ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ (Food Delivery App) ವೇದಿಕೆ ಝೊಮಾಟೋ (Zomato) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದಲ್ಲಿ ಅತ್ಯಂತ ಜನಪ್ರಿಯ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳ ಪೈಕಿ ಇದೂ ಒಂದು. ಈ ಕಂಪೆನಿಯಲ್ಲಿ ಪುರುಷರ ಜತೆಗೆ ಮಹಿಳೆಯರೂ ಫುಡ್ ಡೆಲಿವರಿ ಮಾಡಿ ಯಾವ ಉದ್ಯೋಗಕ್ಕೂ ಸೈ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದೀಗ ಕಂಪೆನಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಮಹಿಳಾ ಉದ್ಯೋಗಿಗಳಿಗೆ ಟೀ ಶರ್ಟ್ ಬದಲು ಕುರ್ತಾ ವಿತರಿಸಿದೆ. ಸದ್ಯ ಝೊಮಾಟೋದ ಕುರ್ತಾ ಸಮವಸ್ತ್ರದ ವಿಡಿಯೊ ವೈರಲ್ ಆಗಿದೆ (Viral News).
ಯಾಕಾಗಿ ಈ ನಿರ್ಧಾರ?
ಝೊಮಾಟೋದ ಮಹಿಳಾ ಉದ್ಯೋಗಿಗಳು ಸಮವಸ್ತ್ರದ ಭಾಗವಾಗಿ ಟೀ ಶರ್ಟ್ ಬದಲು ಕುರ್ತಾಗಳನ್ನು ಧರಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಕಂಪೆನಿ ಘೋಷಿಸಿದೆ. ಪಾಶ್ಚಿಮಾತ್ಯ ಶೈಲಿಯ ಟೀ ಶರ್ಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಲವು ಮಹಿಳಾ ಉದ್ಯೋಗಿಗಳ ಪರ್ಯಾಯ ಮಾರ್ಗ ಹುಡುಕುವಂತೆ ಮನವಿ ಮಾಡಿದ್ದರು. ಅದರ ಭಾಗವಾಗಿ ಕುರ್ತಾ ಪರಿಚಯಿಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ. ಮಾತ್ರವಲ್ಲ ಹೊಸ ಸಮವಸ್ತ್ರದ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ವಿಡಿಯೊದಲ್ಲೇನಿದೆ?
ಝೊಮಾಟೋ ಉದ್ಯೋಗಿಗಳು ಹೊಸ ಸಮವಸ್ತ್ರ ಧರಿಸಿ ಖುಷಿಯಿಂದ ಫೋಸ್ ನೀಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಿಶೇಷ ಎಂದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಹೊಸ ಕುರ್ತಾವನ್ನು ಪರಿಚಯಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಝೊಮಾಟೋ, ʼʼಇವತ್ತಿನಿಂದ ಝೊಮಾಟೋ ಮಹಿಳಾ ಉದ್ಯೋಗಿಗಳು ಸಮವಸ್ತ್ರವಾಗಿ ಕುರ್ತಾ ಧರಿಸಲಿದ್ದಾರೆʼʼ ಎಂದು ಬರೆದುಕೊಂಡಿದೆ. ಜತೆಗೆ ಮಹಿಳೆಯರಿಗೆ ಟೀ ಶರ್ಟ್ ಅಥವಾ ಕುರ್ತಾ ಎರಡರ ಪೈಕಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಜತೆಗೆ ಅನುಕೂಲಕ್ಕಾಗಿ ಕುರ್ತಾದಲ್ಲಿ ಜೇಬನ್ನೂ ಅವಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೆಟ್ಟಿಗರು ಏನಂದ್ರು?
ಕಂಪೆನಿಯ ಈ ʼಉದ್ಯೋಗ ಸ್ನೇಹಿʼ ನಡೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಜತೆಗೆ ಹೊಸ ಸಮವಸ್ತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. “ನಾನು ಈ ಬ್ರ್ಯಾಂಡ್ ಅನ್ನು ಹೆಚ್ಚು ಇಷ್ಟ ಪಡಲೂ ಇದೂ ಒಂದು ಕಾರಣ. ಸೇವೆಯಿಂದಾಗಿ ಮಾತ್ರವಲ್ಲ ಆಲೋಚನೆಗಳು ಮತ್ತು ಸಂಸ್ಕೃತಿಯಿಂದಾಗಿ ಕಂಪೆನಿ ಗಮನ ಸೆಳೆಯುತ್ತದೆʼʼ ಎಂದು ಒಬ್ಬರು ಹೇಳಿದ್ದಾರೆ. “ಜನರಿಗೆ ಅವಕಾಶಗಳನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು ಸಾವಿರಾರು ಜೀವಗಳನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು ಝೊಮಾಟೋ” ಎಂದು ಇನ್ನೊಬ್ಬರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ʼʼಎಲ್ಲರ ಬಗ್ಗೆಯೂ ಕಂಪೆನಿ ಕಾಳಜಿ ವಹಿಸುತ್ತಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆʼʼ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral News: ಅಂಗವೈಕಲ್ಯತೆ ಇದ್ದರೂ ಸ್ವಾಭಿಮಾನದ ಬದುಕು; ಈ ಫುಡ್ ಡೆಲಿವರಿ ಏಜೆಂಟ್ ವಿಲ್ ಪವರ್‌ಗೆ ನೆಟ್ಟಿಗರ ಬಹುಪರಾಕ್
ʼʼಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಅವರಿಗೆ ಸಮವಸ್ತ್ರದ ಆಯ್ಕೆಯನ್ನು ನೀಡಿರುವ ಝೊಮಾಟೋದ ಈ ಉಪಕ್ರಮ ಎಲ್ಲರಿಗೂ ಮಾದರಿ. ಉದ್ಯೋಗಿಗಳ ಭಾವನೆಯನ್ನು ಗೌರವಿಸುವ ಕಂಪೆನಿಯ ಮನಸ್ಥಿತಿಯನ್ನು ಇದು ಎತ್ತಿ ಹಿಡಿಯುತ್ತದೆ. ಕಂಪೆನಿಯ ಈ ನಿರ್ಧಾರಕ್ಕೆ ಅಭಿನಂದನೆಗಳುʼʼ ಎಂದು ನೆಟ್ಟಿಗರೊಬ್ಬರು ಹೊಗಳಿದ್ದಾರೆ. ʼʼಝೊಮಾಟೋ ಯಾವತ್ತೂ ಹೊಸದಾಗಿ ಚಿಂತನೆ ನಡೆಸುತ್ತಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕಂಪೆನಿಯ ಈ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ