Site icon Vistara News

Viral Post: ಕಲ್ಲು ತಿನ್ನುವ ಸಮಯ: ಚೀನಾದ ಈ ಕಲ್ಲಿನಡುಗೆ ವಿಶ್ವದ ಅತ್ಯಂತ ಕಠಿಣ ಅಡುಗೆ!

chinese stone dish

ಯೌವನದಲ್ಲಿ ಕಲ್ಲು ತಿಂದರೂ ಕರಗುತ್ತದೆ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಚೆನ್ನಾಗಿ ತಿಂದುಣ್ಣುವ ಕಾಲದಲ್ಲಿ ಯಾಕೆ ಹೀಗೆ ಡಯಟ್‌ ಮಾಡುತ್ತೀರಿ ಎಂದು ಅಮ್ಮಂದಿರು ಮಕ್ಕಳು ಮನೆಗೆ ಬಂದಾಗ ತಿನ್ನಿ ತಿನ್ನಿ ಎಂದು ಬಡಿಸುವಾಗ ಹೇಳುವ ಸಾಮಾನ್ಯ ಮಾತಿದು. ಆದರೆ ನಿಜಕ್ಕೂ ಕಲ್ಲು ತಿಂದು ಕರಗಿಸಲು ನಿಮಗೆ ಗೊತ್ತೇ? ಇಲ್ಲ ಎಂದಾದಲ್ಲಿ ಒಮ್ಮೆ ಈ ಹೊಸ ತಿನಿಸು ತಿಂದು ನೋಡಿ. ಇದು ಅಕ್ಷರಶಃ ಕಲ್ಲಿನ ಅಡುಗೆ. ಕಲ್ಲಿನ ಮೇಲೆ ಮಾಡಿದ್ದಲ್ಲ, ಕಲ್ಲೇ ಇಲ್ಲಿ ತಿನಿಸಾಗಿದೆ ಎಂದರೆ ನೀವು ನಂಬಲೇಬೇಕು. ವಿಶ್ವದ ಅತ್ಯಂತ ಕಠಿಣ ತಿನಿಸಂತೆ ಇದು! (Chinese stone dish) ಹೌದು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಚಿತ್ರವಿಚಿತ್ರ ಆಹಾರಗಳ ಪ್ರಯೋಗಗಳ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿರುವ ಚೀನಾದ ಮಂದಿ ಕೇವಲ ಹುಳುಹುಪ್ಪಟೆ ಹಾವನ್ನು ಅಡುಗೆಗೆ ಹಾಕಿಲ್ಲ. ಅವರು ಯಕಶ್ಚಿತ್‌ ಒಂದು ಕಲ್ಲನ್ನೂ ಬಿಟ್ಟಿಲ್ಲ. ಅದನ್ನೂ ಅಡುಗೆ ಮಾಡಿ ಹೊಸ ತಿನಿಸನ್ನು ರೆಡಿ ಮಾಡಿದ್ದಾರೆ. ಈ ತಿನಿಸಿನ ಹೆಸರು ಸ್ವಜಿವ್ (Suodiu).

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲೀಗ ಸಾಕಷ್ಟು ಸುದ್ದಿ ಮಾಡುತ್ತಿರುವ ಈ ತಿನಿಸು ಒಂದು ಸ್ಟರ್‌ ಫ್ರೈ. ಚೆಂದನೆಯ ನುಣುಪಾದ ಒಂದು ಬಗೆಯ ಕಲ್ಲುಗಳನ್ನೇ ಆರಿಸಿ ಬಗೆಬಗೆಯ ಮಸಾಲೆಗಳನ್ನು ಇದಕ್ಕೆ ಹಾಕಿ ಫ್ರೈ ಮಾಡಲಾಗುತ್ತದೆಯಂತೆ. ಚೆನ್ನಾಗಿ ಫ್ರೈ ಮಾಡಿದಾಗ ಈ ಕಲ್ಲಿನ ಘಮವೂ ಈ ಅಡುಗೆಯಲ್ಲಿ ಸೇರಿಕೊಂಡು ಒಂದು ವಿಶೇಷ ಸ್ವಾದವನ್ನು ಇದು ಕೊಡುತ್ತದೆಯಂತೆ.

ನದಿಯಲ್ಲಿ ಸಿಗುವ ನುಣುಪಾದ ಕಲ್ಲುಗಳನ್ನು ಆಯ್ಕೆ ಮಾಡಿ ಈ ವಿಚಿತ್ರವಾದ ತಿನಿಸನ್ನು ಮಾಡಲು ಬಳಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹೇಗೆ ಮಾಡುವುದು ಎಂಬ ವಿಡಿಯೋಗಳನ್ನೂ (viral post) ಪೋಸ್ಟ್‌ ಮಾಡಲಾಗುತ್ತಿದ್ದು, ಜಗತ್ತಿನಾದ್ಯಂತ ಜನರು, ಇಂಥದ್ದೊಂದು ತಿನಿಸೂ ಲೋಕದಲ್ಲಿದೆಯಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ವಿಶ್ವದ ಅತ್ಯಂತ ಕಠಿಣ ತಿನಿಸು ಎಂಬ ಹೆಸರನ್ನೂ ಇದಕ್ಕೆ ಕೊಡಲಾಗಿದೆ.

ಹಾಗಂತ ಇಲ್ಲಿ ಅಡುಗೆಯೇನೋ ಮಾಡಿಯಾಗಿದೆ, ಆದರೆ ಈ ಕಲ್ಲನ್ನು ಅಗಿಯುವುದು ಹೇಗೆ ಎಂಬ ಗೊಂದಲ ನಿಮಗಿದ್ದರೆ ಇಲ್ಲಿ ಕೇಳಿ. ಇಲ್ಲಿ ಕಲ್ಲನ್ನು ತಿಂದು ಕರಗಿಸಬೇಕಿಲ್ಲ. ಕಲ್ಲಿನ ಸಮೇತ ಬಾಯಿಗೆ ಹಾಕಿ, ಸ್ವಾದವನ್ನು ಚಪ್ಪರಿಸಿ ಆಮೇಲೆ ಕಲ್ಲನ್ನು ಉಗುಳಿದರೆ ಆಯಿತು. ಸ್ವಾದ ನಿಮ್ಮ ನಾಲಿಗೆಗೆ ಹರಿದು, ಹೊಟ್ಟೆ ಸೇರುತ್ತದೆ, ಕಲ್ಲು ಹೊರಗೆ ಬೀಳುತ್ತದೆ. ಸ್ವಜಿವ್‌ ಎಂಬ ಪದದ ಅರ್ಥವೇ ಚೀನೀ ಭಾಷೆಯಲ್ಲಿ ʻತಿನ್ನು ಮತ್ತು ಉಗುಳುʼ ಎಂದಂತೆ.

ಹಾಗಂತ ಇದು ಈಗಿನ ಹೊಸ ಅಡುಗೆಯಲ್ಲ. ನೂರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ಚೀನಾದ ಪ್ರಾಚೀನ ಅಡುಗೆಯಂತೆ. ಇದಕ್ಕೆ ಬಳಸುವ ಕಲ್ಲಿನ ಆಯ್ಕೆಯೂ ಒಂದು ಕಲೆಯಂತೆ. ನದಿಯ ನುಣುಪಾದ ಕಲ್ಲು ಹಾಗೂ ಜ್ವಾಲಾಮುಖಿಯಿಂದಾದ ಕಲ್ಲುಗಳು ಈ ಅಡುಗೆಗೆ ಅತ್ಯಂತ ಸೂಕ್ತವಂತೆ.

ಹಾಗಾದರೆ, ಇಲ್ಲಿ ಕಲ್ಲು ತಿಂದದ್ದರ ಫಲವೇನು ಎನ್ನುತ್ತೀರಾ? ಕಲ್ಲಿಗೂ ಒಂದು ರುಚಿಯಿದೆ ಎಂಬುದಷ್ಟೇ ಈ ಚೀನೀಯರ ವಾದ. ಕಲ್ಲಿನ ರುಚಿಯನ್ನು ಕಂಡು ಹಿಡಿಯಲು ಸ್ವಜಿವ್‌ ಅನ್ನೊಮ್ಮೆ ತಿಂದು ನೋಡಬಹುದು. ಈಗ ಚೀನಾದ ಬೀದಿ ಬೀದಿಗಳಲ್ಲಿ ಈ ಆಹಾರ ಸಿಗುತ್ತದೆಯಂತೆ. ಕಾಸೂ ಹೆಚ್ಚಿಲ್ಲ. ಕೇವಲ ಎರಡುವರೆ ಡಾಲರ್‌ ಅಂದರೆ ಸುಮಾರು ೧೮೮ ರೂಪಾಯಿಗಳಿಗೆ ಈ ಕಲ್ಲಿನಡುಗೆಯ ರುಚಿ ನೋಡಬಹುದು. ಆದರೆ ರುಚಿ ನೋಡಿ ಉಗುಳುವ ಬದಲಾಗಿ ಕಲ್ಲನ್ನು ಕರಗಿಸಿಯೇವೆಂಬ ಭರದಲ್ಲಿ ಹೊಟ್ಟೆ ಸೇರಿದರೆ ಮಾತ್ರ ಆಸ್ಪತ್ರೆ ವಾಸ ಎಂಬುದು ನೆನಪಿರಲಿ!

ಇದನ್ನೂ ಓದಿ: Viral News : ತಮ್ಮ ಜೀಪ್​​ಗೆ ಫೈನ್ ಹಾಕಿದ ಪೊಲೀಸ್ ಠಾಣೆಯ ಕರೆಂಟ್​ ಕಟ್​ ಮಾಡಿದ ವಿದ್ಯುತ್​ ಮಂಡಳಿ​!

Exit mobile version