ಜಿಮ್ ಒಂದರ ಚಿತ್ರಣ ಅಬ್ಬಬ್ಬಾ ಅಂದರೆ ಹೇಗಿದ್ದೀತು? ಒಂದಿಷ್ಟು ತರಬೇತುದಾರರಿರುವ ಹಲವಾರು ವರ್ಕೌಟ್ ಸಾಧನಗಳಿರುವ, ಒಳಹೊಕ್ಕ ತಕ್ಷಣ ಎನರ್ಜಿ ಬರುವ ಮ್ಯೂಸಿಕ್, ಚುರುಕಿನ ವಾತಾವರಣ. ಇಷ್ಟು ಬಿಟ್ಟರೆ ಜಿಮ್ ಎಂದರೆ ದೇಹ ದಂಡಿಸುವ ಬೆವರಿಳಿಸುವ ಕೋಣೆ. ಈಗೆಲ್ಲಾ ಬಹುತೇಕ ಪಾರ್ಕುಗಳು, ಉದ್ಯಾನವನಗಳಲ್ಲಿ ಒಂದಿಷ್ಟು ಬೆವರಿಳಿಸಬಹುದಾದ ಸಾಧನಗಳನ್ನು ಅಳವಡಿಸಿ, ಜನರು ವಾಕ್ ಜೊತೆಗೆ ಕೊಂಚ ವ್ಯಾಯಾಮವನ್ನೂ ಮಾಡಲೆಂದು ತೆರೆದ ಜಿಮ್‌ಗಳ ವ್ಯವಸ್ಥೆಯೂ ಈಗ ಸರ್ವೇಸಾಮಾನ್ಯ. ಗೋವಾದಲ್ಲಿ ಇಂತಹ ತೆರೆದ ಜಿಮ್ ಒಂದು ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಇದೀಗ ಗಮನ ಸೆಳೆಯುತ್ತಿದೆ!
ಈ ಜಿಮ್‌ನಲ್ಲಿ ನೀವು ವ್ಯಾಯಾಮ ಮಾಡುವ ಯಂತ್ರದ ಮೇಲೆ ಕುಳಿತು ಹಿಡಿಕೆ ಹಿಡಿದು ಜಗ್ಗಿದರೆ, ನಿಮ್ಮ ವ್ಯಾಯಾಮದ ಜೊತೆಜೊತೆಗೇ, ರಾವಣವೂ ಹತ್ತು ತಲೆಗಳನ್ನು ಹೊತ್ತುಕೊಂಡು ವ್ಯಾಯಾಮ ಮಾಡುತ್ತಾನೆ! ಕೇವಲ ಒಂದೇ ಇಲ್ಲ ಇಂತಹ ಹಲವು ಪಾತ್ರಗಳು ಅಲ್ಲಿ ನಿಮ್ಮ ಜೊತೆಗೇ ಬೆವರಿಳಿಸುತ್ತದೆ. ಆದರೆ, ಬೆವರಿಳಿಸಿದ್ದು ಗೊತ್ತೇ ಆಗದಷ್ಟು ಮಜಾವೂ ಬರುತ್ತದೆ!
ಗೋವಾದಲ್ಲಿ ನಡೆಯುತ್ತಿರುವ ಸೆರೆಂಡಿಪಿಟಿ ಆರ್ಟ್ ಫೆಸ್ಟಿವಲ್‌ನಲ್ಲೊಂದು ತೆರೆದ ಜಿಮ್ ವ್ಯವಸ್ಥೆಯೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಉತ್ಸವವೀಗ ಕಲಾವಿದರಿಗೆ ಸಾಕಷ್ಟು ಪ್ರಯೋಗಗಳನ್ನು ನಡೆಸಲು ವೇದಿಕೆ ಹಾಸಿದೆ. ಇದರ ಪರಿಣಾಮ ಕಲಾವಿದರೊಬ್ಬರು ತೆರೆದ ಜಿಮ್ ಅನ್ನು ಪೌರಾಣಿಕ ಕಥೆಯಾಧಾರಿತ ಅವತಾರಗಳ ಉದ್ಯಾನವಾಗಿ ಬದಲಾಯಿಸಿ ಬಿಟ್ಟಿದ್ದಾರೆ, ಕಲಾವಿದನ ಈ ವಿನೂತನ ಐಡಿಯಾ, ಪ್ರಯೋಗಶೀಲತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಲಾವಿದ ದೀಪ್‌ತೇಜ್ ವರ್ನೇಕರ್ ಎಂಬವರು ಹೊರಾಂಗಣ ತೆರೆದ ಜಿಮ್ ಪ್ರದೇಶವನ್ನು ಸ್ಥಳೀಯ ಕಲಾವಿದರನ್ನು ಹಾಗೂ ಕಲೆಯನ್ನು ಬಳಸಿಕೊಂಡು ವಿವಿಧ ಪೌರಾಣಿಕ ಪಾತ್ರಗಳ, ಅವತಾರಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಜಿಮ್ ಮೆಶಿನ್‌ಗಳ ಜೊತೆಗೆ ಪೌರಾಣಿಕ ಪಾತ್ರಗಳೂ ವ್ಯಾಯಾಮ ಮಾಡುವವರ ಬೆವರಿಳಿಸುವಂತೆ ಮಾಡುವುದು ಜನರಿಗೆ ಮಜಾ ಕೊಡುತ್ತಿದೆ. ಕಲೆಯ ಜೊತೆಗೆ ತಂತ್ರಜ್ಞಾನವನ್ನೂ ಬಳಸಿಕೊಂಡು ಪೌರಾಣಿಕ ಪಾತ್ರಗಳ ಗೊಂಬೆಗಳು ಏಳುವುದು, ಕೂರುವುದು ಹಾರುವುದು, ನಾಲಿಗೆ ಹೊರಹಾಕುವುದು ಇತ್ಯಾದಿ ತಮಾಷೆಯ ಮನರಂಜನೆಯನ್ನೂ ಜನರಿಗೆ ನೀಡುತ್ತಿದೆ.
ಇದನ್ನೂ ಓದಿ | Viral post | ಎದುರು ಮನೆಯ ಹುಂಜದ ಕೂಗಿನಿಂದ ನಿದ್ದೆಯಿಲ್ಲ, ಪೊಲೀಸರೇ ಕ್ರಮ ತಗೊಳ್ಳಿ!
ದೀಪ್‌ತೇಜ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಹೇಳುವಂತೆ, ಪೌರಾಣಿಕ ಪಾತ್ರಗಳು ಹಾಗೂ ಅವುಗಳನ್ನು ಮಾಡುವವರ ಕಲೆ ಹೆಚ್ಚು ಜನರನ್ನು ತಲುಪುವಂತಾಗಲು ಜಿಮ್‌ನ ಮೂಲಕ ಬಳಸಿಕೊಂಡೆ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟನ್ನು ಸಾವಿರಾರು ಜನ ನೋಡಿ ಇಷ್ಟಪಟ್ಟಿದ್ದು, ಬಹುತೇಕರು ಈ ಇಡೀ ಐಡಿಯಾಕ್ಕೇ ಮನಸೋತಿದ್ದಾರೆ, ಹಲವರು ಇದೊಂದು ಭರ್ಜರಿ ಆಲೋಚನೆಯೆಂದು ಕಾಮೆಂಟ್ ಮಾಡಿದ್ದಾರೆ.
ಈ ಉತ್ಸವದ ಅಧಿಕೃತ ವೆಬ್‌ಸೈಟ್ ಈ ವಿಶೇಷ ಥೀಮ್ ಬಗ್ಗೆ ವಿವರಣೆ ನೀಡಿದೆ. ನಾವು ಹಲವು ಜಾಗಗಳಿಂದ ಇಂತಹ ಪೌರಾಣಿಕ ಪಾತ್ರಗಳ ಕಲಾಕೃತಿಗಳನ್ನು ಪಡೆದಿದ್ದು ಅದು ಇಂತಹ ತೆರೆದ ಜಿಮ್‌ನಲ್ಲಿ ಬಳಸಲಾಗಿದೆ. ಇದರ ಮುಖ್ಯ ಉದ್ದೇಶ, ಕಲಾವಿದರ ಕಲಾಕೃತಿಗಳು ನೇರವಾಗಿ ಸುಲಭವಾಗಿ ಎಲ್ಲ ಜನರಿಗೂ ತಲುಪುವಂತಾಗಬೇಕು. ತೆರೆದ ಜಿಮ್ ಮೂಲಕ ಜನರು ಕೊಂಚ ತಮಾಷೆಯ ಮಜವಾದ ಸಮಯ ಕಳೆಯುವುದರ ಜೊತೆಗೆ ನಮ್ಮ ಕಲೆ ಸಂಸ್ಕೃತಿಗಳ ಪರಿಚಯ ನೇರವಾಗಿ ಮಾಡಿಸುವುದೂ ಇಲ್ಲಿ ಮುಖ್ಯವೆನಿಸಿ ಮಾಡಿದ್ದೇವೆ ಎಂದು ವರ್ನೇಕರ್ ಹೇಳಿದ್ದಾರೆ.
ಸೆರೆಂಡಿಪಿಟಿ ಕಲಾ ಉತ್ಸವ ಗೋವಾದಲ್ಲಿ ಇದೇ ಡಿಸೆಂಬರ್ ೧೫ಕ್ಕೆ ಆರಂಭವಾಗಿದ್ದು ಇದು ಡಿಸೆಂಬರ್ ೨೩ರವರೆಗೂ ನಡೆಯಲಿದೆ. ದಕ್ಷಿಣ ಏಷ್ಯಾದಲ್ಲೇ ಇದು ಅತೀ ದೊಡ್ಡ ಕಲಾ ಉತ್ಸವವಾಗಿದ್ದು, ಈ ಬಾರಿ ಕಲೆಯ ಜೊತೆಗೆ ತಂತ್ರಜ್ಞಾನವೂ ಇದರ ಬಹುಮುಖ್ಯ ವಿಷಯವಾಗಿ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಇದನ್ನೂ ಓದಿ | Viral Video | ಭಗವಾನ್ ವಿಷ್ಣುವನ್ನು ಮದುವೆಯಾಗಿ, ‘ಅವನೇ ನನ್ನ ಪತಿ’ ಎಂದ ಯುವತಿ; ಲಕ್ಷ್ಮಿಗೊಬ್ಬಳು ಸವತಿ!