ಸಿಡ್ನಿ: ರಸ್ತೆಯಲ್ಲಿ ನಿಮಗೇನಾದರು ಲಕ್ಷಾಂತರ ರೂ. ಬೆಲೆ ಬಾಳುವ ವಸ್ತು ಸಿಕ್ಕಿತು ಎಂದುಕೊಳ್ಳಿ. ಸಹಜವಾಗಿ ನೀವು ಏನು ಮಾಡುತ್ತೀರಿ? ಬಹುತೇಕ ಮಂದಿ ಜೇಬಿಗಿಳಿಸಿಕೊಂಡು ಸುಮ್ಮನಾಗುತ್ತಾರೆ. ಆದರೆ ಆಸ್ಟ್ರೇಲಿಯಾದ ಈ ಯುವತಿ ಎಲ್ಲರಂತಲ್ಲ. ಕೈಗೆ ಸಿಕ್ಕಿದ್ದ ಲಕ್ಷಾಂತರ ರೂಪಾಯಿಯ ನಾಣ್ಯವನ್ನು ಮಾಲೀಕರಿಗೆ ಮರಳಿಸಿದ ಈ ಯುವತಿಯ ಕಥೆ ಎಲ್ಲೆಡೆ ವೈರಲ್ (Viral News) ಆಗಿದೆ.
ಇದನ್ನೂ ಓದಿ: Viral Video : ರಕ್ಷಿಸಿದವನ ತೋಳು ಬಿಡದ ಬೆಕ್ಕು; ವೈರಲ್ ಆಗ್ತಿದೆ ಈ ವಿಡಿಯೊ
ಆಸ್ಟ್ರೇಲಿಯಾದ ಸಿಡ್ನಿ ನಿವಾಸಿಯಾಗಿರುವ ಷಾರ್ಲೆಟ್ ಬೊಸಾಂಕ್ವೆಟ್(20) ಪಾರ್ಟ್ ಟೈಮ್ ಮನೆ ಸ್ವಚ್ಛತೆಯ ಕೆಲಸ ಮಾಡುತ್ತಾರೆ. ಷಾರ್ಲೆಟ್ ಇತ್ತೀಚೆಗೆ ಮನೆಯೊಂದನ್ನು ಸ್ವಚ್ಛ ಮಾಡಲು ತೆರಳಿದಾಗ ಆ ಮನೆಯಲ್ಲಿ ಆಕೆಗೆ ನಾಣ್ಯವೊಂದು ಸಿಕ್ಕಿತು. 1930ರ ಕಾಲದ ನಾಣ್ಯ ಅದಾಗಿತ್ತು. ಮನೆಯಲ್ಲಿದ್ದ ಕಾರ್ಪೆಟ್ ತೆಗೆದು ಸ್ವಚ್ಛ ಮಾಡುವಾಗ ಈ ನಾಣ್ಯ ಸಿಕ್ಕಿದ್ದು, ಅದನ್ನು ಸ್ವಚ್ಛ ಮಾಡಿದಾಗ ಆಕೆಗೆ ಆ ನಾಣ್ಯ ತೀರಾ ಹಳೆಯದು ಎನ್ನುವುದು ತಿಳಿದು ಬಂತು. ಆ ನಾಣ್ಯದ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಸರ್ಚ್ ಮಾಡಿದಾಗ ಅದರ ಬೆಲೆ ಸುಮಾರು 21 ಲಕ್ಷ ರೂ. ಇರುವುದು ತಿಳಿದುಬಂತು
ಕೂಡಲೇ ಆಕೆ ಆ ನಾಣ್ಯವನ್ನು ಆ ಮನೆಯ ಮಾಲೀಕರ ಕೈಗೆ ಒಪ್ಪಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಹರಿದಾಡಿದೆ. ಯುವತಿಯ ಪ್ರಾಮಾಣಿಕತೆಯನ್ನು ಕಂಡಿರುವ ನೆಟ್ಟಿಗರು ಆಕೆಯ ಬಗ್ಗೆ ಮೆಚ್ಚುಗೆ ಹೊರಹಾಕಲಾರಂಭಿಸಿದ್ದಾರೆ.
ಇದನ್ನೂ ಓದಿ: Viral Video: ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿಯನ್ನು ಅತಿಕ್ರಮಿಸಿದ್ದ ಐವರು ಟಿಟಿಪಿ ಉಗ್ರರ ಹತ್ಯೆಗೈದ ಪಾಕ್ ಭದ್ರತಾ ಪಡೆ
1929ರಿಂದ 1939ರವರೆಗೆ ಆಸ್ಟ್ರೇಲಿಯಾದಲ್ಲಿ ಆರ್ಥಿಕ ಸಂಕಷ್ಟವಿತ್ತು. ಹಾಗಾಗಿ ನಾಣ್ಯಗಳ ಮುದ್ರಣವೂ ಕಡಿಮೆಯಾಗಿತ್ತು. 1930ರಲ್ಲಿ ಕೇವಲ 1500 ನಾಣ್ಯಗಳು ಮುದ್ರಣವಾಗಿದ್ದವು. ಹಾಗಾಗಿ ಈಗ ಅದರ ಬೆಲೆ ಅತಿ ಹೆಚ್ಚಿದೆ. ಕಳೆದ ವರ್ಷ ಇದೇ ರೀತಿಯ 1930ರ ನಾಣ್ಯವನ್ನು 50 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತು. ಹಾಗೆಯೇ 2019ರಲ್ಲಿ 1930ರ ನಾಣ್ಯ ಬರೋಬ್ಬರಿ 9.50 ಕೋಟಿ ರೂ.ಗೆ ಮಾರಾಟವಾಗಿತ್ತು ಎನ್ನುವ ವರದಿ ಇದೆ.