Site icon Vistara News

Viral post | ಮ್ಯಾನ್‌ಹೋಲ್‌ ದುರಂತ ತಪ್ಪಿಸಿದ ಮಕ್ಕಳ ಈ ಕಾಳಜಿ ದೊಡ್ಡವರಲ್ಲೂ ಇದ್ದಿದ್ದರೆ!

Viral post

ಎಷ್ಟೋ ಬಾರಿ ನಮ್ಮ ಕಣ್ಣೆದುರೇ ಆಗುವ ಘಟನೆಗಳನ್ನು ನೋಡಿ ಕಣ್ಣಿದ್ದೂ ಕುರುಡರಂತೆ ಮುಂದೆ ಸಾಗುತ್ತೇವೆ. ನಮ್ಮ ಮನೆ ದಾಟಿದ ಕೂಡಲೇ ಇರುವ ಸಮಸ್ಯೆಯನ್ನು ಸರಿ ಮಾಡಲು ಸರ್ಕಾರದ ಜನರೇ ಬರಲಿ ಎಂದು ಕಾಯುತ್ತೇವೆ. ಸಮಸ್ಯೆಯೇನೇ ಇದ್ದರೂ ಸರ್ಕಾರವನ್ನು ತೆಗಳುತ್ತೇವೆ. ನಾವೇ ರಸ್ತೆಗೆ ಕಸ ಸುರಿದು, ಸರ್ಕಾರದ ಮಂದಿ ಕ್ಲೀನ್‌ ಮಾಡುತ್ತಿಲ್ಲವೆಂದು ದೂರುತ್ತೇವೆ. ಸಣ್ಣ ಸಣ್ಣ ಜವಾಬ್ದಾರಿಗಳನ್ನು ನಾವು ತೆಗೆದುಕೊಳ್ಳುವ ಮೂಲಕ ಸ್ವಸ್ಥ ಸಮಾಜ ಕಟ್ಟಬಹುದೆಂಬ ಯೋಚನೆಯನ್ನು ಮಾತ್ರ ಮಾಡುವಲ್ಲಿ ಎಡವುತ್ತೇವೆ.

ಒಳ್ಳೆಯತನಕ್ಕೆ ವಯಸ್ಸಿನ ಹಂಗಿಲ್ಲ. ಸಣ್ಣ ಸಣ್ಣ ನಮ್ಮ ಕಾಳಜಿಗಳೂ, ಒಳ್ಳೆಯ ಕೆಲಸಗಳೂ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನೇ ತರಬಹುದು. ಆದರೆ, ಮಾಡಲು ಮನಸ್ಸಿರಬೇಕು, ಹೃದಯವೂ ಇರಬೇಕು. ಇದೀಗ ಅಂತಹ ಕಣ್ತೆರೆಸುವ ಕೆಲಸ ಮಾಡಿದ ಪುಟ್ಟ ಮಕ್ಕಳ ವಿಡಿಯೋ ಒಂದು ವೈರಲ್‌ ಆಗಿ ಸುದ್ದಿ ಮಾಡುತ್ತಿದೆ. ದೇಶ ಯಾವುದಾದರೇನು, ಪುಟ್ಟ ಮಕ್ಕಳ ಈ ನಡೆ ದೊಡ್ಡವರ ಕಣ್ಣನ್ನೂ ತೆರೆಸುವಂತಿದೆ.

ಸಾಕಷ್ಟು ಜನಮೆಚ್ಚುಗೆ ಪಡೆದ ಈ ವಿಡಿಯೋನಲ್ಲಿ ಮಕ್ಕಳಿಬ್ಬರು ನಡೆದು ಹೋಗುತ್ತಿರುವ ದಾರಿಯಲ್ಲಿ ಕಂಡ ತೆರೆದ ಮ್ಯಾನ್‌ಹೋಲ್‌ನಿಂದ ಆಗಬಹುದಾದ ತೊಂದರೆಯನ್ನು ತಪ್ಪಿಸಿದ್ದಾರೆ.

ವಿದೇಶದ ರಸ್ತೆಯೊಂದರಲ್ಲಿ ನಡೆದು ಸಾಗುತ್ತಿರುವ ಮಕ್ಕಳಿಬ್ಬರಿಗೆ ವಾಹನಗಳು ಸಂಚರಿಸುವ ಬ್ಯುಸಿ ರಸ್ತೆಯ ಮದ್ಯದಲ್ಲಿ ಮ್ಯಾನ್‌ಹೋಲೊಂದು ತೆರೆದಿಟ್ಟ ಸ್ಥಿತಿಯಲ್ಲಿರುವುದು ಕಾಣುತ್ತದೆ. ಕೂಡಲೇ ಕಾರ್ಯಪ್ರವೃತ್ತರಾದ ಮಕ್ಕಳು ಅಕ್ಕ ಪಕ್ಕದಲ್ಲಿರುವ ದೊಡ್ಡ ಇಟ್ಟಿಗೆಯಂಥ ಕಲ್ಲುಗಳನ್ನು ಹೆಕ್ಕಿ ತಂದು ಈ ಮ್ಯಾನ್‌ಲೋಲ್‌ ತೆರೆದಿರುವುದು ಎಲ್ಲರ ಗಮನಕ್ಕೆ ಬರುವಂತೆ ಅದರ ಅಕ್ಕಪಕ್ಕ ಜೋಡಿಸಿ ಅಪಾಯದ ಸೂಚನೆಯನ್ನು ನೀಡುವ ಪ್ರಯತ್ನವನ್ನು ಮಕ್ಕಳು ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ | Viral post | ಇಂಗ್ಲೆಂಡಿನ ಈ ವಿಶೇಷ ಅನನಾಸಿನ ಬೆಲೆ ಒಂದು ಲಕ್ಷ ರೂಪಾಯಿಗಳು!

ಮಕ್ಕಳು ಮ್ಯಾನ್‌ ಹೋಲನ್ನು ನೋಡಿಯೂ ಸುಮ್ಮನೆ ಹಾಗೆ ಬಿಟ್ಟು ಹೋಗಬಹುದಿತ್ತು. ಎಷ್ಟೋ ಮಂದಿ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಅದರ ಮಕ್ಕದಿಂದಲೇ ಸಾಗುವುದೂ ಅಲ್ಲಿ ಕಂಡು ಬರುತ್ತದೆ. ಯಾರೊಬ್ಬರೂ ಇಳಿದು ಇದನ್ನು ಸರಿಪಡಿಸುವ ಗೋಜಿಗೆ ಹೋಗಿರುವುದಿಲ್ಲ. ಆದರೆ, ಮಕ್ಕಳು ಸಮಾಜದೆಡೆಗೆ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು, ಮುಂಜಾಗರೂಕತೆಯ ಪ್ರಯತ್ನವಾಗಿ ತಮ್ಮ ಕರ್ತವ್ಯ ನಿಭಾಯಿಸುವ ಈ ವಿಡಿಯೋ ಎಲ್ಲರಿಗೂ ಉತ್ತಮ ಸಂದೇಶ ಸಾರುವಂತಿದೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಇರುವ ಜವಾಬ್ದಾರಿಯನ್ನು ಎಚ್ಚರಿಸುವಂತಿದೆ.

ಐಎಎಸ್‌ ಅಧಿಕಾರಿಯೊಬ್ಬರು ಸಮಾಜದಲ್ಲಿ ಬದಲಾವಣೆ ತರಲು ವಯಸ್ಸಾಗಬೇಕೆಂದೇನಿಲ್ಲ ಎಂಬ ತಲೆಬರಹದಡಿಯಲ್ಲಿ ಈ ವಿಡಿಯೋವನ್ನು ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಇದನ್ನು ಸಾವಿರಾರು ಮಂದಿ ನೋಡಿ ಮೆಚ್ಚಿದ್ದು, ಮಕ್ಕಳ ಈ ನಡೆಗೆ ಶ್ಲಾಘಿಸಿದ್ದಾರೆ. ಮಾನವೀಯತೆಯ ಈ ನಡೆ ಎಲ್ಲರನ್ನೂ ಎಚ್ಚರಿಸುವಂತಿದೆ. ಮಕ್ಕಳಿಗೆ ಒಳ್ಳೆಯದಾಗಲಿ ಎಂದೂ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ಮಕ್ಕಳು ಸರಿಯಾದ ಹಾದಿಯಲ್ಲಿ ನಡೆಯುತ್ತಿರುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ. ಸ್ಪೂರ್ತಿದಾಯಕವಾಗಿದೆ ಎಂದಿರುವ ಕೆಲವರು, ಮಕ್ಕಳ ಮೂಲಕ ನಮಗೆ ಸರಿಯಾದ ಪಾಠ ಸಿಕ್ಕಿದೆ ಎಂದಿದ್ದಾರೆ.

ಇದನ್ನೂ ಓದಿ | Viral post | ಬೋರ್ಡಿಂಗ್‌ ಸ್ಕೂಲಿಗೆ ಸೇರಿಸಿದ್ದಕ್ಕೆ 40 ವರ್ಷಗಳ ಬಳಿಕ ಹೆತ್ತವರ ಮೇಲೆ ಹಲ್ಲೆ ಮಾಡಿದ ಮಗ!

Exit mobile version