ಓ ಮಹಿಳೆಯರೇ, ನಿಮ್ಮ ಗಂಡಂದಿರು ಸ್ನಾನ ಮಾಡುವಾಗ ಕಾಲು ತೊಳೆಯುತ್ತಾರೋ ಇಲ್ಲವೋ?
ಅರೆ! ಇದೆಂಥಾ ಪ್ರಶ್ನೆ ಎಂದು ಗಲಿಬಿಲಿಯಾಯಿತೇ? ಯಾಕೆ ಇಂತಹ ಸಾಮಾನ್ಯವಾದ ಅಷ್ಟೇ ತಮಾಷೆಯ ಪ್ರಶ್ನೆ ಇಲ್ಲಿ ಕೇಳುತ್ತಿದ್ದಾರಲ್ಲ, ಇದೂ ಒಂದು ಪ್ರಶ್ನೆಯಾ ಎಂಬ ಸಂದೇಹ ನಿಮಗೆ ಬಂದರೆ ಅದು ನಿಮ್ಮ ತಪ್ಪಲ್ಲ. ನಮ್ಮದೂ ಅಲ್ಲ. ಯಾಕೆಂದರೆ ಈ ಪ್ರಶ್ನೆಯನ್ನು ಕೇಳಿದ್ದು ನಾವಲ್ಲ. ಸಾಮಾಜಿಕ ಜಾಲತಾಣವೊಂದರಲ್ಲಿ ಮಹಿಳೆಯೊಬ್ಬಳು ತನ್ನಂತೆ ಇರುವ ಇತರ ಮಹಿಳೆಯರ ಬಳಿ ಪ್ರಾಮಾಣಿಕವಾಗಿ ಕೇಳಿದ್ದಾಳೆ.
ಮಜಾ ಎಂದರೆ, ಈಕೆಯೇ ಹೇಳಿಕೊಂಡಂತೆ, ನಾನು ನನ್ನ ಗಂಡ ಸ್ನಾನ ಮಾಡುತ್ತಿದ್ದ ವೇಳೆ ಅರ್ಜೆಂಟಾಗಿ ಟಾಯ್ಲೆಟ್ ಬಳಕೆ ಮಾಡಬೇಕಾಗಿ ಬಂತು. ಆಗ ನನ್ನ ಗಂಡ ಕಾಲು, ಪಾದಗಳನ್ನೆಲ್ಲ ತೊಳೆಯುವುದೇ ಇಲ್ಲ ಎಂಬುದನ್ನು ಗಮನಿಸಿ ಆತ ಸ್ನಾನ ಮುಗಿಸಿ ಬಂದ ಮೇಲೆ ಕೇಳಿದೆ. ಆತ ತಾನು ಇಷ್ಟರವರೆಗೆ ಸ್ನಾನ ಮಾಡುವಾಗ ಕಾಲು ತೊಳೆದೇ ಇಲ್ಲವೆಂದು ಹೇಳಿದ್ದಾನೆ. ಆತನ ಪ್ರಕಾರ, ಸೋಪು ನೀರು ಮೇಲಿಂದ ಹರಿದು ಕಾಲುಗಳವರೆಗೆ ಹೋಗುವುದರಿಂದ ತಾನೇ ತಾನಾಗಿ ತೊಳೆದು ಹೋಗುವ ಕಾರಣ ಜೀವಮಾನದಲ್ಲಿ ಈವರೆಗೆ ಕಾಲುಗಳನು ತೊಳೆದಿಲ್ಲ ಎಂದಿದ್ದಾನೆ. ಈಗ ಹೇಳಿ ಗೆಳತಿಯರೇ? ನಿಮ್ಮ ಗಂಡಂದಿರೂ ಹೀಗೆಯೇ ಇದ್ದಾರೋ? ಇದು ಗಂಡಸರ ಸಾಮಾನ್ಯ ಕಾಯಿಲೆಯೋ ಅಥವಾ ಕೇವಲ ನನ್ನ ಗಂಡ ಮಾತ್ರವಷ್ಟೇ ಹೀಗೆ ಕಾಲು ತೊಳೆಯುತ್ತಿಲ್ಲವೋ? ನಿಮ್ಮ ಅನುಭವಗಳನ್ನು ಇಲ್ಲಿ ವಿವರಿಸಿ ಎಂದು ಗಂಭೀರವಾಗಿ ಕೇಳಿಕೊಂಡಿದ್ದಾಳೆ.
ಕಾಣಲು ಬಹಳ ಸಿಂಪಲ್ ಅನಿಸುವ, ಶುದ್ಧ ಮೂರ್ಖತನದಿಂದ ಕೂಡಿವೆ ಎನಿಸುವ ಇಂಥ ಪ್ರಶ್ನೆ ವಿದೇಶದ ಸಾಮಾಜಿಕ ಜಾಲತಾಣವೊದರಲ್ಲಿ ಭಾರೀ ಚರ್ಚೆಯನ್ನೇ ಹುಟ್ಟುಹಾಕಿದೆ. ಹಲವಾರು ಮಂದಿ ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದು, ಸಾಕಷ್ಟು ಪರ ವಿರೋಧದ ಚರ್ಚೆಗಳೂ ನಡೆದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಎಂಥ ಅಸಂಬದ್ಧ ಪ್ರಶ್ನೆಯ ಬಗೆಗೂ ರಸವತ್ತಾಗಿ ಚರ್ಚೆ ಮಾಡಬಲ್ಲದು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.
ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್ ಸ್ಕ್ರೀನ್ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಂದಿಯ ಪೈಕಿ ಒಬ್ಬರು, ಹೌದು, ಕಾಲುಗಳನ್ನು ಪ್ರತ್ಯೇಕ ತೊಳೆಯುವ ಅಗತ್ಯವಿಲ್ಲ. ಸ್ನಾನ ಮಾಡುವಾಗ, ಮೇಲಿಂದ ಹುಯ್ದುಕೊಂಡ ನೀರು ಕಾಲಿಗೆ ತಲುಪುವುದರಿಂದ ಅದು ತೊಳೆದು ಹೋಗುತ್ತದೆ. ಆದರೆ, ನಾನು ಕಾಲುಗಳನ್ನು ತೊಳೆಯುತ್ತೇನೆ. ಮುಖ್ಯವಾಗಿ ಪಾದ, ಬೆರಳ ಸಂದಿಯಲ್ಲಿರು ಕೊಳೆಯನ್ನೆಲ್ಲ ಉಜ್ಜಿ ಉಜ್ಜಿ ತೊಳೆದುಕೊಳ್ಳುತ್ತೇನೆ ಎಂದಿದ್ದಾರೆ. ಇವರ ಈ ಮಾತನ್ನು ಹಲವರು ಅನುಮೋದಿಸಿದ್ದು, ಕಾಲುಗಳನ್ನು, ಪಾದ, ಹಿಮ್ಮಡಿಗಳನ್ನು ಉಜ್ಜಿ ಉಜ್ಜಿ ತೊಳೆಯುವುದರಿಂದ ಒಣಗಿದ ಚರ್ಮದ ಪದರಗಳು ಬಿದ್ದು ಹೋಗಿ ಕಾಲುಗಳು ಪಳಪಳ ಹೊಳೆಯುತ್ತವೆ. ಹಾಗಾಗಿ ತೊಳೆಯಲೇ ಬೇಕು ಎಂದಿದ್ದಾರೆ.
ಇನ್ನೊಬ್ಬರು ಇದಕ್ಕೆ ಪ್ರತಿಕ್ರಿಯಿಸುತ್ತಾ, ಸ್ನಾನ ಮಾಡಿ ಬಂದ ಮೇಲೂ ವಾಸನೆ ಬರಬಾರದು ಅಷ್ಟೆ. ಎಲ್ಲೆಲ್ಲಿ ಹೇಗೆ ತೊಳೆಯುತ್ತಾರೆ, ಎಷ್ಟು ತೊಳೆಯುತ್ತಾರೆ ಎಂಬುದೆಲ್ಲ ಮುಖ್ಯವಾಗುವುದಿಲ್ಲ. ಅದು ತೀರಾ ಖಾಸಗಿ ವಿಚಾರ ಎಂದು ತಮಾಷೆಯಾಗಿ ಹೇಳಿದ್ದಾರೆ.
ಇನ್ನೂ ಕೆಲವರು, ನಾವಂತೂ ನಮ್ಮ ಜೀವಮಾನದಲ್ಲಿ ಒಮ್ಮೆಯೂ ಕಾಲು ತೊಳೆದುಕೊಂಡಿಲ್ಲ. ಶೇವ್ ಮಾಡಿಕೊಂಡರೆ, ಅದರ ನೊರೆಯೆಲ್ಲ ಹೋಗಿ, ತೊಳೆದಂತೆಯೇ ಆಗುತ್ತದಲ್ಲ. ಮತ್ತೆ ತೊಳೆಯುವ ಅವಶ್ಯಕತೆ ಏನಿದೆ ಎಂದಿದ್ದಾರೆ. ಹಲವರು ತಮಾಷೆಯಾಗಿ ಉತ್ತರಿಸಿದರೆ, ಇನ್ನೂ ಕೆಲವರು ಗಂಭೀರವಾಗಿಯೇ ಇದನ್ನು ತೆಗೆದುಕೊಂಡು ಉತ್ತರಿಸಿದ್ದಾರೆ. ಅಷ್ಟಕ್ಕೂ ಆ ಮಹಿಳೆ ಮಾತ್ರ ಗಂಭೀರವಾಗಿಯೇ ಈ ಪ್ರಶ್ನೆಯನ್ನು ಎತ್ತಿದ್ದಾರೆ.
ಒಟ್ಟಾರೆ ಈ ಒಂದು ಸರಳವಾದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಘನಗಂಭೀರ ಚರ್ಚೆಯನ್ನೇ ಹುಟ್ಟು ಹಾಕಿ, ಬಹಳಷ್ಟು ಮಂದಿಯ ಸ್ನಾನದ ಖಾಸಗಿ ಮಾತುಗಳು ತೊಳೆದುಹೋಗಿದ್ದು ಮಾತ್ರ ನಿಜ.
ಇದನ್ನೂ ಓದಿ | Kiss benefits | ಮುತ್ತು ಕೊಟ್ಟು ನೀವೂ ಆರೋಗ್ಯವಾಗಿರಿ! ನಿಮ್ಮವರನ್ನೂ ಆರೋಗ್ಯವಾಗಿರಿಸಿ!