ಸಾಮಾಜಿಕ ಜಾಲತಾಣಗಳು ಬಂದ ಮೇಲೆ, ಇನ್‌ಫ್ಲುಯೆಂಜರ್‌ಗಳ ಜೀವನದ ಬಗೆಗೆ ಸಾಕಷ್ಟು ಚರ್ಚೆಗಳಾಗಿವೆ. ಇನ್ಸ್‌ಟಾಗ್ರಾಂನಂತಹ ಜಾಲತಾಣದಲ್ಲಿ ಇನ್ಫ್ಲುಯೆಂಜರ್‌ಗಳು ಎಷ್ಟು ದುಡ್ಡು ಸಂಪಾದಿಸಬಹುದು ಎಂಬ ಬಗ್ಗೆ ಸದಾ ಎಲ್ಲರಿಗೂ ಕುತೂಹಲ. ʻಇದರಲ್ಲಿ ಸಾಕಷ್ಟು ದುಡ್ಡು ಮಾಡಬಹುದು, ಕೋಟಿಗಟ್ಟಲೆ ದುಡ್ಡು ಸಂಪಾದಿಸಬಹುದುʼ ಎಂಬ ನಂಬಿಕೆಯೇ ಲಕ್ಷಾಂತರ ಯುವಮಂದಿಯನ್ನು ಇದು ತನ್ನತ್ತ ಸೆಳೆದಿದೆ. ಅಷ್ಟೇ ಅಲ್ಲ, ಈ ಮೂಲಕ ಹಣವನ್ನೂ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ ಕೂಡಾ.
ಆದರೆ, ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿರುವುದು ಗೊತ್ತೇ? ನಾಯಿ ಸಾಕುವುದಕ್ಕೇ ಸಾಕಷ್ಟು ದುಡ್ಡು ಬೇಕು, ಆದರೆ, ನಾಯಿ ಹೇಗೆ ಸಂಪಾದಿಸೀತು ಎನ್ನುತ್ತೀರಾ? ಹಾಗಾದರೆ ಇಲ್ಲಿ ಕೇಳಿ. ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸೆಲೆಬ್ರಿಟಿ. ಇದು ವರ್ಷಕ್ಕೆ ಒಂದು ಮಿಲಿಯನ್ ಡಾಲರ್‌ಗೂ ಅಧಿಕ ಹಣ ಸಂಪಾದಿಸುತ್ತಿದೆಯಂತೆ. ಅಂದರೆ ವರ್ಷಕ್ಕೆ ಸುಮಾರು ಎಂಟುಕಾಲು ಕೋಟಿಗಳಷ್ಟು ಹಣ ವರ್ಷಕ್ಕೆ ಸಂಪಾದನೆ ಮಾಡುತ್ತಿದೆ.
ಪ್ರಿಂಟೆಡ್ ಪೆಟ್ ಮೆಮೊರೀಸ್ ಎಂಬ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಟಕ್ಕರ್ ಬುಡ್‌ಜಿನ್ ಹೆಸರಿನ ಗೋಲ್ಡನ್ ರಿಟ್ರೀವರ್ ನಾಯಿ ವಿಶ್ವದ ಸಾಮಾಜಿಕ ಜಾಲತಾಣದಲ್ಲಿ ನಂಬರ್ ವನ್ ಸ್ಥಾನದಲ್ಲಿದೆಯಂತೆ. ಇದು ಸಾಕಷ್ಟು ಜಾಹಿರಾತುಗಳನ್ನೂ ನೀಡುವ ಮೂಲಕ ವರ್ಷಕ್ಕೆ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದೆಯಂತೆ. ಇನ್ಸ್‌ಟಾಗ್ರಾಂನಲ್ಲಿ ಮೂರರಿಂದ ಎಂಟು ಪೋಸ್ಟ್‌ಗಳಿಗೆ 20,000 ಡಾಲರ್ ಹಣವನ್ನು ಸಂಪಾದಿಸುತ್ತದೆಯಂತೆ. ೩೦ ನಿಮಿಷಗಳ ಯುಟ್ಯೂಬ್ ವಿಡಿಯೋಗೆ 40,000ದಿಂದ 60,000 ಡಾಲರ್ ಹಣ ಸಂಪಾದಿಸುತ್ತಿದೆಯಂತೆ.
ಟಕ್ಕರ್‌ನ ಯಜಮಾನಿ ಕೋರ್ಟ್ನಿ ಬುಡ್ಝಿನ್ ಹೇಳುವ ಪ್ರಕಾರ, 2018ರಲ್ಲಿ ಎಂಟು ವಾರಗಳಷ್ಟು ಪುಟಾಣಿಯಾಗಿದ್ದ ಈ ನಾಯಿಯನ್ನು ಮನೆಗೆ ತಂದ ಮೇಲೆ ಅವರು ಮತ್ತೆ ಹಿಂತಿರುಗಿ ನೋಡಿಲ್ಲವಂತೆ. ಮೊದಲ ವಿಡಿಯೋ ವೈರಲ್ ಆದ ಮೇಲೆ ಈ ನಾಯಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿ ಬಿಟ್ಟಿತು. ನಾಯಿಯ ಜನಪ್ರಿಯತೆ ಎಷ್ಟಾಯಿತು ಎಂದರೆ, ಇದರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಹಾಗೂ ನಾಯಿಯನ್ನು ನೋಡಿಕೊಳ್ಳಲೆಂದೇ ಬುಡಜಿನ್ ಅವರ ಗಂಡ ಮೈಕ್ ತನ್ನ ವೃತ್ತಿಯನ್ನು ತೊರೆದು ಪೂರ್ಣಾವಧಿ ಕಾಲ ನಾಯಿಯ ಜೊತೆಗೇ ಸಮಯ ಕಳೆಯುತ್ತಿದ್ದಾರಂತೆ.
ಕೇವಲ ಆರು ತಿಂಗಳಾದಾಗ ಈ ಟಕ್ಕರ್‌ಗೆ 60 ಸಾವಿರ ಫಾಲೋವರ್‌ಗಳಾದರಂತೆ. ನಂತರ ದಿನೇ ದಿನೇ ಫಾಲೋವರ್‌ಗಳ ಸಂಖ್ಯೆ ಏರುತ್ತಾ ಸಾಗಿದ್ದು ಸದ್ಯ 25 ಮಿಲಿಯನ್‌ಗೂ ಹೆಚ್ಚು ಫಾಲೋವರ್‌ಗಳು ಇದ್ದಾರೆ. ಟಿಕ್‌ಟಾಕ್, ಯುಟ್ಯೂಬ್, ಫೇಸ್‌ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣದಲ್ಲೂ ಮಿಲಿಯಗಟ್ಟಲೆಫಾಲೋವರ್‌ಗಳನ್ನು ಸಂಪಾದಿಸಿ ನಂಬರ್ 1 ಪೆಟ್ ಸೆಲೆಬ್ರಿಟಿಯಾಗಿ ಟಕ್ಕರ್ ಮಿಂಚುತ್ತಿದ್ದಾನೆ.
ಒಟ್ಟಾರೆ ಈಗ ನಾಯಿಯೇ ಸದ್ಯಕ್ಕೆ ಈ ಮನೆಯ ಯಜಮಾನ. ನಾಯಿಯೇ ಈ ಮನೆಮಂದಿಯ ಹೊಟ್ಟೆ ಹೊರೆತ್ತಿದೆ ಎಂದರೂ ತಪ್ಪಲ್ಲ. ಯಾರಿಗುಂಟು ಯಾರಿಗಿಲ್ಲ!
ಇದನ್ನೂ ಓದಿ: Viral Post: ಹವ್ಯಾಸವೇ ವೃತ್ತಿ: ಕೆಲಸಕ್ಕೆ ಗುಡ್‌ಬೈ ಹೇಳಿ ತಿರುಗಾಟವೇ ಕೆಲಸ!