ಲಂಡನ್: ಸೀರೆ ನಮ್ಮ ಭಾರತದ ಸಂಸ್ಕೃತಿಯ ಭಾಗ. ಭಾರತೀಯ ಹೆಣ್ಣು ಮಕ್ಕಳು ವಿದೇಶಗಳಲ್ಲೂ ಕೂಡ ಹೆಮ್ಮೆಯಿಂದ ಸೀರೆಯುಟ್ಟು ಕಾಣಿಸಿಕೊಳ್ಳುವುದನ್ನು ನೋಡಿರುತ್ತೀರಿ. ಆದರೆ ಇದೀಗ ವಿಶೇಷವೆನ್ನುವಂತೆ ಭಾರತ ಮೂಲದ ಮಹಿಳೆಯೊಬ್ಬರು ಬ್ರಿಟನ್‌ನಲ್ಲಿ ಸೀರೆಯುಟ್ಟುಕೊಂಡೇ ಮ್ಯಾರಥಾನ್ ಓಡಿದ್ದಾರೆ. 42 ಕಿ.ಮೀ.ವರೆಗೂ ಓಡಿರುವ ಈ ಮಹಿಳೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ (Viral News) ಚರ್ಚೆಯಲ್ಲಿದೆ.
ಇದನ್ನೂ ಓದಿ: Summer Lehenga Saree: ಬ್ಯೂಟಿಫುಲ್ ಸಮ್ಮರ್ ಲೆಹೆಂಗಾ ಸೀರೆ ಟ್ರೆಂಡ್‌ಗೆ ನಾಂದಿ ಹಾಡಿದ ನಟಿ ಮಾಳವಿಕಾ ರಾಜ್
ಅವರು ಒಡಿಯಾ ಮೂಲದ ಮಧುಸ್ಮಿತಾ ಜೆನಾ. 41 ವರ್ಷದ ಅವರು ಮ್ಯಾಂಚೆಸ್ಟರ್‌ನ ಪ್ರೌಢಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಮ್ಯಾಂಚೆಸ್ಟರ್‌ನಲ್ಲಿ ನಡೆದ 42.5 ಕಿ. ಮೀ ಉದ್ದದ ಮ್ಯಾಂಚೆಸ್ಟರ್ ಮ್ಯಾರಥಾನ್‌ನಲ್ಲಿ ಅವರು ಭಾಗವಹಿಸಿದ್ದರು. ಆ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಎಲ್ಲರೂ ಸ್ಪೋರ್ಟ್ಸ್ ಜರ್ಸಿಗಳನ್ನು ಹಾಕಿಕೊಂಡಿದ್ದರು. ಆದರೆ ಮಧುಸ್ಮಿತಾ ಮಾತ್ರ ಭಾರತದ ಸಾಂಪ್ರದಾಯಿಕ ಸಂಬಲ್ಪುರಿ ಕೈಮಗ್ಗದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.
ಮಧುಸ್ಮಿತಾ ಅವರು ನಾಲ್ಕು ಗಂಟೆ 50 ನಿಮಿಷಗಳಲ್ಲಿ ಮ್ಯಾರಥಾನ್ ಓಟವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ಕಪ್ಪು ಬಣ್ಣದ ರವಿಕೆ ಜತೆ ಕೆಂಪು ಬಣ್ಣದ ಸೀರೆ, ಹಣೆಯಲ್ಲಿ ಬಿಂದಿ ಇಟ್ಟು ಓಡುತ್ತಿರುವ ಮಧುಸ್ಮಿತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗುತ್ತಿವೆ. ಮ್ಯಾಂಚೆಸ್ಟರ್ ಮ್ಯಾರಥಾನ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಈ ವಿಶೇಷ ಸ್ಪರ್ಧಿಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. “ಇದು ನಮ್ಮ ಸಂಸ್ಕೃತಿಗೆ ಹೆಣ್ಣು ಮಕ್ಕಳು ಕೊಡಬೇಕಾದ ಮೌಲ್ಯ” ಎಂದು ಭಾರತೀಯರು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಧುಸ್ಮಿತಾ ಅವರು “ಹೆಣ್ಣು ಮಕ್ಕಳು ಸೀರೆ ಉಟ್ಟುಕೊಂಡು ಓಡುವುದಕ್ಕೆ ಆಗುವುದಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಅದು ಸುಳ್ಳು ಎಂದು ನಾನು ಮಾಡಿ ತೋರಿಸಿದ್ದೇನೆ. ಸಾಮಾನ್ಯವಾಗಿ ನಾನು ಬ್ರಿಟನ್‌ನ ಬೇಸಿಗೆಯಲ್ಲಿ ಸೀರೆಯನ್ನೇ ಉಡುತ್ತೇನೆ. ನನಗೆ ನನ್ನ ತಾಯಿ ಮತ್ತು ಅಜ್ಜಿಯಿಂದಾಗಿ ಸೀರೆಯ ಮೇಲೆ ಪ್ರೀತಿ ಹುಟ್ಟಿಕೊಂಡಿದೆ” ಎಂದು ಹೇಳಿದ್ದಾರೆ. ಅದೇನೇ ಇರಲಿ, ವಿದೇಶಿ ಉಡುಗೆಗಳಿಗೆ ಭಾರತೀಯರು ಮಾರು ಹೋಗುತ್ತಿರುವ ಈ ಸಮಯದಲ್ಲಿ ಇಲ್ಲಿನ ಹೆಣ್ಣು ಮಗಳೊಬ್ಬಳು ವಿದೇಶದಲ್ಲಿ ಸೀರೆಯ ಸದ್ದು ಆಗುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ.