ಲಖನೌ: ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬಳು, ಕುರ್ಕುರೆ (Kurkure) ಪ್ಯಾಕೆಟ್ ತರಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಪತಿಯಿಂದ ವಿಚ್ಛೇದನ (Divorce) ಬಯಸಿದ್ದಾಳೆ! ಇದು ನಿಜ. ಪ್ರತಿನಿತ್ಯ ಪತಿಯಿಂದ ಕುರ್ಕುರೆ ತರಿಸಿಕೊಂಡು ತಿನ್ನುತ್ತಿದ್ದ ಈಕೆ, ಒಂದು ದಿನ ಅದನ್ನು ತರಲು ಪತಿ ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ದಾಂಪತ್ಯವನ್ನೇ ಬರ್ಬಾದ್ ಮಾಡಿದ್ದಾಳೆ. ಈ ಸುದ್ದಿ ಈಗ ವೈರಲ್ (Viral news) ಆಗಿದೆ.
5 ರೂಪಾಯಿ ಚಿಲ್ಲರೆ ಬೆಲೆಯ ಕುರ್ಕುರೆ ಪ್ಯಾಕೆಟ್ ಇವರ ದಾಂಪತ್ಯ ವಿಚ್ಛೇದನಕ್ಕೆ ಕಾರಣವಾಗಿದ್ದು, ಈ ಮಹಿಳೆಯ ಹೆಸರು ಬಹಿರಂಗಪಡಿಸಲಾಗಿಲ್ಲ. ಪತ್ನಿಯ ಈ ವ್ಯಸನ ಪ್ರತಿದಿನ ದಂಪತಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಪತಿ ಮನೆಗೆ ಪ್ಯಾಕೆಟ್ ತರಲು ಮರೆತಾಗ ಈ ವಿವಾದ ಉಲ್ಬಣಗೊಂಡಿದೆ. ಇದು ತಾರಕಕ್ಕೆ ಹೋಗಿದೆ. ತನ್ನ ದೈನಂದಿನ ಆಸ್ವಾದವನ್ನು ನಿರಾಕರಿಸಿದ್ದರಿಂದ ಕೋಪಗೊಂಡ ಪತ್ನಿ, ಗಂಡನ ಮನೆಯನ್ನು ತೊರೆದು ಹೆತ್ತವರ ಮನೆಗೆ ಹೋಗಿದ್ದಾಳೆ. ಬಳಿಕ ಪತಿಯಿಂದ ವಿಚ್ಛೇದನ ಕೋರಿ ಪೊಲೀಸರ ಮೊರೆ ಹೋಗಿದ್ದಾಳೆ.
ಕಳೆದ ವರ್ಷ ವಿವಾಹವಾದ ದಂಪತಿಯನ್ನು ಆಗ್ರಾದ ಶಹಾಗಂಜ್ ಪೊಲೀಸರು ಕುಟುಂಬ ಸಮಾಲೋಚನೆಗಾಗಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಪತಿ, ತನ್ನ ಹೇಳಿಕೆಯಲ್ಲಿ, ತನ್ನ ಹೆಂಡತಿಯ ಕುರ್ಕುರೆ ಗೀಳಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾನೆ. ಇದು ಅವರ ನಡುವಿನ ವಿವಾದದ ಬಿಂದುವಾಗಿದೆ. ಮತ್ತೊಂದೆಡೆ, ಪತಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರಿಂದ ಆತನ ಮನೆಯನ್ನು ತೊರೆಯಬೇಕಾಯಿತು ಎಂದು ಪತ್ನಿ ಆರೋಪಿಸಿದ್ದಾಳೆ. ಈ ಆರೋಪದ ಹಿಂದಿನ ಸತ್ಯಾಸತ್ಯತೆ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಗ್ರಾ ಇನ್ನೊಂದು ದಂಪತಿ ಕೂಡ ಈ ವರ್ಷದ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. “ತುಂಬಾ ಜನಪ್ರಿಯತೆ” ಗಳಿಸಿದ ಹೆಂಡತಿಯ ರಾಜಕೀಯ ಚಟುವಟಿಕೆಗಳು ಪತಿಗೆ ಕಿರಿಕಿರಿ ಉಂಟುಮಾಡಿದ್ದು, ಜೊತೆಗೆ ಇರಲಾರೆ ಎಂದು ಗಂಡ ಹೇಳಿದ್ದ. ಪರಿಸ್ಥಿತಿ ಪೊಲೀಸರಿಗೆ ತಲುಪಿತ್ತು. ಅಪರಿಚಿತರೊಂದಿಗೆ ತನ್ನ ಹೆಂಡತಿ ಮುಖಾಮುಖಿ ಭೇಟಿಯಾಗುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ಗಂಡ ಹೇಳಿದ್ದ. ನಂತರ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಇಲ್ಲಿ ಪತಿ ಸಿಕಂದರಾ ಮೂಲದವರಾಗಿದ್ದರೆ, ಮಹಿಳೆ ನ್ಯೂ ಆಗ್ರಾದ ಠಾಣಾದವರು. ಅವರಿಗೆ ಮದುವೆಯಾಗಿ ಎರಡು ವರ್ಷವಾಗಿತ್ತು. ಪತ್ನಿ ರಾಜಕೀಯದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದ್ದು, ಅದನ್ನು ತ್ಯಜಿಸಲು ಸಿದ್ಧರಿರಲಿಲ್ಲ. ಅವಳು ರಾಜಕೀಯ ಕ್ಷೇತ್ರವನ್ನು ಬಿಡದಿದ್ದರೆ ತಾನು ಅವಳ ಜೊತೆಗೆ ಇರುವುದಿಲ್ಲ ಎಂದು ಪತಿ ಹಠ ಹಿಡಿದಿದ್ದ.
ಇದನ್ನೂ ಓದಿ: Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್, ಇದು ಹೈಟೆಕ್ ಕಳ್ಳನ ಕಥೆ