Site icon Vistara News

Viral news | ಪ್ರೇಮಿಗಳೋ, ಅಣ್ಣತಂಗಿಯರೋ? ಡಿಎನ್‌ಎ ವರದಿ ತಿಳಿಸಿತು ಅಸಲಿ ಸತ್ಯ!

viral news

ಇದೊಂದು ವಿಚಿತ್ರ ಪ್ರೇಮಕಥೆ. ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲದ ಕಥೆ. ಇಲ್ಲಿ ಇಬ್ಬರು ಪ್ರೇಮಿಗಳಿಗೆ ಆರು ವರ್ಷಗಳ ಕಾಲ ಗಾಢವಾಗಿ ಪ್ರೀತಿಸಿದ ಮೇಲೆ ತಾವಿಬ್ಬರೂ ಒಂದೇ ತಾಯಿಯ ಮಕ್ಕಳು ಎಂದು ಗೊತ್ತಾಗಿದೆ! ಆಶ್ಚರ್ಯವೆನಿಸಿದರೂ ಸತ್ಯ. ಡೇಟಿಂಗ್‌ ಸೈಟ್‌ ಒಂದರಲ್ಲಿ ಪೋಸ್ಟ್‌ ಮಾಡಿದ ವಿಚಾರವೊಂದು ಮಿಲಿಯಗಟ್ಟಲೆ ವೀಕ್ಷಣೆ ಕಂಡು ಇದೀಗ ವೈರಲ್‌ ಆಗಿದೆ.

ಆಕೆಯ ವಯಸ್ಸು ೩೦, ಆತನದು ೩೨. ಇಬ್ಬರಿಗೂ ಸುಮಾರು ಆರು ವರ್ಷಗಳ ಹಿಂದೆ ಪ್ರೇಮಾಂಕುರವಾಗಿದೆ. ಎಲ್ಲ ಪ್ರೇಮಿಗಳಂತೆ ಇವರೂ ಗಾಢವಾಗಿ ಪ್ರೀತಿಸಿದ್ದಾರೆ. ಜೊತೆಗೇ ವಾಸಿಸುತ್ತಿದ್ದಾರೆ ಕೂಡಾ. ಮುಂದೆಯೂ ಮದುವೆಯಾಗಿ ಜೊತೆಗಿರುವ ಯೋಜನೆಯೇ ಇದೆ. ಆದರೆ, ಇತ್ತೀಚೆಗೆ ಇಬ್ಬರು ಸಣ್ಣ ಕುತೂಹಲಕ್ಕೆಂದು ಮಾಡಿಸಿದ ಡಿಎನ್‌ಎ ಪರೀಕ್ಷೆಯಿಂದ ಸತ್ಯ ಹೊರಬಿದ್ದು ಎಡವಟ್ಟಾಗಿದೆ.

ಆಕೆ ಹೇಳುವಂತೆ, ಇತ್ತೀಚೆಗೆ ನಮಗಿಬ್ಬರಿಗೂ, ಸುಮ್ಮನೆ ನಮ್ಮ ಹಿನ್ನೆಲೆ ತಿಳಿದುಕೊಳ್ಳುವ ಕುತೂಹಲವುಂಟಾಗಿ ಡಿಎನ್‌ಎ ಟೆಸ್ಟ್‌ ಮಾಡಿಸಿದೆವು. ರಿಪೋರ್ಟ್‌ ಪಡೆಯಲು ಹೋದ ನನಗೆ ಶಾಕ್‌ ಕಾದಿತ್ತು. ಅದು ಹೇಳುವಂತೆ ನಾವಿಬ್ಬರೂ ಅಣ್ಣ ತಂಗಿ. ಒಂದೇ ಅಪ್ಪ ಅಮ್ಮನಿಗೆ ಹುಟ್ಟಿದ ಮಕ್ಕಳು. ಈ ವರದಿ ನೋಡಿ ನನಗೆ ಆಕಾಶವೇ ತಲೆ ಕಳಚಿ ಬಿದ್ದಂತಾಯ್ತು. ಇಂಥದ್ದೊಂದು ವರದಿ ಬರಬಹುದೆಂಬ ಯಾವ ನಿರೀಕ್ಷೆಯೂ ನನಗೆ ಇರಲಿಲ್ಲ. ಬಹುಶಃ ಈ ವರದಿ ತಪ್ಪಿರಬಹುದು ಎಂದೂ ಯೋಚಿಸಿದೆ. ಹಾಗಾಗಿ ಮೊದಲು ಆತನಿಗೆ ತಿಳಿಸುವುದು ಬೇಡ ಎಂದುಕೊಂಡೆ. ಆದರೆ ಮತ್ತೆ ಇದು ಸತ್ಯವೆಂದು ಎಂದು ತಿಳಿದು ಕಂಗಾಲಾಗಿ ಹೋಗಿದ್ದೇನೆ. ಈಗ ಆತನಿಗೂ ಗೊತ್ತಾಗಿ, ಇದು ಶಾಕ್‌ ನೀಡಿದೆ. ಇನ್ನೊಮ್ಮೆ ಪರೀಕ್ಷೆ ಮಾಡುವ ಅಂದಿದ್ದಾನೆ. ಮುಂದೇನು ಮಾಡುವುದು ಎಂದು ತಿಳಿಯುತ್ತಿಲ್ಲ. ಈಗ ಆತನನ್ನು ಪ್ರೇಮಿಯ ಹಾಗೆ ಭಾವಿಸಿ ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ” ಎಂದು ಆಕೆ ಹೇಳಿಕೊಂಡಿದ್ದಾಳೆ.

ಈ ವರದಿಯ ಹಿನ್ನೆಲೆಯಲ್ಲಿ ಈ ಇಬ್ಬರೂ ತಮ್ಮ ಪೂರ್ವಾಪರಗಳನ್ನು ಕೆದಕಿದ್ದಾರೆ ಕೂಡಾ. ಈ ವರದಿಯ ನಂತರವಷ್ಟೆ ನನಗೆ ನಾನು ದತ್ತುಪುತ್ರಿ ಎಂದು ತಿಳಿಯಿತು. ನನ್ನ ಸಾಕು ಅಪ್ಪ ಅಮ್ಮ ನನ್ನನ್ನು ಮುದ್ದಾಗಿ ಬೆಳೆಸಿದ್ದಾರೆ. ಅವರು ನಾನು ಅವರ ನಿಜವಾದ ಮಗಳಲ್ಲ, ಸಾಕುಮಗಳು ಎಂದು ಯಾವತ್ತೂ ಹೇಳಿಕೊಂಡಿರಲಿಲ್ಲ. ನನ್ನ ಸಂಗಾತಿಯ ಕಥೆ ಕೂಡಾ ಇದೇ. ಆತನೂ ದತ್ತು ಪುತ್ರ. ನಮ್ಮಿಬ್ಬರನ್ನೂ ಬೇರೆ ಬೇರೆ ಕುಟುಂಬಗಳಿಗೆ ದತ್ತು ಕೊಡಲಾಗಿತ್ತು. ಹೀಗಾಗಿ ಮಗುವಾಗಿದ್ದಾಗಿನಿಂದಲೇ ಬೇರೆಬೇರೆಯಾಗಿ ಬೆಳೆದೆವು. ಈಗ ಇಂಥ ಸನ್ನಿವೇಶದಲ್ಲಿ ಬಂದು ನಿಂತಿದ್ದೇವೆ ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ | Viral Video | ಮಳೆಯಲ್ಲಿ ನಾಯಿಯ ಭರ್ಜರಿ ಡಾನ್ಸ್​; ಶ್ವಾನದ ಖುಷಿ ನೋಡಿ ಮೆಚ್ಚಿಕೊಂಡ ನೆಟ್ಟಿಗರು

ಆತನನ್ನು ಭೇಟಿಯಾದ ಕೂಡಲೇ ಆಕರ್ಷಿತಳಾಗಿದ್ದೆ. ಅಷ್ಟು ಬೇಗನೆ ನಾನು ಯಾವ ಹುಡುಗರ ಮೇಲೂ ಆಕರ್ಷಿತಳಾಗಿರಲಿಲ್ಲ. ಈತನನ್ನು ಬಹುಬೇಗನೆ ಹಚ್ಚಿಕೊಂಡೆ. ಆತನಿಲ್ಲದೆ ಜೀವನವಿಲ್ಲ ಎಂಬಲ್ಲಿವರೆಗೆ ಹಚ್ಚಿಕೊಂಡಿದ್ದೇನೆ. ನಮ್ಮಿಬ್ಬರ ಸಂಬಂಧ ಅತ್ಯುತ್ತಮವಾಗಿತ್ತು, ಈಗಲೂ ಇದೆ ಕೂಡಾ. ನಾವು ಲಿವ್‌ ಇನ್‌ನಲ್ಲಿದ್ದೇವೆ. ಇನ್ನೇನು ಮದುವೆಯಾಗಲೂ ಬಯಸಿದ್ದೆವು. ಈಗ ಮದುವೆ ಮಕ್ಕಳು ಎಂದೆಲ್ಲ ಯೋಚಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಾಗಿ ಮುಂದೊಂದು ದಿನ ಅವರಿಗೆ ತಮ್ಮ ಅಪ್ಪ ಅಮ್ಮ ಅಣ್ಣತಂಗಿ ಎಂದು ಗೊತ್ತಾದರೆಪರಿಸ್ಥಿತಿ ಹೇಗಿದ್ದೀತು ಎಂದು ಊಹಿಸಲೂ ಕಷ್ಟವಾಗುತ್ತಿದೆ. ಹಾಗಾಗಿ ನಮ್ಮನ್ನು ನಾವು ಇಂತಹ ಸ್ಥಿತಿಯಲ್ಲಿಡಲು ಬಯಸುತ್ತಿಲ್ಲ ಎಂದಿದ್ದಾಳೆ.

ನಮ್ಮನ್ನು ನೋಡಿ ಹಲವರು ಹೇಳುತ್ತಿದ್ದರು, ನೀವಿಬ್ಬರೂ ನೋಡಲು ಒಂದೇ ತರಹ ಇದ್ದೀರಿ ಎಂದು. ನನ್ನ ಹಲವು ಗೆಳತಿಯರು, ನಿನ್ನ ಮೇಲ್‌ ವರ್ಷನ್‌ ಆತ ಎನ್ನುತ್ತಿದ್ದರು. ಆದರೆ ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಎಲ್ಲವೂ ಅರ್ಥವಾಗುತ್ತಿದೆ ಎಂದಿದ್ದಾಳೆ.

ಈಕೆಯ ಪೋಸ್ಟ್‌ ಓದಿದ ಹಲವರು, ಅಯ್ಯೋ ಇದೆಂಥ ದುರ್ಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರೀತಿಸಿದ ಮೇಲೆ ಇಂಥ ಸತ್ಯ ತಿಳಿದಾಗ ಆಗುವ ಆಘಾತ ಊಹಿಸಬಲ್ಲೆವು. ಆದರೆ ಇದು ವಿಧಿ. ಇದಕ್ಕೆ‌ ಪರಿಹಾರ ಸೂಚಿಸುವುದು ಬಲು ಕಷ್ಟ ಎಂದೂ ಹೇಳಿದ್ದಾರೆ. ಇನ್ನೂ ಕೆಲವರು, ಖಂಡಿತ ಇದು ಬಹಳ ನೋವಿನ ಸಂಗತಿ. ಆದರೆ ನೀವು ಹೀಗೆಯೇ ಜೊತೆಯಾಗಿರಿ. ಆದರೆ, ಮಕ್ಕಳನ್ನು ಮಾಡಿಕೊಳ್ಳಬೇಡಿ. ಬಾಡಿಗೆ ತಾಯ್ತನವನ್ನು ಬೇಕಾದರೆ ಯೋಚಿಸಬಹುದು. ಆದರೆ, ಬೇರೆಯಾಗಬೇಡಿ, ಆ ಹಾಳು ವರದಿ ಹರಿದು ಬಿಸಾಕಿ, ಇಂಥದ್ದೊಂದು ಘಟನೆ ಜೀವನದಲ್ಲಿ ನಡೆದೇ ಇಲ್ಲವೆಂಬಂತೆ ಸಂತೋಷವಾಗಿ ಬಾಳಿ ಎಂದೂ ಜೋಡಿಗಳಿಗೆ ಕೆಲವರು ಹರಸಿದ್ದಾರೆ.

ಇದನ್ನೂ ಓದಿ | ಮೆಚ್ಚಿನ ಜನತೆಗೆ ಮುಗಿಲಿನಿಂದ ದರ್ಶನ ನೀಡಿದಳೇ ರಾಣಿ ಎಲಿಜಬೆತ್!

Exit mobile version