Site icon Vistara News

Viral News: 30 ವರ್ಷದ ಹಳೆಯ ಏರ್‌ ಪಾಸ್‌ ಮೂಲಕ ಒಂದೇ ವರ್ಷದಲ್ಲಿ 373 ವಿಮಾನ ಪ್ರಯಾಣ ಮಾಡಿದ!

air travel man

ಮೊದಲೆಲ್ಲ ಸ್ವಂತ ವಾಹನಗಳು ಇಲ್ಲದಿದ್ದಾಗ ಹೆಚ್ಚಿನ ಮಂದಿ ಮಹಾನಗರಕ್ಕೆ ಬಂದೆವೆಂದಾದರೆ ಇಡೀ ದಿನದ ಬಸ್‌ ಪಾಸೊಂದನ್ನು ತೆಗೆದುಕೊಂಡು ದಿನವಿಡೀ ಸುತ್ತುವುದು ಅಭ್ಯಾಸ. ಒಂದು ಬಸ್‌ ಪಾಸ್‌ ಇದ್ದರೆ, ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳೆಂಬ ದಿಕ್ಕಿನ ಹಂಗಿಲ್ಲದೆ, ಆ ಮೂಲೆಯಿಂದ ಈ ಮೂಲೆಗೂ ಬಸ್‌ ಹತ್ತಿದರಾಯಿತು, ಪಾಸ್‌ ತೋರಿಸಿದರೆ ಮುಗೀತು. ಆದರೆ ದಿನವೂ ವಿಮಾನ ಪ್ರಯಾಣ ಮಂದಿಯ ಖರ್ಚೆಷ್ಟಿರಬಹುದು ಎಂಬ ಯೋಚನೆ ನಿಮಗೆ ಒಮ್ಮೆಯಾದರೂ ಬಂದಿದೆಯಾ? ಅಥವಾ ವಿಮಾನದಲ್ಲಿ ಪಾಸ್‌ ಮಾಡಿಸಿಕೊಂಡು ದಿನಕ್ಕೊಂದು ಜಾಗಕ್ಕೆ ಹೋಗಿ ಬರುವ ಹಾಗಿದ್ದರೆ ಎಂಬೊಂದು ಯೋಚನೆ ನಿಮ್ಮ ತಲೆಯಲ್ಲಿ ಯಾವತ್ತಾದರೂ ನುಸುಳಿದೆಯಾ? ಹಾಗಿದ್ದರೆ ಇಲ್ಲಿ ಕೇಳಿ, ವ್ಯಕ್ತಿಯೊಬ್ಬರು ಅಕ್ಷರಶಃ ಅದೇ ಕೆಲಸವನ್ನು ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು.

ಹೌದು. ಇದು ತಮಾಷೆಯಲ್ಲ. ಯುಎಸ್‌ ನಿವಾಸಿಯೊಬ್ಬರು ಮೂವತ್ತು ವರ್ಷಗಳ ಹಿಂದೆ ಲೈಫ್‌ಟೈಮ್‌ ಪಾಸ್‌ ಒಂದನ್ನು ಖರೀದಿಸಿದ್ದು ಅದರ ಅತ್ಯಧಿಕ ಲಾಭವನ್ನೂ ಪಡೆದಿದ್ದಾರಂತೆ. ಅವರು ಹೇಳುವಂತೆ, ತನ್ನ ಜೀವಮಾನದಲ್ಲಿ ಮಾಡಿದ ಅತ್ಯುತ್ತಮ ಹೂಡಿಕೆಯಿದು ಎಂದಿದ್ದಾರೆ.

ಟಾಮ್‌ ಸ್ಟಕರ್‌ ಎಂಬ ಹೆಸರಿನ ಯುಎಸ್‌ ನಿವಾಸಿಯೊಬ್ಬರು ಮೂವತ್ತು ವರ್ಷಗಳ ಹಿಂದೆ ಖ್ಯಾತ ಏರ್‌ಲೈನ್‌ ಒಂದರಿಂದ ಆಗ ಲಭ್ಯವಿದ್ದ ಲೈಫ್‌ಟೈಮ್‌ ಪಾಸ್‌ ಒಂದನ್ನು ಖರೀದಿಸಿದ್ದರು. 69ರ ಹರೆಯದ ಅವರು ನ್ಯೂಜೆರ್ಸಿಯ ಆಟೋಮೋಟಿವ್‌ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಆಗ ಅಂದರೆ 1990ರಲ್ಲಿ ಯುನೈಟೆಡ್‌ ಏರ್‌ಲೈನ್ಸ್‌ನಿಂದ 2,90,000 ಡಾಲರ್‌ಗೆ ಲೈಫ್‌ಟೈಮ್‌ ಪಾಸ್ ಖರೀದಿಸಿದ್ದರು. ಅಂದಿನಿಂದ ಇಂದಿನವರೆಗೆ 23 ಮಿಲಿಯನ್‌ ಮೈಲಿಗಳಷ್ಟು ವಿಮಾನ ಪ್ರಯಾಣ ಮಾಡಿದ್ದು ಮನುಷ್ಯನೊಬ್ಬರ ಜೀವಿತಾವಧಿಯಲ್ಲೇ ಮಾಡಿದ ಅತ್ಯಂತ ಹೆಚ್ಚಿನ ಪ್ರಯಾಣವಿದಂತೆ.‌

ಇದನ್ನೂ ಓದಿ: Viral News : ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ! ವಿವೇಕ್‌ ಬಿಂದ್ರಾ ಫೋಟೋ ವೈರಲ್ ಆಗಿದ್ದೇಕೆ?

ವಾಷಿಂಗ್ಟನ್‌ ಪೋಸ್ಟ್‌ ಈ ಬಗ್ಗೆ ವಿಸ್ತೃತವಾಗಿ ವರದಿ ಮಾಡಿದ್ದು, ಸ್ಟಕರ್‌ ಅವರು ಒಮ್ಮೆ, 12 ದಿನಗಳ ಕಾಲ ನಿದ್ದೆಯೇ ಇಲ್ಲದೆ ಪ್ರಯಾಣ ಮಾಡಿದರಂತೆ. ನ್ಯೂಯಾರ್ಕ್‌ನಿಂದ ಸಾನ್‌ ಫ್ರಾನ್ಸಿಸ್ಕೋ, ಸಾನ್‌ ಫ್ರಾನ್ಸಿಸ್ಕೋನಿಂದ ಬ್ಯಾಂಕಾಕ್‌, ಬ್ಯಾಂಕಾಕ್‌ನಿಂದ ದುಬೈ ಹಾಗೂ ಮತ್ತೆ ಅಲ್ಲಿಂದ ಮರಳಿ ನ್ಯೂಯಾರ್ಕ್‌ ಹೀಗೆ 12 ದಿನಗಳ ಕಾಲ ಸತತವಾಗಿ ನಿದ್ದೆಯೇ ಇಲ್ಲದೆ ಪ್ರಯಾಣ ಮಾಡಿದ್ದರಂತೆ.

ಈ ಏರ್‌ಲೈನ್‌ ಪಾಸ್‌ ಖರೀದಿಸಿ 33 ವರ್ಷಗಳಾಗಿದ್ದು, ಈಗಲೂ ಅವರು ಸದಾ 1ಬಿ ಸೀಟಿನಲ್ಲೇ ಕೂರುತ್ತಾರಂತೆ. ಅದೇ ಅವರ ಇಷ್ಟದ ಸೀಟು. ಸ್ಟಕರ್‌ ಅವರು ಹೋದೆಡೆಯಲ್ಲೆಲ್ಲಾ, ವಿಶ್ವದಾದ್ಯಂತ ಬಹುತೇಕ ಎಲ್ಲ ದುಬಾರಿ ಲಕ್ಷುರಿ ಹೊಟೇಲುಗಳಲ್ಲಿ ಉಳಿದುಕೊಂಡಿದ್ದಾರೆ. ಈ ಏರ್‌ಪಾಸ್‌ನ ಪೂರ್ತಿ ಲಾಭವನ್ನು ಅವರು ಪಡೆದುಕೊಂಡಿದ್ದು, 2019ರ ಕೇವಲ ಒಂದು ವರ್ಷದಲ್ಲಿ ಅವರು ಬರೋಬ್ಬರಿ 373 ಬಾರಿ ವಿಮಾನ ಪ್ರಯಾಣ ಮಾಡಿದ್ದಾರಂತೆ. ಅಂದರೆ, ಒಂದೇ ವರ್ಷದಲ್ಲಿ 1.46 ಮಿಲಿಯನ್‌ ಮೈಲುಗಳನ್ನು ಕ್ರಮಿಸಿದ್ದು, ಇದರ ಟಿಕೆಟ್‌ಗಳನ್ನು ಅದೇ ಸಮಯದಲ್ಲಿ ಖರೀದಿಸಿದ್ದರೆ ಅದಂದು ವರ್ಷದಲ್ಲೇ 2.44 ಮಿಲಿಯನ್‌ ಡಾಲರ್‌ ಖರ್ಚು ಕೇವಲ ವಿಮಾನ ಟಿಕೆಟ್‌ಗೇ ಆಗುತ್ತಿತ್ತು ಎನ್ನಲಾದೆ. ಹಾಗಾಗಿ, ವಿಮಾನದ ಪಾಸ್‌ ಅತ್ಯದ್ಭುತವಾಗಿ ಬಳಕೆ ಮಾಡಿದ ಕೀರ್ತಿ ಇವರದ್ದು!

ಇದನ್ನೂ ಓದಿ: Viral Video : ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ನಲ್ಲಿ ಭರ್ಜರಿ ನಿದ್ದೆ ಹೊಡೆದ ನಾಯಿ! ವೈರಲ್‌ ಆಯ್ತು ವಿಡಿಯೊ

Exit mobile version