊಂಗಿರಣ ತರಬಹುದು. ಇನ್ನೊಬ್ಬರ ಬದುಕಿನಲ್ಲಿ ಬೆಳಕು ಚೆಲ್ಲುವ ಕೆಲಸ, ಅದಕ್ಕೆ ಕಾರಣರಾಗುವ ಧನ್ಯತಾಭಾವ ಯಾವ ಹಣ ಕೊಟ್ಟರೂ ಬಾರದು ಎಂಬುದನ್ನು ಇಲ್ಲೊಬ್ಬ ಮಹಿಳೆ ಕೇವಲ ಎಲ್ಲರಂತೆ ಆಡು ಮಾತಿಗೆ ಹೇಳಿ ಸುಮ್ಮನಾಗಿಲ್ಲ. ಮಾಡಿ ತೋರಿಸುತ್ತಿದ್ದಾಳೆ ಕೂಡ.
ಈ ಸುದ್ದಿ ಕೇಳಿದರೆ, ಖಂಡಿತವಾಗಿಯೂ ಇದು ತಮಾಷೆಯಾಗಿ ಅನಿಸಬಹುದು. ಇಂಥದ್ದೊದು ಕಾರಣಕ್ಕೆ ಉತ್ತಮ ಸಂಬಳ ಸಿಗುವ ಕೆಲಸವನ್ನು ಬಿಡುತ್ತಾರಾ, ಹುಚ್ಚಲ್ಲವೇ ಇದು ಎಂದು ನೀವು ತಿರುಗಿ ಪ್ರಶ್ನೆ ಕೇಳಬಹುದು. ಎಷ್ಟೇ ನಮ್ಮ ಆಸಕ್ತಿ ಎಂದೆಲ್ಲಾ ಹೇಳಿದರೂ ಅಂತಿಮವಾಗಿ ನಮನ್ನು ಬದುಕಿಸುವುದು ನಮ್ಮ ಕಾಲ ಮೇಲೆ ನಮ್ಮನ್ನು ನಿಲ್ಲಿಸುವುದು ಒಂದು ನಿರ್ದಿಷ್ಟ ಸಂಬಳ ಬರುವ ಕೆಲಸ ಮಾತ್ರ ಎಂಬ ಅಪ್ಪಟ ಸತ್ಯದ ಮಾತಿನ ಬುದ್ಧಿವಾದ ಹೇಳಬಹುದು. ಆದರೆ ಇದು ಸತ್ಯ. ಚೀನಾದಲ್ಲಿ ಮಹಿಳೆಯೊಬ್ಬಳು ಸಮುದ್ರದ ಕಿನಾರೆಯಲ್ಲಿ ಮರಳಿನ ಮೇಲೆ ಸ್ಫೂರ್ತಿದಾಯಕ ವಾಕ್ಯಗಳನ್ನು ದಿನವೂ ಬರೆಯುವುದಕ್ಕಾಗಿ ತನ್ನ ಕೆಲಸವನ್ನು ಬಿಟ್ಟಿದ್ದಾಳಂತೆ!
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಎಂಬ ಚೀನೀ ಪತ್ರಿಕೆಯೊಂದು ವರದಿ ಪ್ರಕಟಿಸಿದ್ದು, ಸಾನ್ಯಾ ಎಂಬ ಪ್ರವಾಸಿ ತಾಣದಲ್ಲಿ ವಾಸವಾಗಿರುವ ಫೆಂಗ್ ಎಂಬ ಹೆಸರಿನ ಮಹಿಳೆಯೊಬ್ಬರು ತನ್ನಿಷ್ಟದ ಕಾರ್ಯವಾದ ಬೀಚ್‌ನಲ್ಲಿ ಮರಳಿನ ಮೇಲೆ ದಿನವೂ ಸ್ಫೂರ್ತಿದಾಯಕ ವಾಕ್ಯಗಳನ್ನು ಬರೆಯುವುದಕ್ಕಾಗಿಯೇ ತನ್ನ ಕೆಲಸವನ್ನು ಬಿಟ್ಟಿದ್ದಾಳಂತೆ. ಇದು ತಮಾಷೆಯೆನಿಸಿದರೂ ಸತ್ಯ ಎಂದು ಬರೆದಿರುವ ಪತ್ರಿಕೆ, ಆಕೆಯೇ ಹೇಳಿದಂತೆ ಇದು ಆಕೆಗೆ ನೆಮ್ಮದಿ ಹಾಗೂ ಗೌರವವನ್ನು ಕೊಟ್ಟಿದೆಯಂತೆ.
ಫೆಂಗ್‌ಳ ಈ ಕತೆ ಸಾಮಾಜಿಕ ಜಾಲತಾಣದಲ್ಲೀಗ ಭಾರೀ ಸದ್ದು ಮಾಡುತ್ತಿದ್ದು, ಎಲ್ಲರೂ ಆಕೆಯ ನಿರ್ಧಾರಕ್ಕೆ ಭೇಷ್ ಎನ್ನುತ್ತಿದ್ದಾರೆ. ಈ ಹೊಸ ವೃತ್ತಿ ಆಕೆಗೆ ಯಶಸ್ಸು ತರಲಿ ಎಂದು ಹಾರೈಸಿದ್ದಾರೆ. ಆಕೆಯೇ ಹೇಳುವಂತೆ ಆಕೆಯ ಈ ಹೊಸ ಕೆಲಸ ಆಕೆಗೆ ಹಣ ತರುತ್ತದಾ ಎಂದು ಆರಂಭದಲ್ಲಿ ಗೊತ್ತಿರಲಿಲ್ಲವಂತೆ. ಈ ಕೆಲಸ ಖುಷಿ ನೀಡುತ್ತಿತ್ತು. ಅದಕ್ಕಾಗಿ ನನ್ನ ಹಳೆಯ ಕೆಲಸ ಬಿಟ್ಟೆ. ನಿತ್ಯವೂ ಇದನ್ನು ಮಾಡಲಾರಂಭಿಸಿದೆ. ಒಂದೇ ವಾರದಲ್ಲಿ ನನ್ನ ಈ ಕೆಲಸವನ್ನು ಜನ ಗುರುತಿಸಲಾರಂಭಿಸಿದರು. ನನ್ನ ಕಲೆ ಜನರಿಗೆ ಇಷ್ಟವಾಗತೊಡಗಿತು. ನನಗೆ ಒಂದೊಂದೇ ಆರ್ಡರ್ ಬರಲು ಶುರುವಾಯಿತು ಎನ್ನುತ್ತಾಳೆ ಈಕೆ.
ಇದನ್ನೂ ಓದಿ | Viral Video | ‘ನನ್ನ ತಂಗಿ ಕೆಳಗೆ ಬೀಳದಿರಲಿ’; ಈ ಪುಟ್ಟ ಅಣ್ಣನ ಕಾಳಜಿಗೆ ಸೋಲದೆ ಇರದು ಹೃದಯ
ನಾನು ಮಾಡುವ ಈ ಕೆಲಸದ ವಿಡಿಯೋವನ್ನು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಲು ಆರಂಭಿಸಿದೆ. ಈಗಿದುವೇ ನನ್ನ ವೃತ್ತಿಯಾಗಿ ಬದಲಾಯಿತು. ಈ ಹೊಸ ವೃತ್ತಿ ನನಗೆ ತಿಂಗಳಿಗೆ ಸುಮಾರು ೧,೪೦೦ ಡಾಲರ್ ಹಣವನ್ನು ನೀಡುತ್ತಿದೆ. ದಿನಕ್ಕೆ ಎಂಟು ಗಂಟೆಗಳ ಕೆಲಸ ನಾನು ಮಾಡುತ್ತೇನೆ. ಮಾಡುವ ಕೆಲಸವನ್ನು ನಾನು ಅತಿಯಾಗಿ ಪ್ರೀತಿಸುತ್ತಿದ್ದೇನೆ ಎಂದಾಕೆ ಹೇಳಿದ್ದಾರೆ. ನನ್ನ ಈ ಕೆಲಸದ ಮೂಲಕ ಜನರ ಮುಖದಲ್ಲಿ ಖುಷಿ, ನೆಮ್ಮದಿ ನೋಡುವುದು ನಿಜಕ್ಕೂ ಬಹಳ ಸಂತೃಪ್ತಿ ನೀಡುವ ಕೆಲಸ ಎಂದೂ ಆಕೆ ಹೇಳಿದ್ದಾರೆ.
ಆಕೆಯ ಈ ಹೊಸ ಕೆಲಸಕ್ಕೆ ಅನೇಕರು ಶುಭ ಹಾರೈಸಿದ್ದು, ಎಲ್ಲರೂ ನಿಮ್ಮ ಈ ವಿನೂತನ ಕೆಲಸಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಸಮುದ್ರ ತೀರದಲ್ಲಿ ಹೀಗೆ ಸ್ಫೂರ್ತಿದಾಯಕವಾಗಿ ಬರೆಯವುದು ಹಾಗೂ ಚಿತ್ರ ಬಿಡಿಸುವುದರಲ್ಲಿ, ಇತರ ಕೆಲಸಗಳಲ್ಲಿರುವಂತೆ ಒತ್ತಡಗಳಿಲ್ಲ. ಜೊತೆಗೆ ನಮ್ಮದೇ ಸಮಯದಲ್ಲಿ ನಾವು ಮಾಡಬಹುದು. ನಮ್ಮ ಕ್ರಿಯಾತ್ಮಕತೆಗೆ ಇಲ್ಲಿ ಬೆಲೆಯಿದೆ ಹಾಗೂ ಮನಸ್ಸಿಗೂ ತೃಪ್ತಿಯಿದೆ ಎಂದು ಆಕೆ ಹೇಳಿದ್ದಾಳೆ.
ಇದನ್ನೂ ಓದಿ | Viral News | ಬ್ರಿಟಿಷ್ ಕೌನ್ಸಿಲ್ ಜಾಬ್ ಬಿಟ್ಟು ಟೀ ಸ್ಟಾಲ್ ತೆರೆದ ಇಂಗ್ಲಿಷ್ ಎಂಎ ಪದವೀಧರೆ!