ಸೈಕಲ್ಲೇ ಇರಲಿ, ಯಾವುದೇ ಯಂತ್ರವೇ ಇರಲಿ ಹೊಸತಾಗಿ ಖರೀದಿಸಿದಾಗ ದೇವಸ್ಥಾನದಲ್ಲೋ ಅಥವಾ ಅದಿರುವ ಜಾಗಕ್ಕೇ ಪೂಜಾರಿಯನ್ನು ಕರೆಸಿಯಾದರೂ ನಾವು ಪೂಜೆ ಮಾಡಿ ಆಮೇಲೆ ಅದನ್ನು ಬಳಕೆ ಮಾಡುವುದು ಭಾರತೀಯ ಪದ್ಧತಿ. ಸಾಧಾರಣವಾಗಿ ಕಾರೋ, ಸ್ಕೂಟರೋ, ಬೈಕೋ, ಜೀಪೋ ಯಾವುದೇ ಹೊಸ ವಾಹನ ತೆಗೆದುಕೊಂಡ ತಕ್ಷಣ ಸಂಸಾರ ಸಮೇತರಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ಮರಳುವುದು ತೀರಾ ಸಾಮಾನ್ಯ. ಆದರೆ, ಎಲ್ಲಾದರೂ ಹೆಲಿಕಾಪ್ಟರ್ ಖರೀದಿಸಿ ಸೀದಾ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿದ್ದನ್ನು ಎಲ್ಲಾದರೂ ನೋಡಿದ್ದೀರಾ?
ಇಲ್ಲ ಎಂದಾದಲ್ಲಿ ಇಲ್ಲಿ ನೋಡಿ. ತೆಲಂಗಾಣದ ಉದ್ಯಮಿ ಬೊಯಿಂಪಳ್ಳಿ ಶ್ರೀನಿವಾಸ ರಾವ್ ಎಂಬವರು ತಾನು ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಒಂದನ್ನು ಸೀದಾ ದೇವಸ್ಥಾನದ ಮುಂದೆ ಇಳಿಸಿ ಅರ್ಚಕರ ಬಳಿ ಪೂಜೆ ಮಾಡಿಸಿಕೊಂಡಿದ್ದಾರೆ. ಈ ವಾಹನಪೂಜೆಯ ವಿಡಿಯೋ ಸದ್ಯಕ್ಕೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮೂಲಸೌಕರ್ಯ ಸಂಸ್ಥೆ ಪ್ರತಿಮಾ ಗ್ರೂಪ್‌ನ ಒಡೆಯ ಬೊಯಿಂಪಳ್ಳಿ ಶ್ರೀನಿವಾಸ ರಾವ್ ಅವರು ಹೈದರಾಬಾದ್‌ನಿಂದ ಸುಮಾರು ೧೦೦ ಕಿಮೀ ದೂರದಲ್ಲಿರುವ ಯಾದಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ತನ್ನ ಹೊಸ ಏರ್‌ಬಸ್ ಎಸಿಎಚ್ ೧೩೫ನಲ್ಲಿ ಬಂದಿಳಿದು ವಾಹನ ಪೂಜೆ ಮಾಡಿಸಿಕೊಂಡಿದ್ದಾರೆ. ಅವರ ಜೊತೆಗೆ ಕುಟುಂಬಸ್ಥರೂ ಬಂದಿಳಿದು ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಈ ಹೆಲಿಕಾಪ್ಟರ್ ಬೆಲೆ ಸುಮಾರು ೫.೭ ಮಿಲಿಯನ್ ರೂಪಾಯಿಗಳೆಂದು ಹೇಳಲಾಗುತ್ತಿದ್ದು, ಮೂರು ಮಂದಿ ಅರ್ಚಕರು ಹೆಲಿಕಾಪ್ಟರ್‌ಗೆ ಪೂಜೆ ನಡೆಸಿದರು. ಹೆಲಿಕಾಪ್ಟರನ್ನು ಸೀದಾ ತಂದು ದೇವಸ್ಥಾನದ ಮುಂದೆ ತಂದಿಳಿಸಿ ವಾಹನ ಪೂಜೆ ನೆರವೇರಿಸುವ ದೃಶ್ಯ ಸಾಮಾನ್ಯದಲ್ಲವಾದ್ದರಿಂದ ಇದೀಗ ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಕಡಿಮೆ ಭಾರವಿರುವ, ಕಡಿಮೆ ಶಬ್ದ ಮಾಡುವ ಈ ಎಚ್‌೧೩೫ ಹೆಲಿಕಾಪ್ಟರ್ ಅತ್ಯಧಿಕ ಸಾಮರ್ಥ್ಯಕ್ಕೆ ಹೆಸರು ಮಾಡಿದೆ. ಇದರ ಕಾಳಜಿಗೂ ಕಡಿಮೆ ವೆಚ್ಚವೇ ಸಾಕಾಗುವುದರಿಂದ ಸದ್ಯ ಲಭ್ಯವಿರುವ ಹೆಲಿಕಾಪ್ಟರ್‌ಗಳ ಪೈಕಿ ಇದು ತನ್ನೆಲ್ಲ ಈ ವಿಶೇಷ ಗುಣಗಳಿಂದ ಈ ವಲಯದಲ್ಲಿ ಸ್ಪರ್ಧಾತ್ಮಕ ಬೆಲೆಯನ್ನೂ ಹೊಂದಿದೆ ಎನ್ನಲಾಗಿದೆ. ತುಂಬ ಬಿಸಿಲಿನಲ್ಲೂ ಅತ್ಯಂತ ಹೆಚ್ಚು ದೂರದವರೆಗೆ ಇದರಲ್ಲಿ ಪ್ರಯಾಣಿಸಬಹುದಾಗಿದ್ದು, ಇದು ತನ್ನ ಕ್ಷಮತೆಯ ವಿಷಯದಲ್ಲಿ ಟಾಪ್ ಪಟ್ಟಿಯಲ್ಲಿರುವ ಹೆಲಿಕಾಪ್ಟರ್ ಆಗಿದೆ.