ಲಖನೌನಲ್ಲಿ ಬುರ್ಖಾ ಧರಿಸಿ ಸ್ವಿಗ್ಗಿ ಬ್ಯಾಗ್ ಹೆಗಲಿಗೇರಿಸಿದ ರಿಝ್ವಾನಾ ಎಂಬ ಹೆಸರಿನ ಮಹಿಳೆ ಈಗ ಇಂಟರ್ನೆಟ್‌ನ ಸದ್ಯದ ಭಾರೀ ಸೆನ್ಸೇಶನ್! ಬುರ್ಖಾ ಧರಿಸಿ ಸ್ವಿಗ್ಗಿ ಬ್ಯಾಗ್ ಹೊತ್ತ ಮಹಿಳೆಯೋರ್ವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಂತ ಈಕೆ ಸ್ವಿಗ್ಗಿಗಾಗಿ ಕೆಲಸ ಮಾಡುತ್ತಿಲ್ಲ. ಬಳಸಿ ಎಸೆಯುವ ವಸ್ತುಗಳನ್ನು ಮಾರಾಟ ಮಾಡುವ ಬಡ ಮಹಿಳೆ ಈಕೆಯಾಗಿದ್ದು, ಸ್ವಿಗ್ಗಿಗೂ ತಾನು ಹೊತ್ತಿರುವ ಸ್ವಿಗ್ಗಿ ಬ್ಯಾಗ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾಳೆ. ಹಾಗಾದರೆ, ಈಕೆ ಸ್ವಿಗ್ಗಿ ಬ್ಯಾಗ್ ಹಿಡಿದಿರುವ ಹಿಂದೆಯೇ ಕತೆಯಿದೆ.
ರಿಝ್ವಾನಾ ಬಡ ಕುಟುಂಬದಿಂದ ಬಂದಾಕೆ. ಲಖನೌನ ಜನತಾ ನಗರಿ ಕಾಲೋನಿಯಲ್ಲಿ ಈಕೆ ವಾಸಿಸುತ್ತಿದ್ದು ಈಕೆ ಸ್ವಿಗ್ಗಿಗಾಗಿ ಕೆಲಸ ಮಾಡುತ್ತಿಲ್ಲ. ಈಕೆಯೇ ಹೇಳುವಂತೆ, ಈಕೆ ಬಳಸಿ ಎಸೆಯುವ ವಸ್ತುಗಳನ್ನು ಲಖನೌನ ರಸ್ತೆಗಳಲ್ಲಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು ಈವರೆಗೆ ಇವೆಲ್ಲ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಬ್ಯಾಗ್ ಹರಿದುಹೋಗಿದೆಯಂತೆ. ಅದಕ್ಕಾಗಿ ದೊಡ್ಡ ಇನ್ನೊಂದು ಬ್ಯಾಗ್ ಖರೀದಿಸಬೇಕಾಗಿತ್ತು. ಅಂಥ ಸಂದರ್ಭದಲ್ಲಿ ೫೦ ರೂಪಾಯಿ ಕೊಟ್ಟು ಈ ಸ್ವಿಗ್ಗಿ ಬ್ಯಾಗ್ ಖರೀದಿಸಿದೆ ಎನ್ನುತ್ತಾರೆ ಈಕೆ.
ಇದನ್ನೂ ಓದಿ | Viral Video | ಚಲಿಸುವ ಸ್ಕೂಟಿ ಮೇಲೆಯೇ ಪ್ರೇಮಿಗಳ ರೊಮ್ಯಾನ್ಸ್, ಜೋಡಿಗಾಗಿ ಪೊಲೀಸರ ಹುಡುಕಾಟ
ಈಕೆಯ ಗಂಡ ಆಟೋರಿಕ್ಷಾ ಡ್ರೈವರ್ ಆಗಿದ್ದು ಕಳೆದ ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಈಕೆಗೆ ನಾಲ್ಕು ಮಕ್ಕಳಿದ್ದು ಒಬ್ಬ ಮಗಳನ್ನು ಎರಡು ವರ್ಷದ ಹಿಂದೆ ಮದುವೆ ಮಾಡಿದ್ದಾಳೆ. ಈಗ ಉಳಿದ ಮೂರು ಮಕ್ಕಳನ್ನು ಸಾಕುವ ಪೂರ್ತಿ ಜವಾಬ್ದಾರಿ ಈಕೆಯ ಹೆಗಲ ಮೇಲಿದ್ದು, ಈಕೆ ಹೀಗೆ ರಸ್ತೆಗಳಲ್ಲಿ ಒಮ್ಮೆ ಬಳಸಿ ಎಸೆಯುವಂತಹ ವಸ್ತುಗಳನ್ನು ಮಾರಾಟ ಮಾಡುತ್ತಾಳೆ. ತನ್ನ ಉಳಿದ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಬಯಕೆ ಈಕೆಯದಾಗಿದ್ದು ಹಗಲಿರುಳು ಕಷ್ಟಪಟ್ಟು ದುಡಿಯುತ್ತಾಳೆ. ಈಕೆ ಮಾರಾಟ ಮಾಡುತ್ತಾ ಮಾಡುತ್ತಾ ದಿನವೊಂದಕ್ಕೆ ಆರೇಳು ಕಿಮೀಗಿಂತಲೂ ಹೆಚ್ಚು ನಡೆಯುತ್ತಿದ್ದು, ಇದರಿಂದ ಆಕೆ ದಿನವೊಂದಕ್ಕೆ ೬೦-೭೦ ರೂಪಾಯಿ ಲಾಭ ಪಡೆಯುತ್ತಾಳಂತೆ.
ಆದರೆ, ಆಕೆ ಬುರ್ಖಾ ಧರಿಸಿ ಸ್ವಿಗ್ಗಿ ಬ್ಯಾಗ್ ಹೊತ್ತು ನಡೆದು ಹೋಗುತ್ತಿರುವ ಫೋಟೋ ಒಂದು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಈಕೆ ಸ್ವಿಗ್ಗಿಗಾಗಿ ದುಡಿಯುತ್ತಿದ್ದಾಳೆ ಎಂಬಂತೆ ಭಾವಿಸಲಾಗಿದ್ದು, ಇದೀಗ ಈಕೆಯೇ ತನ್ನ ಸ್ವಿಗ್ಗಿ ಬ್ಯಾಗಿನ ಹಿನ್ನೆಲೆಯನ್ನು ವಿವರಿಸಿದ್ದಾಳೆ.
ಇದನ್ನೂ ಓದಿ | Viral tweet | ʼಭೂಮಿ ಮೇಲಿನ ಸ್ವರ್ಗʼ ಎಂದು ಫೋಟೋ ಶೇರ್ ಮಾಡಿದ ರೈಲ್ವೇ ಸಚಿವ, ಎಲ್ಲಿಯದು?