ಕೋವಿಡ್ ನಂತರದ ಜಗತ್ತು ಮೊದಲಿನಂತಿಲ್ಲ. ಬ್ಯುಸಿಯಾಗಿ ನಾಗಾಲೋಟದಿಂದ ಓಡುತ್ತಿದ್ದ ಜಗತ್ತನ್ನು ಒಂದೆಡೆ ನಿಲ್ಲಿಸಿ ನಡುಗಿಸಿದ ಹೆಸರು ಕೋವಿಡ್‌ಗೇ ಸಲ್ಲುತ್ತದೆ. ಇಂದಿಗೂ ಕೋವಿಡ್‌ನ ದಿನಗಳನ್ನು ನೆನೆಸಿದರೆ ಕಾಲಿನಲ್ಲಿ ಸಣ್ಣಗೆ ನಡುಕ ಹುಟ್ಟಲಾರಂಭಿಸುತ್ತದೆ. ಲಕ್ಷಗಟ್ಟಲೆ ಮಂದಿಗೆ ಇನ್ನೂ ಕೋವಿಡ್‌ನ ಹೊಡೆತದಿಂದ ಸರಿಯಾಗಿ ಚೇತರಿಸಿಕೊಳ್ಳಲಾಗಿಲ್ಲ. ಹಲವರು ಇನ್ನೂ ಆರೋಗ್ಯದ ವಿಚಾರದಲ್ಲೂ ಸರಿಯಾಗಿ ಚೇತರಿಕೆ ಕಂಡಿಲ್ಲ. ಸದ್ಯ ಇಂತಹ ಒಂದು ಮನಕಲಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ವಿರುದ್ಧ ಹೋರಾಡಿ ಕೊನೆಗೂ ಬರೋಬ್ಬರಿ ಎರಡು ವರ್ಷದ ನಂತರ ಪೂರ್ಣ ಗುಣಮುಖವಾಗಿ ಹೊರ ಬಂದಾಕೆಯ (viral posrt) ವಿಡಿಯೋವಿದು.
ಕ್ಲಿವ್‌ಲ್ಯಾಂಡ್ ಕ್ಲಿನಿಕ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋನಲ್ಲಿ ಹೆಂಡರ್ಸನ್ ಎಂಬ ಮಹಿಳೆಯೊಬ್ಬಾಕೆ ಕಾಫಿ ಕಪ್ ಅನ್ನು ತನ್ನ ಮೂಗಿನ ಬಳಿ ಕೊಂಡೊಯ್ದು ಆನಂದಾಶ್ಚರ್ಯಗಳಿಂದ, ʻನನಗೀಗ ವಾಸನೆ ತಿಳಿಯುತ್ತಿದೆʼ ಎಂದು ಹೇಳುತ್ತಿರುವುದು ಕಾಣಿಸುತ್ತದೆ. ಆಕೆಯ ಕಂಪಿಸುವ ಧ್ವನಿ, ಕೊನೆಗೂ ವಾಸನೆಯನ್ನು ಗ್ರಹಿಸಿದ ಖುಷಿ, ಆಕೆಯ ಕಣ್ಣಿನಲ್ಲಿ ಕಾಣುತ್ತಿದೆ.
ಜನವರಿ ೨೦೨೧ರಲ್ಲಿ ಕೋವಿಡ್‌ನ ಲಕ್ಷಣಗಳು ಹೆಂಡರ್ಸನ್‌ಗೆ ಕಾಣಿಸಿಕೊಂಡಾಗ ಈ ಬಗ್ಗೆ ಪರೀಕ್ಷೆಗಳನ್ನು ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಈ ಕೋವಿಡ್ ತೊಂದರೆ ಬಹಳ ದೀರ್ಘ ಕಾಲ ಆಕೆಯನ್ನು ಬಾಧಿಸಿತ್ತಂತೆ. ಒಂದು ವರ್ಷದ ನಂತರವೂ ಇದು ಆಕೆಯನ್ನು ಬಾಧಿಸಿ ಕೊನೆಗೆ, ಎರಡು ವರ್ಷಗಳ ಕಾಲ ಆಕೆಗೆ ಕೋವಿಡ್‌ನ ಲಕ್ಷಣಗಳು ಮಾತ್ರ ಕಡಿಮೆಯಾಗಲಿಲ್ಲವಂತೆ. ಯಾವ ವಾಸನೆಗಳಿಗೂ ಸ್ಪಂದಿಸದ ಮೂಗು, ಯಾವ ರುಚಿಯನ್ನೂ ಹಿಡಿಯದ ನಾಲಿಗೆಯಿಂದಾಗಿ ಈಕೆ ಬಳಲಿ ಬೆಂಡಾಗಿದ್ದರಂತೆ. ಊಟ ಮಾಡಲು ಹೊರಟರೆ ಎಷ್ಟೇ ರುಚಿಕರ ಬಗೆಬಗೆಯ ಅಡುಗೆಗಳೂ ಸಹ ಕಸದ ತೊಟ್ಟಿಯ ವಾಸನೆಯಂತೆ ಕೆಟ್ಟ ವಾಸನೆಯೊಂದಿಗೆ ರುಚಿಹೀನವೆನಿಸುತ್ತಿತ್ತಂತೆ. ಕೋವಿಡ್‌ನ ಈ ತೊಂದರೆ ಸುಮಾರು ಎರಡು ವರ್ಷಗಳ ಕಾಲ ಎಷ್ಟು ತೊಂದರೆ ಕೊಟ್ಟಿತೆಂದರೆ, ಈಕೆ ಕೊನೆಗೂ ವಾಸನೆಯನ್ನು ಗ್ರಹಿಸುವ ತಾಕತ್ತನ್ನು ಪಡೆದುಕೊಂಡಿದ್ದು, ಈಕೆ ಕಾಫಿಯ ಪರಿಮಳವನ್ನು ಹೀರಿ ಸಂತೋಷದಿಂದ ವಾಸನೆ ತಿಳಿಯುತ್ತಿದೆ ಎಂದು ಹೇಳುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಮನಕಲಕುವಂತಿದೆ.
ʻರುಚಿ ಹಾಗೂ ವಾಸನೆಯನ್ನೇ ಕಳೆದುಕೊಂಡಿದ್ದು ನನಗೆ ಅತ್ಯಂತ ಬೇಸರ ತರಿಸುತ್ತಿತ್ತು. ಇದೇ ವಿಚಾರಕ್ಕೆ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದೆ. ಕುಟುಂಬದ ಜೊತೆ ಕುಳಿತು ಉಣ್ಣುವ ಅನುಭೂತಿ ರುಚಿಯಾಗಿರದಿದ್ದರೆ ಹೇಗೆ ದಕ್ಕೀತು ಹೇಳಿ? ಪ್ರೀತಿಪಾತ್ರರ ಜೊತೆಗೆ ಹೊರಗೆ ರೆಸ್ಟೋರೆಂಟಿಗೆ ಹೋಗಿ ಉಣ್ಣಲೂ ಕೂಡಾ ಮನಸ್ಸು ಬರುತ್ತಿರಲಿಲ್ಲ. ರುಚಿ, ವಾಸನೆ ತಿಳಿಯದ ಊಟ ಹೇಗೆ ಸಂತೋಷದ ಸಮಯ ತಂದೀತು? ನನ್ನ ಖುಷಿಯೆಲ್ಲ ಮಾಯವಾಗಿತ್ತು. ಎಲ್ಲರ ಜೊತೆಗೆ ಖುಷಿಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಯಾವತ್ತಿಗೂ ನಿಮ್ಮ ರುಚಿ ಹಾಗೂ ವಾಸನೆಯ ಇಂದ್ರಿಯಗಳನ್ನು ಕೀಳಾಗಿ ಕಾಣಬೇಡಿ. ಅವಕ್ಕೆ ಜೀವನದಲ್ಲಿ ಬಹಳ ಮಹತ್ವವಿದೆ ಎಂದು ಇದರಿಂದ ಅರಿವಾಯಿತುʼ ಎಂದು ಇಂಥದ್ದೇ ತೊಂದರೆಗೆ ಸಿಲುಕಿದ್ದ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರೂ ಕೂಡಾ ತಾನು ಮೂರು ವರ್ಷ ಇಂತಹ ತೊಂದರೆಯಲ್ಲಿದ್ದೆ ಎಂದು ಹೇಳಿದ್ದಾರೆ. ಕೋವಿಡ್ ನಂತರ ರುಚಿ ಹಾಗೂ ವಾಸನೆ ಗ್ರಹಿಸುವ ಶಕ್ತಿ ಮೊದಲಿನಷ್ಟು ತೀಕ್ಷ್ಣವಾಗಿಲ್ಲದಿರುವುದು ನಿಜಕU ಬಹಳ ನೋವನ್ನು ತರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: 5 ಸೆಕೆಂಡ್‌ನಲ್ಲಿ 4 ಸುತ್ತು ಫೈರಿಂಗ್ ಮಾಡಿದ ಮದುಮಗಳು! ಯುಪಿ ಪೊಲೀಸರು ಮಾಡಿದ್ದೇನು?