Site icon Vistara News

Viral post | ಬೋರ್ಡಿಂಗ್‌ ಸ್ಕೂಲಿಗೆ ಸೇರಿಸಿದ್ದಕ್ಕೆ 40 ವರ್ಷಗಳ ಬಳಿಕ ಹೆತ್ತವರ ಮೇಲೆ ಹಲ್ಲೆ ಮಾಡಿದ ಮಗ!

viral post

ಇಲ್ಲೊಬ್ಬ ಬ್ರಿಟನ್‌ ನಿವಾಸಿ ತನ್ನ ಹೆತ್ತವರ ಮೇಲೆ ಸಿಟ್ಟಾಗಿದ್ದಾನೆ. ಅದೂ ೫೧ನೇ ವಯಸ್ಸಿನಲ್ಲಿ! ಈತನ ಸಿಟ್ಟಿಗೆ ಕಾರಣವೇನು ಅಂತೀರಾ? ತನ್ನನ್ನು ೧೧ ವರ್ಷದವನಾಗಿದ್ದಾಗ ಬೋರ್ಡಿಂಗ್‌ ಸ್ಕೂಲಿಗೆ ಹಾಕಿದ್ದಕ್ಕೆ ೪೦ ವರ್ಷಗಳ ಬಳಿಕ ಈತನಿಗೆ ಯದ್ವಾತದ್ವಾ ತನ್ನ ಹೆತ್ತವರ ಮೇಲೆ ಕೋಪ ಬಂದಿದೆ. ಅದಕ್ಕಾಗಿ ಈ ವಯಸ್ಸಿನಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆಯನ್ನೂ ನಡೆಸಿದ್ದಾನೆ!

ಹೆತ್ತವರ ಮೇಲೆ ಮಕ್ಕಳು ಸಿಟ್ಟಾಗುವುದು ಸಹಜ. ಆದರೆ, ಬಹುತೇಕ ಸಿಟ್ಟುಗಳು ಕ್ಷಣಿಕ ಮಾತ್ರದ್ದು. ಬಂದಷ್ಟೇ ವೇಗದಲ್ಲಿ ಮಾಯವಾಗಿ ಮತ್ತೆ ಪ್ರೀತಿಯ ಬಂಧ ಹಾಗೆಯೇ ಇರುತ್ತದೆ. ಹೆತ್ತವರಿಗೂ ಮಕ್ಕಳ ಮೇಲೆ ಕೋಪ ಬಂದರೂ ಅದು ಕ್ಷಣ ಮಾತ್ರದಲ್ಲಿ ಇಲ್ಲವಾಗುತ್ತದೆ. ಎಲ್ಲೋ ಅಪರೂಪದ ಇಂತಹ ಪ್ರಕರಣಗಳು ಮಾತ್ರ ಸುದ್ದಿಯಾಗುತ್ತವೆ. ಇಂಗ್ಲೆಂಡ್‌ನ ಎಡ್‌ ಲಿನ್ಸ್‌ ಎಂಬವರಿಗೆ ಮಾತ್ರ ತನ್ನ ಹೆತ್ತವರ ಮೇಲೆ ಸಿಕ್ಕಾಪಟ್ಟೆ ಸಿಟ್ಟು. ಆ ಸಿಟ್ಟು ಸೇಡಿನ ರೂಪವಾಗಿಯೂ ಬದಲಾಗಿದೆ!

ಲಿನ್ಸ್‌ ಒಬ್ಬ ಯಶಸ್ಸು ಕಾಣದ ಬ್ಯುಸಿನೆಸ್‌ಮೆನ್.‌ ಈತ ತನ್ನ ಈ ಸೇಡಿನಿಂದ ತಂದೆಯ ಮೇಲೆಯೇ ಕೊಲೆ ಪ್ರಯತ್ನ ನಡೆಸಿದ್ದಾನೆ. ಮಧ್ಯರಾತ್ರಿ ಮನೆಗೆ ನುಗ್ಗಿ, ತಂದೆಯ ಬೆಡ್‌ರೂಮಿಗೆ ಹೋಗಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ೮೫ ವರ್ಷದ ತಂದೆಯ ಕಿವಿ, ತಲೆ ಹಾಗೂ ಕೈಗಳ ಮೇಲೆ ತೀವ್ರ ಸ್ವರೂಪದ ಗಾಯಗಳನ್ನು ಮಾಡಿದ್ದಾನೆ. ಇದರ ಕಾರಣದಿಂದ ಆಸ್ಪತ್ರೆಗೆ ದಾಖಲಾದ ತಂದೆ ಐದು ವಾರಗಳ ಕಾಲ ಚಿಕಿತ್ಸೆ ಪಡೆದು ಈಗ ಗುಣಮುಖರಾಗಿ ಹಿಂತಿರುಗಿದ್ದಾರೆ. ಇದರ ಜೊತೆಗೆ ೮೨ ವರ್ಷದ ತನ್ನ ತಾಯಿಯ ಮೇಲೂ ಹಲ್ಲೆ ನಡೆಸಿ ತಲೆಯ ಮೇಲೆ ದೊಡ್ಡದೊಂದು ಬಾಸುಂಡೆ ಬರುವಂತೆ, ಬೆನ್ನಿನ ಮೇಲೆ ದದ್ದುಗಳು ಬರುವಂತೆ ಹೊಡೆದಿದ್ದಾನೆ.

ಇದನ್ನೂ ಓದಿ | Viral post | ಇಂಗ್ಲೆಂಡಿನ ಈ ವಿಶೇಷ ಅನನಾಸಿನ ಬೆಲೆ ಒಂದು ಲಕ್ಷ ರೂಪಾಯಿಗಳು!

ಇಬ್ಬರು ಮಕ್ಕಳ ತಂದೆಯಾದ ಲಿನ್ಸ್‌, ತನ್ನ ಈ ಕೋಪಕ್ಕೆ ಕಾರಣವನ್ನೂ ವಿವರಿಸಿದ್ದಾನಂತೆ. ೧೯೮೦ರ ಆಸುಪಾಸಿನಲ್ಲಿ ತನ್ನನ್ನು ಬಾಲಕರ ಬೋರ್ಡಿಂಗ್‌ ಶಾಲೆಗೆ ದಾಖಲಿಸಿದ್ದೇ ಇಂದು ತನ್ನೆಲ್ಲಾ ಸೋಲಿಗೆ ಕಾರಣವಾಗಿದೆ ಎಂಬುದು ಆತ ನೀಡಿದ ಕಾರಣ. ಇದರಿಂದಾಗಿಯೇ ತನಗೆ ಜೀವನದಲ್ಲಿ ಸೋಲುಂಟಾಗಿದೆ ಎಂಬುದು ಆತನ ಕೋಪಕ್ಕೆ ಕಾರಣ.

ಲಿನ್ಸ್‌ನ ತಾಯಿ ಹೇಳುವಂತೆ, ತನ್ನ ಮಗನಿಗೆ ಅಂದಿನಿಂದ ಇಂದಿನವರೆಗೆ ತನ್ನ ಬೋರ್ಡಿಂಗ್‌ ಸ್ಕೂಲಿನ ಕಹಿನೆನಪು ಎಷ್ಟಿದೆಯೆಂದರೆ ಆತ ನಮ್ಮನ್ನು ಎಂದಿಗೂ ಕ್ಷಮಿಸಲಾರ. ಇದರಿಂದಾಗಿ ಮಗನ ಜೊತೆಗಿನ ಸಂಬಂಧವೇ ಹಾಳಾಗಿದೆ. ಆತನ ಹಣಕಾಸಿನ ಸಮಸ್ಯೆಯೂ ಮಿತಿಮೀರಿದ್ದು, ಆತನಿಗೆ ಜೀವನ ಪರ್ಯಂತ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಆದರೂ ಆತನ ಕೋಪ ಇಂದಿಗೂ ಇಳಿದಿಲ್ಲʼ ಎಂದಾಕೆ ಹೇಳಿಕೊಂಡಿದ್ದಾರೆ.

ತನ್ನೆಲ್ಲಾ ಸೋಲುಗಳಿಗೆ ಕಾರಣವಾದ ಹೆತ್ತವರೇ ತನಗೆ ಜೀವನಾಂಶ ನೀಡಬೇಕು ಹಾಗೂ ತನ್ನನ್ನು ಕಷ್ಟದಿಂದ ಪಾರು ಮಾಡಬೇಕು ಎಂಬುದು ಆತನ ವಾದವಾಗಿದೆ. ತನ್ನ ಜೀವನದ ಅತ್ಯಂತ ಕೆಟ್ಟ ಹಾಗೂ ದುರಂತಮಯ ಹದಿಹರೆಯದ ದಿನಗಳಿಗೆ ನನ್ನ ಹೆತ್ತವರೇ ಕಾರಣ ಎಂಬುದೇ ಈತನ ಬಲವಾದ ದೂರಾಗಿತ್ತು.

ತನ್ನ ಹೆತ್ತವರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದ ಪರಿಣಾಮ ಈತನ ವಿರುದ್ಧ ಕೊಲೆಯತ್ನದ ಆರೋಪದಡಿ ವಿಚಾರಣೆ ನಡೆಸಲಾಗಿತ್ತು. ಆದರೆ, ಆರೋಪಿಯನ್ನು ತಪ್ಪು ಒಪ್ಪಿಕೊಂಡ ಕಾರಣ ಪ್ರಕರಣವನ್ನು ರಾಜಿ ಮಾಡಿಕೊಳ್ಳಲಾಗಿದೆ. 

ಇದನ್ನೂ ಓದಿ | Viral post | ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕೆಂದರೆ ಐಐಟಿ, ಐಐಎಂನಲ್ಲಿ ಓದಿರಬೇಕಾ?!

Exit mobile version