ಮಂಗಗಳನ್ನು ದೇವರಂತೆ ಕಾಣುವ ಪದ್ಧತಿ, ನಂಬಿಕೆ ಹೊಸತೇನಲ್ಲ. ಮಂಗಗಳಿಗೆ ನೈವೇದ್ಯ ಕೊಟ್ಟ ಮೇಲಷ್ಟೇ ಪೂಜೆ ನಡೆಯುವ ದೇವಸ್ಥಾನಗಳ ಬಗೆಗೂ ನಮಗೆ ಗೊತ್ತು. ಎಷ್ಟೋ ಊರುಗಳಲ್ಲಿ ಮಂಗಗಳು ಕಾಡು ಬಿಟ್ಟು ನಾಡಿಗೆ ಬಂದು ತೋಟಗಳಲ್ಲಿ ದಾಂಧಲೆ ನಡೆಸಿದರೂ, ಜನರು ಸಹಬಾಳ್ವೆ ನಡೆಸಿಕೊಂಡು ಹೋಗುವ ಉದಾಹರಣೆಗಳು ಸಾಕಷ್ಟಿವೆ. ಪುರಾಣಗಳಲ್ಲಿ ಮಂಗಗಳೂ ಸ್ಥಾನ ಪಡೆದಿರುವುದರಿಂದಲೂ, ಮಂಗಗಳನ್ನು ಹನುಮಂತನ ಸ್ವರೂಪದಲ್ಲಿ ನೋಡುವುದರಿಂದಲೋ ಏನೋ, ಮಂಗಗಳು ಭಾರತೀಯರ ಬದುಕಿನಲ್ಲಿ ಇಂದಿಗೂ ತಮ್ಮದೇ ಆದ ಸ್ಥಾನ ಪಡೆದಿವೆ. ಆದರೆ, ಈ ಒಂದು ಹಳ್ಳಿಯ ಪಕ್ಕ ಮಂಗಗಳಿಗೆಂದೇ ರಾಜ್ಯವೊಂದಿದೆ. ಇಲ್ಲಿ ಮಂಗಗಳೇ ಭೂಮಿಯ ಒಡೆಯರು!
ಹೌದು, ನಂಬಿದರೆ ನಂಬಿ ಬಿಟ್ಟರೆ ಬಿಟ್ಟರೆ ಬಿಡಿ. ಮಹಾರಾಷ್ಟ್ರದ ಔರಂಗಬಾದ್‌ನ ಒಸ್ಮಾನಾಬಾದ್ ಜಿಲ್ಲೆಯ ಉಪ್ಲಾ ಎಂಬ ಹಳ್ಳಿಯೊಂದಿದೆ. ಈ ಹಳ್ಳಿಯಲ್ಲಿ ೩೨ ಎಕರೆ ಜಮೀನಿನ ಒಡೆಯರು ಮಂಗಗಳಂತೆ! ಆಶ್ಚರ್ಯ ಎನಿಸಿದರೂ ಸತ್ಯವೇ. ಈ ಭೂಮಿಯ ಮೇಲೆ ಹಳ್ಳಿಗರಿಗೆ ಅಧಿಕಾರವಿಲ್ಲವಂತೆ. ಮಂಗಗಳೇ ಅಧಿಪತಿಗಳು. ಈ ಮಂಗಗಳು ತಮ್ಮ ಈ ಭೂಮಿಯಿಂದ ಈ ಹಳ್ಳಿಯಲ್ಲಿರುವ ಮಂದಿಯ ಮನೆಬಾಗಿಲಿಗೆ ಬಂದರೆ, ಈ ಹಳ್ಳಿಗರು ಊಟ ತಿಂಡಿ ತೀರ್ಥ ಕೊಟ್ಟು ಮರ್ಯಾದೆಯಿಂದ ಕಳಿಸುತ್ತಾರಂತೆ.
ಉಪ್ಲಾದಲ್ಲಿ ಮಂಗಗಳಿಗೆಂದೇ ೩೨ ಎಕರೆ ಭೂಮಿಯನ್ನು ಈ ಮೊದಲೇ ನೀಡಲಾಗಿದ್ದು, ಈ ಹಳ್ಳಿಯ ಜನತೆ ತಮ್ಮೂರಿನ ಮಂಗಗಳನ್ನು ಪ್ರೀತ್ಯಾದರಗಳಿಂದ ಕಾಣುತ್ತಾರೆ. ಮನೆಗೆ ಬಂದರೆ ಊಟ ತಿಂಡಿ ಕೊಟ್ಟು ಕಳಿಸುವುದಷ್ಟೇ ಅಲ್ಲ, ಮದುವೆಗಳಲ್ಲಿ ವಿಶೇಷ ಗೌರವವೂ ನೀಡುವ ಸಂಪ್ರದಾಯವೂ ಇದೆಯಂತೆ.
ಕೇವಲ ಬಾಯಿ ಮಾತಲ್ಲಿ ಮಂಗಗಳಿಗೆ ಜಮೀನು ನೀಡಿಲ್ಲ. ದಾಖಲೆ ಪತ್ರಗಳಲ್ಲೂ ಇದನ್ನು ಉಲ್ಲೇಖಿಸಲಾಗಿದೆಯಂತೆ. ಈ ಹಳ್ಳಿಯ ಸರ್‌ಪಂಚ್ ಬಪ್ಪ ಪದ್ವಾಲ್ ಸುದ್ದಿಸಂಸ್ಥೆ ಪಿಟಿಐಗೆ ಹೇಳಿರುವ ಪ್ರಕಾರ, ದಾಖಲೆಗಳಲ್ಲಿ ೩೨ ಎಕರೆ ಜಮೀನು ಮಂಗಗಳಿಗೆ ಸೇರಿದ್ದೆಂದು ಹೇಳಲಾಗಿದೆ. ಪ್ರಾಣಿಗಳಿಗೆ ಹೀಗೆ ಯಾಕೆ ಕೊಟ್ಟಿರುವರೆಂಬ ಬಗ್ಗೆ ನಮಗೆ ಸರಿಯಾಗಿ ತಿಳಿದಿಲ್ಲ. ಆದರೆ, ಹಾಗೆ ಪರಿಗಣಿಸುವುದು ನಿಜ ಎಂದು ಅವರು ವಿವರಿಸಿದ್ದಾರೆ.
ಬಹಳ ಹಿಂದೆ ಮಂಗಗಳು ಈ ಹಳ್ಳಿಯ ಎಲ್ಲ ಸಂಪ್ರದಾಯದಲ್ಲೂ ಮುಖ್ಯ ಪಾತ್ರ ವಹಿಸುತ್ತಿದ್ದವು. ಸುಮಾರು ೧೦೦ಕ್ಕೂ ಹೆಚ್ಚು ಮಂಗಗಳು ಈ ಹಳ್ಳಿಯಲ್ಲಿವೆ. ಮೊದಲಿನಿಂದಲೂ ಇವು ಇವೆಯಾದರೂ ಇತ್ತೀಚೆಗೆ ಈ ಸಂಖ್ಯೆ ಕಡಿಮೆಯಾಗಿದೆ. ಮಂಗಗಳು ವಲಸೆ ಹೋಗುವುದು, ಗುಂಪಿನಿಂದ ಬೇರ್ಪಟ್ಟು ಬೇರೆಡೆಗೆ ಹೋಗುವುದು ಸಾಮಾನ್ಯವಾದ್ದರಿಂದ ಈಚೆಗೆ ಈ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ಸಂಪ್ರದಾಯಗಳನ್ನು ಇಂದಿಗೂ ಈ ಹಳ್ಳಿ ಪಾಲಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ | Keerthi Suresh | ಮೈಚಳಿ ಬಿಟ್ಟು ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ಕೀರ್ತಿ ಸುರೇಶ್: ವಿಡಿಯೊ ವೈರಲ್!
ಮೊದಲೆಲ್ಲ ಈ ಹಳ್ಳಿಯಲ್ಲಿ ಒಂದು ಮದುವೆ ಸಮಾರಂಭವಿದ್ದರೂ ಮೊದಲು ಗಿಫ್ಟ್ ಕೊಡುತ್ತಿದ್ದುದು ಮಂಗಗಳಿಗಂತೆ. ಈ ಗಿಫ್ಟ್ ನೀಡಿದ ನಂತರವಷ್ಟೆ ಮದುವೆಯ ಆಚರಣೆಗಳು ಆರಂಭವಾಗುತ್ತಿದ್ದವಂತೆ. ಆದರೆ, ಈಗ ಅಂಥ ಆಚರಣೆಗಳು ಕಡಿಮೆಯಾಗಿದ್ದು, ಕೆಲವರು ಮಾತ್ರ ಇದನ್ನು ಜೀವಂತವಾಗಿರಿಸಿದ್ದಾರೆ. ಬಹುತೇಕರು ಇಂಥ ಆಚರಣೆ ಈಗ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಆದರೂ, ಯಾರದೇ ಮನೆಯ ಮುಂದೆ ಮಂಗಗಳು ನೆರೆದರೆ, ಈಗಲೂ ಮಂಗಗಳಿಗೆ ಆಹಾರ ನೀಡುವ ಪದ್ಧತಿ ಮಾತ್ರ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಇದೀಗ ಮಂಗಗಳಿಗೆಂದೇ ಮೀಸಲಿಟ್ಟ ಜಾಗದಲ್ಲಿ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ ಎನ್ನಲಾಗಿದೆ. ಮೊದಲು ಈ ಜಾಗದಲ್ಲೊಂದು ಪಾಳುಬಿದ್ದ ಮನೆಯೂ ಇದ್ದರೂ ಈಗದು ಸಂಪೂರ್ಣ ನೆಲಸಮವಾಗಿದೆ ಎಂದು ಆ ಊರಿನ ಸರ್‌ಪಂಚ್ ಹೇಳಿದ್ದಾರೆ.
ಇದನ್ನೂ ಓದಿ | Baby Bump | ಹಾರ್ಲೇ ಡೇವಿಡ್ಸನ್ ಬೈಕ್ ರೈಡ್ ಮಾಡಿದ ಗರ್ಭಿಣಿ; ಬೇಬಿ ಬಂಪ್ ಫೋಟೊ ಶೂಟ್ ವೈರಲ್