Site icon Vistara News

Viral post | ಇಂಗ್ಲೆಂಡಿನ ಈ ವಿಶೇಷ ಅನನಾಸಿನ ಬೆಲೆ ಒಂದು ಲಕ್ಷ ರೂಪಾಯಿಗಳು!

costly pineapple

ಒಂದು ಅನನಾಸಿಗೆ ಅಬ್ಬಬ್ಬಾ ಎಂದರೆ ಎಷ್ಟು ಬೆಲೆಯಿದ್ದೀತು ಹೇಳಿ? ನೂರು, ಹೆಚ್ಚೆಂದರೆ ಇನ್ನೂರು. ಅದಕ್ಕಿಂತ ಹೆಚ್ಚು ಬೆಲೆ ಇದ್ದರೂ ಯಾರು ತೆಗೆದುಕೊಳ್ಳುತ್ತಾರೆ ಹೇಳಿ! ಕೆಲವೊಮ್ಮೆ ಕೆಲವು ಜಾತಿಯ ಹಣ್ಣುಗಳು ದುಬಾರಿ ಎನಿಸಿದರೂ, ಬಹಳಷ್ಟು ಹಣ್ಣುಗಳು ನಿತ್ಯ ತಿನ್ನಲು ಜನಸಾಮಾನ್ಯನ ಕೈಗೆಟಕುವಂತೆಯೇ ಇರುತ್ತವೆ. ಆದರೆ ಇಂಗ್ಲೆಂಡಿನಲ್ಲೊಂದು ಅನನಾಸಿದೆ. ಅದರ ಬೆಲೆ ಒಂದು ಹಣ್ಣಿಗೆ ಒಂದು ಲಕ್ಷ ರೂಪಾಯಿಯಂತೆ!

ಹೌದು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಹೆಲಿಗನ್‌ ಅನನಾಸು ಎಂಬ ಹೆಸರಿನ ಈ ವಿಶೇಷ ಅನನಾಸಿಗೆ ಇಂಗ್ಲೆಂಡಿನಲ್ಲಿ ಸುಮಾರು ಒಂದು ಸಾವಿರ ಪೌಂಡ್‌ ಅಂದರೆ ಸುಮಾರು ಒಂದು ಲಕ್ಷ ರೂಪಾಯಿಗಳು! ಬಿಬಿಸಿ ವರದಿಯೊಂದರ ಪ್ರಕಾರ, ಹೆಲಿಗನ್‌ ಅನನಾಸು ಬೆಳೆಯಲು ಎರಡರಿಂದ ಮೂರು ವರ್ಷಗಳು ಬೇಕಾಗಿರುವುದರಿಂದ ಈ ಅನನಾಸು ಭಾರೀ ದುಬಾರಿಯಂತೆ!

ಅನನಾಸು ವಿಟಮಿನ್‌ ಸಿಯ ಮೂಲ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ ಖನಿಜಾಂಶಗಳೂ, ಮ್ಯಾಂಗನೀಸ್‌, ಪೊಟಾಶಿಯಂಗಳೂ ಹೇರಳವಾಗಿವೆ. ಹಣ್ಣುಗಳೆಲ್ಲವೂ ಉತ್ತಮ ಆರೋಗ್ಯಕ್ಕೆ ಅಗತ್ಯ ಬೇಕಾಇರುವ ಆಹಾರದ ಮೂಲವಾದರೂ ಅನನಾಸು ಹೇರಳವಾಗಿ ವಿಟಮಿನ್‌ ಸಿಯನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡು, ಮುಖ್ಯವಾಗಿ ಚಳಿಗಾಲದಲ್ಲಿ ಪ್ರತಿಯೊಬ್ಬರೂ ತಿನ್ನಲೇಬೇಕಾಗಿರುವ ಹಣ್ಣು. ಪ್ರತಿ ಹಣ್ಣಿನಲ್ಲೂ ವಿವಿಧ ಜಾತಿಯ, ಬಗೆಯ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಅದರ ಜಾತಿ, ಲಭ್ಯತೆಗೆ ಅನುಸಾರವಾಗಿ ಬೆಲೆಯಲ್ಲೂ ವ್ಯತ್ಯಾಸವಿರುತ್ತದೆ. ಅನನಾಸು ಕೂಡಾ ಹಲವು ಬಗೆಯವು ಇವೆ. ಕೆಲವು ಸಿಹಿಯಾಗಿ ಅನಿಸಿದರೆ, ಇನ್ನೂ ಕೆಲವು ಹುಳಿಯಾಗಿಯೇ ಇರುತ್ತವೆ. ಆದರೆ ಹೆಲಿಗನ್‌ ಅನನಾಸು  ಮಾತ್ರ ತನ್ನದೇ ವಿಶೇಷ ಗುಣಗಳ ಕಾರಣದಿಂದ ವಿಶೇಷವಾಗಿಯೇ ಇಂದಿಗೂ ಉಳಿದಿದೆ.

ಈ ಅನನಾಸಿನ ಇತಿಹಾಸವೇ ಆಸಕ್ತಿಕರವಾದದ್ದು. ಇದರ ವೆಬ್‌ಸೈಟ್‌ನಲ್ಲಿ ಹೆಲಿಗನ್‌ ಬಗೆಗೆ ವಿಸ್ತೃತವಾದ ವಿವರಗಳಿವೆ. ಅದರ ಪ್ರಕಾರ, ಈ ಅನನಾಸು ಬ್ರಿಟನ್‌ಗೆ ೧೮೧೯ರಲ್ಲಿ ತರಲಾಯಿತಂತೆ. ಇದಾದ ನಂತರ, ಕೃಷಿ ಇಲಾಖೆಗೆ, ಈ ಅನನಾಸು ಬೆಳೆಯಲು ಬ್ರಿಟನ್‌ನಲ್ಲಿ ಸೂಕ್ತ ಹವಾಮಾನವಿಲ್ಲ ಎಂದು ಮನದಟ್ಟಾಯಿತಂತೆ. ಇದಕ್ಕಾಗಿ ಈ ಹಣ್ಣನ್ನು ಬೆಳೆಸಲೆಂದೇ ವಿಶೇಷವಾಗಿ ಒಂದು ಮರದ ಮಡಕೆಯಂತಹ ರಚನೆಯನ್ನು ಮಾಡಿ ಅದರ ಮೂಲಕ ಬೆಳೆಸಲು ಆರಂಭಿಸಿದರಂತೆ. ಇದಕ್ಕೆಂದೇ ವಿಶೇಷವಾಗಿ ತಾಜಾ ನೈಸರ್ಗಿಕ ಗೊಬ್ಬರವನ್ನೂ ಮಾಡಲಾಯಿತಂತೆ. ಹೀಟರ್‌ ಸಹಾಯದಿಂದ ಇದಕ್ಕೆ ಬೇಕಾದ ಹವಾಮಾನವನ್ನೂ ಮಾಡಲಾಯಿತಂತೆ. ಇದರ ಉಷ್ಣತೆಯನ್ನು ಆ ಮಡಕೆಯೊಳಗೆ ಪ್ರವಹಿಸುವಂತೆ ಮಾಡಿ ಬೆಳೆಸಲು ಆರಂಭಿಸಿದರಂತೆ. ಹಾಗಾಗಿ, ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿ ವಿಶೇಷ ಕಾಳಜಿಯಿಂದ ಇದನ್ನು ಬೆಳೆಸುತ್ತಿರುವುದರಿಂದ ಇದು ಇಷ್ಟು ದುಬಾರಿ ಎಂದು ಬಿಬಿಸಿ ವರದಿ ಮಾಡಿದೆ.

ಆದರೆ ಈಗ ಇದನ್ನು ಬೆಳೆಸುವ ಬಗೆ ಬದಲಾಗಿದೆ. ಸರಿಯಾದ ವಿಕ್ಟೋರಿಯನ್‌ ಟೆಕ್ನಿಕ್‌ ಅನ್ನು ಕಲಿತುಕೊಂಡು ಆ ಮಾದರಿಯಲ್ಲಿ ಬೆಳೆಸಲಾಗುತ್ತಿದೆಯಂತೆ. ಅಂದಹಾಗೆ, ಈ ವೆಬ್‌ಸೈಟ್‌ ಹೇಳುವಂತೆ, ಎರಡನೇ ಎಲಿಜಬೆತ್‌ ರಾಣಿಗೆ ವಿಕ್ಟೋರಿಯನ್‌ ಗ್ರೀನ್‌ ಹೌಸ್‌ನಲ್ಲಿ ಬೆಳೆದ ಎರಡನೇ ಅನನಾಸನ್ನು ಉಡುಗೊರೆಯಾಗಿ ನೀಡಲಾಗಿತ್ತಂತೆ. ಹಾಗಾಗಿಯೇ ಇದಕ್ಕೆ ಇಂದಿಗೂ ರಾಜ ಮರ್ಯಾದೆ. ಕ್ಯೂ ಗಾರ್ಡನ್‌ನಿಂದ ಹೆಲಿಗನ್‌ಗೆ ಉಡುಗಗೊರೆಯಾಗಿ ಬಂದ ಎರಡು ಬಗೆಯ ಸಸ್ಯಗಳ ಕಸಿ ಮಾಡುವ ಮೂಲಕ ಮಾಡಿದ ಈ ಅನನಾಸಿನ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ ಎನ್ನಲಾಗಿದೆ.

ಅಪರೂಪಕ್ಕಷ್ಟೇ ಕಾಯಿ ಬಿಟ್ಟು ಹಣ್ಣಾಗುವ ಈ ವಿಶೇಷ ಅನನಾಸನ್ನು ಹರಾಜಿಗೆ ಹಾಕಿದರೆ, ಒಂದೊಂದು ಅನನನಾಸೂ ಕೂಡಾ ೧೦ ಲಕ್ಷ ರೂಪಾಯಿಗಳಿಗೆ ಮಾರಾಟವಾಗಲಿದೆಯಂತೆ!

Exit mobile version