Site icon Vistara News

Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ!

cockroach viral news

cockroach viral news

ʻಹಾವಿನ ದ್ವೇಷ ಹನ್ನೆರಡು ವರುಷ, ನನ್ನ ರೋಷ ನೂರು ವರುಷʼ ಎಂದು ಕೈಬಿಟ್ಟು ಹೋದ ಪ್ರೇಮಿಯ ನೆನಪಿನಲ್ಲಿ ದ್ವೇಷ ಉಕ್ಕುತ್ತಿದೆಯಾ? ಹಳೆಯ ಪ್ರೇಮಿ, ಆಫೀಸಿನಲ್ಲಿ ಟಾರ್ಚರ್‌ ಕೊಟ್ಟ ಬಾಸ್‌, ಪಕ್ಕದ್ಮನೆ ಹೆಂಗಸು ಹೀಗೆ ಯಾರೋ ಒಬ್ಬರನ್ನು ನಿಮಗೆ ಈಗ ಕಂಡರಾಗದು, ಆದರೆ, ಮುಖ ತೋರಿಸದೆ ವಿಧಿಯಿಲ್ಲ ಎಂಬ ಪರಿಸ್ಥಿತಿ ನಿಮ್ಮಲ್ಲಿದೆಯಾ? ಇವರಿಗೆ ಏನಾದರೊಂದು ಮಾಡಬೇಕಲ್ಲಾ, ಆದರೆ ಹೇಗೆ ಎಂದೇ ತಿಳಿಯುತ್ತಿಲ್ಲ ಎಂದು ಕೈಕೈ ಹಿಸುಕುತ್ತಿದ್ದೀರಾ? ಹಾಗಾದರೆ ನಿಮಗೆ ಸರಿಯಾದ ಉತ್ತರ ಕೆನಡಾದ ಈ ಪ್ರಾಣಿ ಸಂಗ್ರಹಾಲಯದಲ್ಲಿದೆ!

ಇದಕ್ಕೂ ಕೆನಡಾದ ಪ್ರಾಣಿ ಸಂಗ್ರಹಾಲಯಕ್ಕೂ ಏನು ಸಂಬಂಧ ಎಂದು ತಲೆಕೆಡಿಸಿಕೊಂಡರೆ ಉತ್ತರ ಸಿಂಪಲ್‌. ಕೆನಡಾದಲ್ಲಿರುವ ಮೃಗಾಲಯವೊಂದು ಜಿರಳೆಗೆ ಹೆಸರಿಡುವ ಅವಕಾಶವನ್ನು ನಿಮಗೆ ನೀಡುತ್ತದೆ. ಕೈಕೊಟ್ಟು ಓಡಿ ಹೋದ ಪ್ರೇಮಿಯ ಬಗ್ಗೆ ಹೇಳಿಕೊಳ್ಳಲಾಗದ ಸಂಕಟ ಅನುಭವಿಸುತ್ತಿದ್ದರೆ ಆತನನ್ನೋ ಆಕೆಯನ್ನೋ ಮರೆಯಲು, ಅಥವಾ ಸಣ್ಣ ಸೇಡನ್ನು ತಮಾಷೆಯಾಗಿ ತೀರಿಸಿಕೊಳ್ಳಲು ಇಲ್ಲಿನ ಜಿರಳೆಗೆ ಅವರ ಹೆಸರಿಟ್ಟುಬಿಡಿ!

ತಮಾಷೆಯೆನಿಸಿದರೂ ಇದು ಸತ್ಯ. ಹಾಗಂತ ಉಚಿತವಾಗಿ ಜಿರಳೆಗೆ ಹೆಸರಿಡಲಾಗುವುದಿಲ್ಲ. ಅದಕ್ಕೆ ಈ ಮೃಗಾಲಯದಲ್ಲಿ ೨೫ ಡಾಲರ್‌ ಅಂದರೆ ಸುಮಾರು ೧೫೦೭ ರೂಪಾಯಿಗಳನ್ನು ಪಾವತಿಸಿ ಜಿರಳೆಗೆ ಹೆಸರಿಡುವ ಕಾರ್ಯಕ್ರಮ ನೀವು ಶುರುಮಾಡಬಹುದಂತೆ!

ಟೊರಾಂಟೋ ಪ್ರಾಣಿ ಸಂಗ್ರಹಾಲಯ ಸದ್ಯದಲ್ಲಿ ಬರಲಿರುವ ಪ್ರೇಮಿಗಳ ದಿನಕ್ಕಾಗಿ ಜಿರಳೆಗೆ ಹೆಸರಿಡುವ ಅಭಿಯಾನ ಆರಂಭಿಸಿದ್ದು, ಇದರಲ್ಲಿ ಆಸಕ್ತರು ತಮ್ಮ ಹಳೆ ಪ್ರೇಮಿಯ ಹೆಸರನ್ನು ಜಿರಳೆಗೆ ಇಡಬಹುದಾಗಿದೆ. ʻನೇಮ್‌ ಅ ರೋಚ್‌ʼ ಎಂಬ ಹೆಸರಿನ ಅಭಿಯಾನ ಇದಾಗಿದ್ದು, ಇದರಲ್ಲಿ ಭಾಗವಹಿಸಲು ೨೫ ಡಾಲರ್‌ಗಳ ಟಿಕೆಟ್‌ ಖರೀದಿಸಬೇಕಾಗಿದೆ.

ನಿಮ್ಮ ಬದುಕಿನಲ್ಲಿ ಯಾರಿಂದಾದರೂ ವೃಥಾ ನಿಮಗೆ ತೊಂದರೆಯಾಗುತ್ತಿದೆಯಾ? ಹಾಗಾದರೆ ಅವರ ಹೆಸರು ಈ ಜಿರಳೆಗಿಡಿ ಎಂಬ ಸ್ಲೋಗನ್ನುಗಳ ಮೂಲಕ ಈ ಅಭಿಯಾನ ಪ್ರಚಾರ ಕಾರ್ಯ ಆರಂಭಿಸಿದೆ. ಆನ್‌ಲೈನ್‌ ಹೆಸರಿಡುವ ಕಾರ್ಯಕ್ರಮ ಇದಾಗಿದ್ದು, ೨೫ ಡಾಲರ್‌ ನೀಡಿ ಆನ್‌ಲೈನ್‌ನಲ್ಲಿ ಜಿರಳೆಯೊಂದನ್ನು ಸೆಲೆಕ್ಟ್‌ ಮಾಡಿ ʻಇಂಥವರ ನೆನಪಿನಲ್ಲಿʼ ಎಂಬ ಜಾಗದಲ್ಲಿ, ನೀವು ಹೆಸರಿಡಬಯಸುವ ವ್ಯಕ್ತಿಯ ಹೆಸರನ್ನು ಜಿರಳೆಯ ಜೊತೆ ನಮೂದಿಸಿದರೆ ಡಿಜಿಟಲ್‌ ಸರ್ಟಿಫಿಕೆಟ್‌ ಒಂದು ನಿಮಗೆ ಸಿಗುತ್ತದಂತೆ. ಇದು ಹಂಚಬಹುದಾದ ಡಿಜಿಟಲ್‌ ಗ್ರಾಫಿಕ್‌ ಆಗಿದ್ದು, ನಿಮಗೆ ಆಗದ ವ್ಯಕ್ತಿಯ ಹೆಸರನ್ನು ಟ್ಯಾಗ್‌ ಮಾಡುವ ಮೂಲಕ ಅವರ ತಲೆತಿನ್ನಬಹುದು. ಆ ಮೂಲಕ ನೀವು ಎಷ್ಟೋ ಕಾಲದ ಸಿಟ್ಟನ್ನು ಇಲ್ಲವಾಗಿಸಿ ಸಂತೃಪ್ತಿ ಹೊಂದಬಹುದಂತೆ.

ಆದರೆ, ಇದೊಂದು ತಮಾಷೆಯ ಆಟವಾಗಿದ್ದು, ಇಲ್ಲಿ ದ್ವೇಷದ ಮಾತುಗಳು, ಸಿಟ್ಟು ತೋರ್ಪಡಿಸುವಿಕೆ ಇತ್ಯಾದಿಗಳಿಗೆ ಅವಕಾಶವಿಲ್ಲ ಎಂದು ಪ್ರಾಣಿ ಸಂಗ್ರಹಾಲಯ ಸ್ಪಷ್ಟಪಡಿಸಿದೆ. ಕೇವಲ ಲಘುಹಾಸ್ಯದ ಕಾಲೆಳೆಯುವಿಕೆ ಇದಾಗಿದ್ದು, ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದಿದೆ.

ಕೇವಲ ನಿಮ್ಮ ಹಳೆ ಬಾಯ್‌ಫ್ರೆಂಡ್‌ ಗರ್ಲ್‌ಫ್ರೆಂಡ್‌ಗಳ ನೆನಪಿನಲ್ಲಿ ಮಾತ್ರವಲ್ಲ, ನಿಮ್ಮ ಬಾಸ್‌, ಗೆಳೆಯ, ಸಂಬಂಧಿಕರು ಅಥವಾ ಯಾರನ್ನೇ ಆಗಲಿ ಜಿರಳೆಗೆ ಹೆಸರಿಡುವ ಮೂಲಕ ಅವರ ಕಾಲೆಳೆಯಬಹುದಂತೆ.

ಈ ಎಲ್ಲ ತಮಾಷೆಯ ಆಟದ ನಿಯಮಗಳ ಜೊತೆಗೆ ಟೊರಾಂಟೋ ಪ್ರಾಣಿ ಸಂಗ್ರಹಾಲಯ, ಜಿರಳೆಗಳನ್ನು ಇಲ್ಲಿ ನಿಕೃಷ್ಟವಾಗಿ ಬಳಸುತ್ತಿಲ್ಲ. ಎಲ್ಲ ಚಿಕ್ಕ ದೊಡ್ಡ ಪ್ರಾಣಿ, ಕೀಟ, ಪಕ್ಷಿಗಳನ್ನು ಸಮಾನ ದೃಷ್ಠಿಯಿಂದಲೇ ನೋಡಿ ಈ ಆಟವನ್ನು ಆಡಲಾಗುತ್ತಿದೆ. ಇಲ್ಲಿ ಪ್ರತಿಯೊಂದು ಪುಟ್ಟ ಕೀಟಕ್ಕೂ ಜೈವಿಕ ಸರಣಿಯಲ್ಲಿ ತನ್ನದೇ ಆದ ಪಾತ್ರವಿದೆ. ಅವುಗಳ ಬಗ್ಗೆ ಗೌರವ ಇಟ್ಟುಕೊಂಡೇ ಈ ಆಟವನ್ನು ಯೋಜಿಸಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಅಭಿಯಾನಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದು, ಹಲವರು ಇದೊಂದು ಕೆಟ್ಟ ಅಭಿರುಚಿಯ ಆಟ ಎಂದಿದ್ದಾರೆ. ನಮಗೆ ಟೊರಾಂಟೋ ಪ್ರಾಣಿ ಸಂಗ್ರಹಾಲಯವೆಂದರೆ ಇಷ್ಟ, ಅಧರೆ ಇದು ಮಾತ್ರ ಇಷ್ಟವಾಗಲಿಲ್ಲ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, ಇದೊಂದು ತಮಾಷೆಯ ಖುಷಿಯ ಆಟ, ಒಳ್ಳೆಯ ಪ್ರಯತ್ನ ಎಂದು ಹೇಳಿದ್ದಾರೆ.

ಇದನ್ನೂ ಓದಿ : Viral Video: ಕೇರಳದಿಂದ ಕಾಶ್ಮೀರದವರೆಗೆ; ಒಮ್ಮೆ ಕ್ವಿಕ್​ ಆಗಿ ಪ್ರವಾಸಕ್ಕೆ ಹೋಗಿಬರೋಣ ಬನ್ನಿ!

Exit mobile version