ಇನ್ನೊಬ್ಬರಿಗೆ ನಾವು ಕೊಡಬಹುದಾದ ಅದ್ಭುತ ಗಿಫ್ಟ್ ಎಂದರೆ ಜೀವದಾನ. ಜೀವದಾನ ನೀಡಬಲ್ಲ ಮಾರ್ಗ ಎಂದರೆ ಅದು ರಕ್ತದಾನ. ಅನಾರೋಗ್ಯದಲ್ಲಿದ್ದಾಗ, ರಕ್ತ ಪಡೆಯಬೇಕಾಗಿ ಬಂದಾಗ ಸಕಾಲದಲ್ಲಿ ರಕ್ತ ಸಿಕ್ಕಿ ಜೀವದ ಆಸೆ ಚಿಗುರಿದಾಗ ಆ ಭಾವವನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಜೀವದಾನದ ಪಡೆದ ಕ್ಷಣ ಅದನ್ನು ಅನುಭವಿಸಿದರಿಗಷ್ಟೇ ಗೊತ್ತು. ರಕ್ತದಾನ ಪಡೆದವರ ಮುಖದಲ್ಲಿ ಚಿಮ್ಮುವ ಕಾಂತಿ ರಕ್ತದಾನ ನೀಡಿದವರಿಗೆ ಧನ್ಯತಾ ಭಾವ. ಈಗ ಇಂತಹ ಧನ್ಯತಾ ಭಾವ 80ರ ಹರೆಯದ ಮಹಿಳೆಯೋರ್ವರದ್ದು. ಯಾಕೆಂದರೆ ತನ್ನ ಜೀವಮಾನವಿಡೀ ರಕ್ತದಾನದಲ್ಲೇ ಕಳೆದ ಈಕೆ ಇದೀಗ 80ರ ಹರೆಯದಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ರಕ್ತದಾನ ಮಾಡಿದ ಮಹಿಳೆ ಎಂಬ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಗಿನ್ನಿಸ್ ದಾಖಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ದಾಖಲಾದಂತೆ ಜೋಸೆಫಿನ್ ಮಿಚಾಲುಕ್ ಎಂಬ ಈ 80ರ ಹರೆಯದ ಮಹಿಳೆ ತನ್ನ ಜೀವಮಾನದಲ್ಲಿ 203 ಯುನಿಟ್ ರಕ್ತದಾನ ಮಾಡಿದ್ದು ಸಾವಿರಾರು ಮಂದಿಯ ಜೀವ ಉಳಿಸಿದ್ದಾರೆ. 1965ರಿಂದ ಅಂದರೆ ತನ್ನ 22ನೇ ವಯಸ್ಸಿನಲ್ಲಿಯೇ ರಕ್ತದಾನ ಮಾಡಲು ಆರಂಭಿಸಿದ್ದ ಈಕೆ, ಸುಮಾರು ಆರು ದಶಕಗಳಿಂದ ರಕ್ತದಾನ ಮಾಡುತ್ತಲೇ ಬಂದಿದ್ದಾರಂತೆ!
ಒಂದು ಯುನಿಟ್ ರಕ್ತ ಅಂದರೆ 473 ಎಂ ಎಲ್ ಎಂಬ ಅಂದಾಜಿನಂತೆ ಈಕೆ ಈವರೆಗೆ ದಾನ ಮಾಡಿದ ರಕ್ತ 96,019 ಎಂಎಲ್. ಅಂದರೆ 96 ಲೀಟರ್‌ಗಳು.
ತನ್ನ ಸಹೋದರಿಯ ಪ್ರೇರಣೆಯಿಂದ ನಾನು ರಕ್ತದಾನ ಮಾಡಲು ಆರಂಭಿಸಿದೆ. ಅಗತ್ಯ ಇರುವ ಮಂದಿಗೆ ನಾನೂ ರಕ್ತ ನೀಡಬೇಕು ಎಂದು ಅನಿಸಿತು. ಹೀಗಾಗಿ ನಾನು 22ನೇ ವಯಸ್ಸಿನಲ್ಲಿಯೇ ರಕ್ತದಾನ ಮಾಡಲು ಆರಂಭಿಸಿದೆ ಎಂದು ಆಕೆ ಹೇಳಿದ್ದಾರೆ.
ಇದನ್ನೂ ಓದಿ: Viral Video : ತಾಯಿಯನ್ನು ತಬ್ಬಿ ಹಿಡಿದ ನವಜಾತ ಶಿಶು; ಮುದ್ದಾಗಿದೆ ನೋಡಿ ಈ ವಿಡಿಯೊ
ವಿಶೇಷವೆಂದರೆ, ಈಕೆ ತನ್ನ 80ನೇ ಇಳಿ ವಯಸ್ಸಿನಲ್ಲೂ ರಕ್ತದಾನ ಮಾಡುತ್ತಿರುವುದು! ರಕ್ತದಾನಕ್ಕೆ ಗರಿಷ್ಠ ವಯಸ್ಸಿನ ಮಿತಿಯಿಲ್ಲದುದರಿಂದ ಹಾಗೂ ಆರೋಗ್ಯ ಸರಿಯಾಗಿದ್ದರೆ, ಎಷ್ಟು ವಯಸ್ಸಾದರೂ ಕೊಡಬಹುದಾದ್ದರಿಂದ ನಾಲ್ಕು ಬಾರಿ ವರ್ಷಕ್ಕೆ ಈಕೆ ತನ್ನ ರಕ್ತದಾನ ಮಾಡುತ್ತಿದ್ದಾರಂತೆ.
ಈಕೆ ಹೆಚ್ಚು ಹೆಚ್ಚು ಮಂದಿ ರಕ್ರದಾನ ಮಾಡುವಂತೆ ಪ್ರೇರಣೆ ನೀಡುತ್ತಿದ್ದು, ತಾನು ಎಂದಿಗೂ ಈ ವಿಚಾರದಲ್ಲಿ ದಾಖಲೆ ನಿರ್ಮಿಸುತ್ತೇನೆ ಎಂದು ಭಾವಿಸಿರಲಿಲ್ಲ. ಇದು ನನಗೂ ಹೊಸದು. ರಕ್ತ ನೀಡುವುದನ್ನು ಮಾತ್ರ ಮುಂದುವರಿಸಿಕೊಂಡು ಬಂದಿದ್ದೆ ಎಂದು ಆಕೆ ಹೇಳಿದ್ದಾರೆ. ಈ ಹಿಂದೆ ಈ ಗಿನ್ನಿಸ್ ದಾಖಲೆ ಭಾರತದ ಮಧುರಾ ಅಶೋಕ್ ಕುಮಾರ್ ಅವರ ಹೆಸರಲ್ಲಿದ್ದು, ಮಧುರಾ ಅವರು 117 ಯುನಿಟ್ ರಕ್ತದಾನ ಮಾಡಿದ್ದರು. ಈಗ ಅದನ್ನು ಯುಎಸ್‌ನ ಜೋಸೆಫಿನ್ ಮಿಚಾಲುಕ್ ಮುರಿದಿದ್ದಾರೆ.
ಇದನ್ನೂ ಓದಿ: Viral Video : ಬಿಸಿ ಕಾವಲಿ ಮೇಲೆ ಕುಳಿತು ಆಶೀರ್ವದಿಸುವ ಬಾಬಾ! ಇಲ್ಲಿದೆ ನೋಡಿ ವಿಡಿಯೊ